ಅಮೆರಿಕದ ಪ್ರತಿಷ್ಠಿತ ಗ್ರ್ಯಾಂಡ್ ಚೆಸ್ ಟೂರ್ ಗೆದ್ದು ಇತಿಹಾಸ ನಿರ್ಮಿಸಿದ ಪ್ರಜ್ಞಾನಂದ – vishwanews24
ಅಮೆರಿಕದ ಪ್ರತಿಷ್ಠಿತ ಗ್ರ್ಯಾಂಡ್ ಚೆಸ್ ಟೂರ್ ಗೆದ್ದು ಇತಿಹಾಸ ನಿರ್ಮಿಸಿದ ಪ್ರಜ್ಞಾನಂದ
ವಾಷಿಂಗ್ಟನ್: ಭಾರತದ ಯುವ ಗ್ರ್ಯಾಂಡ್ಮಾಸ್ಟರ್ ಆರ್. ಪ್ರಜ್ಞಾನಂದ ಅವರು ಸೈಂಟ್ ಲೂಯಿಸ್ನಲ್ಲಿ ನಡೆದ ಅಮೆರಿಕದ ಪ್ರತಿಷ್ಠಿತ ಗ್ರ್ಯಾಂಡ್ ಚೆಸ್ ಟೂರ್ ಪ್ರಶಸ್ತಿಯನ್ನು ಮುಡಿಗೇರಿಸಿ ಇತಿಹಾಸ ಬರೆದಿದ್ದಾರೆ.
ಈ ಮೂಲಕ ತಮ್ಮ ವೃತ್ತಿಜೀವನದ ಅತಿ ದೊಡ್ಡ ಪ್ರಶಸ್ತಿಯನ್ನು ಗೆದ್ದ ಪ್ರಜ್ಞಾನಂದ, ಗ್ರ್ಯಾಂಡ್ ಚೆಸ್ ಟೂರ್ ಗೆದ್ದ ಭಾರತದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಫೈನಲ್ನಲ್ಲಿ ಅಮೆರಿಕದ ಫ್ಯಾಬಿಯಾನೊ ಕರುವಾನಾ ವಿರುದ್ಧ ಅಸಾಧಾರಣ ಕಮ್ಬ್ಯಾಕ್ ಮಾಡಿ ಚಾಂಪಿಯನ್ ಪಟ್ಟ ಅಲಂಕರಿಸಿದ ಪ್ರಜ್ಞಾನಂದ ಅವರಿಗೆ 2 ಲಕ್ಷ ಡಾಲರ್ (ಸುಮಾರು 1.67 ಕೋಟಿ ರೂ.ಗೂ ಹೆಚ್ಚು) ನಗದು ಬಹುಮಾನ ಲಭಿಸಿದೆ.
ಮೈಸೂರು ದಸರಾಕ್ಕೆ ಅದ್ದೂರಿ ಸಿದ್ಧತೆ : ಅರಮನೆ ಪ್ರವೇಶಿಸಿದ ಗಜಪಡೆಗೆ ಭರ್ಜರಿ ಸ್ವಾಗತ – vishwanews24
ಕ್ಲಾಸಿಕಲ್ ಸುತ್ತಿನ ಪಂದ್ಯಗಳ ನಂತರ ಫ್ಯಾಬಿಯಾನೊ ಕರುವಾನಾ 6 ಪಾಯಿಂಟ್ಗಳ ಭರ್ಜರಿ ಮುನ್ನಡೆಯೊಂದಿಗೆ ಫೈನಲ್ ದಿನದಾಟಕ್ಕೆ ಪ್ರವೇಶಿಸಿದ್ದರು. ಆದರೆ ರ್ಯಾಪಿಡ್ ವಿಭಾಗದಲ್ಲಿ ಅದ್ಭುತ ಆಟ ಪ್ರದರ್ಶಿಸಿದ ಪ್ರಜ್ಞಾನಂದ, ಎರಡೂ ಪಂದ್ಯಗಳನ್ನು ಗೆದ್ದು ಪಂದ್ಯದ ಚಿತ್ರಣವನ್ನೇ ಬದಲಿಸಿದರು.
ಮುನ್ನಡೆ ಕಾಯ್ದುಕೊಳ್ಳಲು ಭಾರತದ ಆಟಗಾರನಿಗೆ 4 ಪಂದ್ಯಗಳ ಬ್ಲಿಟ್ಜ್ ಹಂತ ನಿರ್ಣಾಯಕವಾಗಿತ್ತು. ಮೊದಲ ಬ್ಲಿಟ್ಜ್ ಪಂದ್ಯದಲ್ಲಿ ಪ್ರಜ್ಞಾನಂದ ಗೆಲುವಿನ ಅವಕಾಶ ಹೊಂದಿದ್ದರೂ, ಸಮಯದ ಒತ್ತಡದಲ್ಲಿ ಎಡವಿ ಸಂಕಷ್ಟಕ್ಕೆ ಸಿಲುಕಿದರು. ಆದರೆ ಕರುವಾನಾಗೆ ಗೆಲುವಿನ ನಡೆಗಳನ್ನು ಕಂಡುಕೊಳ್ಳಲು ಸಾಧ್ಯವಾಗದೆ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತು. ಅಂತಿಮವಾಗಿ ಬ್ಲಿಟ್ಜ್ ಹಂತದಲ್ಲಿ ಸಮಬಲ ಸಾಧಿಸಿದ ಪ್ರಜ್ಞಾನಂದ ಒಟ್ಟಾರೆ 15-13 ಅಂಕಗಳ ಅಂತರದಿಂದ ರೋಚಕ ಜಯ ದಾಖಲಿಸಿ ಇತಿಹಾಸ ನಿರ್ಮಿಸಿದರು.
ಫೈನಲ್ ಪಂದ್ಯದ ಆರಂಭದಲ್ಲಿ ಕರುವಾನಾ ಅವರದ್ದೇ ಸಂಪೂರ್ಣ ಪ್ರಾಬಲ್ಯವಿತ್ತು. ಮೊದಲ ಕ್ಲಾಸಿಕಲ್ ಗೇಮ್ನಲ್ಲಿ ಪ್ರಜ್ಞಾನಂದ 6-0 ಅಂತರದಲ್ಲಿ ಸೋಲನುಭವಿಸಿ ಭಾರೀ ಹಿನ್ನಡೆ ಕಂಡಿದ್ದರು. ನಂತರ ಎರಡನೇ ಕ್ಲಾಸಿಕಲ್ ಗೇಮ್ನಲ್ಲಿ 3-3 ಡ್ರಾ ಸಾಧಿಸುವ ಮೂಲಕ ತಿರುಗೇಟು ನೀಡಿದರು. ಆದಾಗ್ಯೂ, ಕರುವಾನಾ ಅಂತಿಮ ದಿನಕ್ಕೆ 6 ಪಾಯಿಂಟ್ಗಳ ಮುನ್ನಡೆಯೊಂದಿಗೆ ಪ್ರವೇಶಿಸಿದ್ದರು. ಆದರೆ ರ್ಯಾಪಿಡ್ ಸುತ್ತಿನಲ್ಲಿ ಪ್ರಜ್ಞಾನಂದ ತೋರಿದ ಸಂಘಟಿತ ಆಟ ಎಲ್ಲ ಲೆಕ್ಕಾಚಾರಗಳನ್ನು ಉಲ್ಟಾ ಮಾಡಿತು.
ಈ ಗೆಲುವಿನೊಂದಿಗೆ ಪ್ರಜ್ಞಾನಂದ ಗ್ರ್ಯಾಂಡ್ ಚೆಸ್ ಟೂರ್ ಚಾಂಪಿಯನ್ ಆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ದೇಶದ ಚೆಸ್ ಇತಿಹಾಸದಲ್ಲಿ ಸುವರ್ಣ ಅಧ್ಯಾಯ ಬರೆದಿದ್ದಾರೆ.
2019 – 2023ರ ವರೆಗೆ ಮುಡಾದಿಂದ ಹಂಚಿಕೆಯಾದ ಎಲ್ಲಾ 50:50 ಸೈಟುಗಳು ರದ್ದು : ಯತೀಂದ್ರ ಸಿದ್ದರಾಮಯ್ಯ – vishwanews24
