ಅಡುಗೆ ಎಣ್ಣೆ ಮರುಬಳಕೆಗೆ ಕಡಿವಾಣ; ರಾಜ್ಯಾದ್ಯಂತ ಟ್ರೇಸಬಿಲಿಟಿ ಆ್ಯಪ್ ಜಾರಿ : ಸಚಿವ ಯು.ಟಿ. ಖಾದರ್ – vishwanews24

Featured, ರಾಜ್ಯ ನ್ಯೂಸ್

ಅಡುಗೆ ಎಣ್ಣೆ ಮರುಬಳಕೆಗೆ ಕಡಿವಾಣ; ರಾಜ್ಯಾದ್ಯಂತ ಟ್ರೇಸಬಿಲಿಟಿ ಆ್ಯಪ್ ಜಾರಿ : ಸಚಿವ ಯು.ಟಿ.ಖಾದರ್

ಬೆಂಗಳೂರು : ಹೋಟೆಲ್, ರೆಸ್ಟೋರೆಂಟ್ ಹಾಗೂ ಬೇಕರಿಗಳಲ್ಲಿ ಬಳಸಿದ ಅಡುಗೆ ಎಣ್ಣೆಯನ್ನು ಪದೇಪದೇ ಕಾಯಿಸಿ ಆಹಾರ ತಯಾರಿಸುವುದರಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳಿಗೆ ಕಡಿವಾಣ ಹಾಕಲು ರಾಜ್ಯಾದ್ಯಂತ ಟ್ರೇಸಬಿಲಿಟಿ ಆ್ಯಪ್ ಜಾರಿಗೆ ತರಲು ರಾಜ್ಯ ಸರಕಾರ ನಿರ್ಧರಿಸಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

ನಗರದ ಆರೋಗ್ಯ ಸೌಧದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಮೂಲಕ ಈ ವ್ಯವಸ್ಥೆ ಜಾರಿಗೆ ಬರಲಿದೆ. ಇದರಡಿ ಆಹಾರ ಉದ್ದಿಮೆದಾರರು ಬಳಸಿದ ಅಡುಗೆ ಎಣ್ಣೆಯನ್ನು ಎಫ್‍ಎಸ್‍ಎಸ್‍ಎಐ ಮಾನ್ಯತೆ ಪಡೆದ ಆರ್‍ಯುಸಿಒ ಏಜೆನ್ಸಿಗಳ ಮೂಲಕವೇ ವಿಲೇವಾರಿ ಮಾಡುವುದು ಕಡ್ಡಾಯವಾಗಲಿದೆ ಎಂದರು.

ಬೆಳ್ತಂಗಡಿ: ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ​​ಬಳಿ ಮಾನವನ ತಲೆಬುರುಡೆ ಪತ್ತೆ! vishwanews24

ಆ್ಯಪ್ ಮೂಲಕ ಬಳಸಿದ ಎಣ್ಣೆಯ ಸಂಗ್ರಹ, ಸಾಗಣೆ ಹಾಗೂ ವಿಲೇವಾರಿಯ ಪ್ರತಿಯೊಂದು ಹಂತದ ವಿವರ ದಾಖಲೆಯಾಗಲಿದೆ. ಇದರಿಂದ ಸಂಗ್ರಹಿಸಿದ ಎಣ್ಣೆಯನ್ನು ಮತ್ತೆ ಆಹಾರ ತಯಾರಿಕೆಗೆ ಬಳಸುವುದನ್ನು ತಡೆಯಲು ಸಾಧ್ಯವಾಗಲಿದೆ. ಉದಾಹರಣೆಗೆ, ಹೋಟೆಲ್‍ವೊಂದು 300ರಿಂದ 400 ಲೀಟರ್ ಅಡುಗೆ ಎಣ್ಣೆ ಖರೀದಿಸಿದರೆ, ಕನಿಷ್ಠ 75ರಿಂದ 100 ಲೀಟರ್ ಬಳಸಿದ ಎಣ್ಣೆ ವಾಪಸ್ ಸಂಗ್ರಹವಾಗಬೇಕು. 100 ಲೀಟರ್ ಎಣ್ಣೆಗೆ ಕನಿಷ್ಠ 15 ಲೀಟರ್ ಬಳಸಿದ ಎಣ್ಣೆಯ ಲೆಕ್ಕ ಸಿಗಬೇಕು. ಸಂಗ್ರಹಿಸಿದ ಎಣ್ಣೆಯನ್ನು ಸಣ್ಣ ಹೋಟೆಲ್‍ಗಳಿಗೆ ಮರುಮಾರಾಟ ಮಾಡುವುದನ್ನು ತಡೆಯುವುದು ಈ ವ್ಯವಸ್ಥೆಯ ಉದ್ದೇಶ ಎಂದು ಖಾದರ್ ಹೇಳಿದರು.

ಬೆಂಗಳೂರು, ಮಂಗಳೂರು, ಮೈಸೂರು ಹಾಗೂ ಹುಬ್ಬಳ್ಳಿಯಲ್ಲಿ ಆರಂಭಿಕ ಸಂಗ್ರಹ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಅಲ್ಲಿಂದ ಬಳಸಿದ ಎಣ್ಣೆಯನ್ನು ಬಯೋಡೀಸೆಲ್ ಅಥವಾ ಸೋಪ್ ತಯಾರಿಕೆಯಂತಹ ಉದ್ದೇಶಗಳಿಗೆ ಕಳುಹಿಸಲಾಗುವುದು. ಯಾವುದೇ ಕಾರಣಕ್ಕೂ ಅದು ಮತ್ತೆ ಆಹಾರ ತಯಾರಿಕೆಗೆ ಬಳಕೆಯಾಗದಂತೆ ಹಾಗೂ ಚರಂಡಿ, ಹಳ್ಳಗಳಿಗೆ ಸೇರದಂತೆ ನಿಗಾ ವಹಿಸಲಾಗುವುದು ಎಂದು ಅವರು ತಿಳಿಸಿದರು.

ಉಡುಪಿ ಶ್ರೀಕೃಷ್ಣ ಮಠಕ್ಕೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭೇಟಿ – vishwanews24

ಕರಿದ ಎಣ್ಣೆಯ ಗುಣಮಟ್ಟ ಪರೀಕ್ಷಿಸಲು ಇಲಾಖೆಯ ಅಧಿಕಾರಿಗಳಿಗೆ ಈಗಾಗಲೇ ಟಿಪಿಸಿ ಮೀಟರ್‍ಗಳನ್ನು ನೀಡಲಾಗಿದೆ. ಎಣ್ಣೆಯಲ್ಲಿನ ಟಿಪಿಸಿ ಪ್ರಮಾಣ 25 ಮೀರಿದರೆ ಅದನ್ನು ಅಡುಗೆಗೆ ಬಳಸುವಂತಿಲ್ಲ. 2022ರಿಂದ ಇಲ್ಲಿಯವರೆಗೆ ರಾಜ್ಯದಲ್ಲಿ 91 ಲಕ್ಷಕ್ಕೂ ಹೆಚ್ಚು ಲೀಟರ್ ಬಳಸಿದ ಅಡುಗೆ ಎಣ್ಣೆಯನ್ನು ಸಂಗ್ರಹಿಸಲಾಗಿದೆ. ಮುಂದಿನ ಹಂತದಲ್ಲಿ ಮನೆಗಳಲ್ಲಿ ಬಳಸುವ ಅಡುಗೆ ಎಣ್ಣೆಯ ಸಂಗ್ರಹಕ್ಕೂ ವ್ಯವಸ್ಥೆ ರೂಪಿಸಲಾಗುವುದು ಎಂದು ಸಚಿವರು ಹೇಳಿದರು.

ಹಸಿ ಕಸ ಮತ್ತು ಒಣ ಕಸ ಸಂಗ್ರಹಿಸುವ ಮಾದರಿಯಲ್ಲಿ ಮನೆಮನೆಗಳಿಂದ ಬಳಸಿದ ಎಣ್ಣೆಯನ್ನು ಸಂಗ್ರಹಿಸಿ ಸೂಕ್ತವಾಗಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗುವುದು. ಈ ಸಂಬಂಧ ನ.25ರಂದು ಬೆಂಗಳೂರಿನಲ್ಲಿ ರಾಷ್ಟ್ರಮಟ್ಟದ ಸಭೆ ಹಾಗೂ ನ.26ರಂದು ವಿವಿಧ ರಾಜ್ಯಗಳ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಅಧಿಕಾರಿಗಳ ಸಮ್ಮೇಳನ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಬಳಸಿದ ಅಡುಗೆ ಎಣ್ಣೆಯನ್ನು ಮತ್ತೆ ಆಹಾರ ತಯಾರಿಕೆಗೆ ಬಳಸುತ್ತಿರುವುದು ಸಾರ್ವಜನಿಕರ ಗಮನಕ್ಕೆ ಬಂದರೆ ಆಹಾರ ಸುರಕ್ಷತಾ ಇಲಾಖೆಯ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ದೂರು ಸಲ್ಲಿಸಬಹುದು. ಸುರಕ್ಷಿತ ಆಹಾರ ಒದಗಿಸುವುದು ಪ್ರತಿಯೊಬ್ಬ ನಾಗರಿಕನ ಹಕ್ಕಾಗಿದ್ದು, ಈ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಯು.ಟಿ.ಖಾದರ್ ತಿಳಿಸಿದರು.

ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ಮೋದಿ: ಸಿಎಂ ಡಿಕೆಶಿ ಸ್ವಾಗತ – vishwanews24

Leave a Reply