ಉಡುಪಿ : ಈ ಬಾರಿ ಕೃಷ್ಣ ಜನ್ಮಾಷ್ಟಮಿ ಗೆ ‘ಮರ್ಮೆನ್’ ಅವತಾರದಲ್ಲಿ ರವಿ ಕಟಪಾಡಿ -vishwanews24
ಉಡುಪಿ : ಈ ಬಾರಿ ಕೃಷ್ಣ ಜನ್ಮಾಷ್ಟಮಿ ಗೆ ‘ಮರ್ಮೆನ್’ ಅವತಾರದಲ್ಲಿ ರವಿ ಕಟಪಾಡಿ
ಉಡುಪಿ: ವಿಭಿನ್ನ ವೇಷ ಧರಿಸಿ ಜನರನ್ನು ರಂಜಿಸುವುದರ ಜತೆಗೆ ಅನಾರೋಗ್ಯಪೀಡಿತ ಮಕ್ಕಳ ಚಿಕಿತ್ಸೆಗೆ ನೆರವಾಗುತ್ತಿರುವ ಉಡುಪಿಯ ರವಿ ಕಟಪಾಡಿ, ಈ ಬಾರಿ ಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ ಕೊನೆಯ ಬಾರಿಗೆ ವೇಷ ಧರಿಸಲಿದ್ದಾರೆ.
ಕಳೆದ 14 ವರ್ಷಗಳಿಂದ ಜನ್ಮಾಷ್ಟಮಿ ಸಂದರ್ಭದಲ್ಲಿ ವಿಶೇಷ ವೇಷ ಧರಿಸಿ ದೇಣಿಗೆ ಸಂಗ್ರಹಿಸಿ ಮಕ್ಕಳ ಚಿಕಿತ್ಸೆಗೆ ನೀಡುತ್ತಿರುವ ರವಿ, ಈ ಬಾರಿ ಸಮುದ್ರ ಜೀವಿಯ ವಿಶಿಷ್ಟ ರೂಪವಾದ ‘ಮರ್ಮೆನ್’ ವೇಷದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸೆಪ್ಟೆಂಬರ್ 4 ಮತ್ತು 5ರಂದು ವೇಷ ಧರಿಸಿ ಉಡುಪಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚರಿಸಿ ಹಣ ಸಂಗ್ರಹಿಸಲು ತಂಡ ನಿರ್ಧರಿಸಿದೆ.
ಕಳೆದ 10 ವರ್ಷಗಳಲ್ಲಿ ರವಿ ಮತ್ತು ಅವರ ತಂಡ ₹1.85 ಕೋಟಿ ಸಂಗ್ರಹಿಸಿ 204 ಅನಾರೋಗ್ಯಪೀಡಿತ ಮಕ್ಕಳ ಚಿಕಿತ್ಸೆಗೆ ನೆರವು ನೀಡಿದೆ. ಈ ಸೇವಾ ಅಭಿಯಾನ ಇದೀಗ 15ನೇ ವರ್ಷಕ್ಕೆ ಕಾಲಿಡುತ್ತಿದೆ. ಈ ಬಾರಿ ಸಂಗ್ರಹವಾಗುವ ಹಣವನ್ನು ಕ್ಯಾನ್ಸರ್‌ನಿಂದ ಬಳಲುತ್ತಿರುವ ಮಕ್ಕಳ ಚಿಕಿತ್ಸೆಗೆ ಬಳಸಲು ಉದ್ದೇಶಿಸಲಾಗಿದೆ.
ಆರೋಗ್ಯದ ಮೇಲಿನ ಒತ್ತಡ ಹಾಗೂ ವೇಷಧಾರಣೆಯ ವೇಳೆ ಎದುರಾಗುವ ಹಲವು ಸಮಸ್ಯೆಗಳ ಹಿನ್ನೆಲೆಯಲ್ಲಿ ಇನ್ನು ಮುಂದೆ ಜನ್ಮಾಷ್ಟಮಿ ಸಂದರ್ಭದಲ್ಲಿ ವೇಷ ಧರಿಸದಿರಲು ರವಿ ಹಾಗೂ ಅವರ ತಂಡ ನಿರ್ಧರಿಸಿದೆ. ಹೀಗಾಗಿ ಈ ಬಾರಿಯ ವೇಷಧಾರಣೆ ಭಾವುಕ ವಿದಾಯವಾಗಲಿದೆ.
ವೇಷಧಾರಣೆಗೆ ತೆರೆ ಬೀಳುತ್ತಿದ್ದರೂ, ಮಕ್ಕಳ ಚಿಕಿತ್ಸೆಗೆ ನೆರವಾಗುವ ಸೇವಾ ಕಾರ್ಯವನ್ನು ಮುಂದುವರಿಸುವುದಾಗಿ ರವಿ ತಿಳಿಸಿದ್ದಾರೆ. ಈ ಬಾರಿ ಹೆಚ್ಚಿನ ದೇಣಿಗೆ ನೀಡುವ ಮೂಲಕ ಕೈಜೋಡಿಸುವಂತೆ ಅವರು ದಾನಿಗಳಲ್ಲಿ ಮನವಿ ಮಾಡಿದ್ದಾರೆ.
