ಉಡುಪಿ: ನ.29ರಂದು ಸೋದೆ ಪರ್ಯಾಯದ ಬಾಳೆ ಮುಹೂರ್ತ – vishwanews24
ಉಡುಪಿ: ನ.29ರಂದು ಸೋದೆ ಪರ್ಯಾಯದ ಬಾಳೆ ಮುಹೂರ್ತ
ಉಡುಪಿ: ಉಡುಪಿ ಶ್ರೀಕೃಷ್ಣ ಮಠದ ದ್ವೈವಾರ್ಷಿಕ ಪರ್ಯಾಯ ದಲ್ಲಿ 2028-30ರ ಅವಧಿಯಲ್ಲಿ ಪರ್ಯಾಯ ನಡೆಸಿಕೊಡುವ ಸೋದೆ ವಾದಿರಾಜ ಮಠದ ಪರ್ಯಾಯ ಪೂರ್ವಭಾವಿ ಮುಹೂರ್ತಗಳಲ್ಲಿ ಮೊದಲನೆಯದಾದ ‘ಬಾಳೆ ಮುಹೂರ್ತ’ ಇದೇ ನ.29ರಂದು ಸೋದೆ ಮಠದ ಆವರಣದಲ್ಲಿ ನಡೆಯಲಿದೆ ಎಂದು 2028ರ ಜ.18ರಂದು ಎರಡನೇ ಬಾರಿಗೆ ಪರ್ಯಾಯ ಪೀಠವನ್ನೇರುವ ಸೋದೆ ಮಠದ ಶ್ರೀವಿಶ್ವವಲ್ಲಭ ತೀರ್ಥರು ತಿಳಿಸಿದ್ದಾರೆ.
ಉಡುಪಿಯಲ್ಲಿ ಶ್ರೀಕೃಷ್ಣನ ಮೂರ್ತಿಯನ್ನು ಪ್ರತಿಷ್ಠಾಪಿಸಿದ ಶ್ರೀಮಧ್ವಾಚಾರ್ಯರ ಸಹೋದರರಾದ ಶ್ರೀ ವಿಷ್ಣುತೀರ್ಥರ ಪರಂಪರೆಯಲ್ಲಿ ಬಂದ ಸೋದೆ ಶ್ರೀವಾದಿರಾಜ ಮಠದ ಯತಿಗಳಾದ ಶ್ರೀವಾದಿರಾಜತೀರ್ಥರು ಉಡುಪಿಯ ಅಷ್ಟಮಠಗಳ 2ವರ್ಷದ ಪರ್ಯಾಯ ವ್ಯವಸ್ಥೆಗೆ ಚಾಲನೆ ನೀಡಿದ್ದರು.
ಇದನ್ನೂ ಓದಿ :
ಈ ಪರ್ಯಾಯ ಪರಂಪರೆಯ 4 ಪೂರ್ವಭಾವಿ ಸಿದ್ಧತೆಗಳಲ್ಲಿ ಬಾಳೆ ಮುಹೂರ್ತ ಮೊದಲನೆಯದು. ಬಾಳೆ ಮುಹೂರ್ತವು 29ರಂದು ಬೆಳಗ್ಗೆ 7:45ಕ್ಕೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಸಂಪ್ರದಾಯದಂತೆ ಬೆಳಗ್ಗೆ 6:30ಕ್ಕೆ ಸೋದೆ ಮಠದ ಪಟ್ಟದ ದೇವರ ಪೂಜೆಯೊಂದಿಗೆ ಪ್ರಾರಂಭಗೊಳ್ಳಲಿದೆ. ಬಳಿಕ 7:45ಕ್ಕೆ ಸೋದೆ ಮಠದ ಆವರಣದಲ್ಲಿರುವ ತೋಟದಲ್ಲಿ ಬಾಳೆ ಗಿಡ, ಕಬ್ಬಿನ ಗಿಡ, ತುಳಸಿ ಗಿಡ ನೆಡುವ ಮೂಲಕ ಬಾಳೆ ಮುಹೂರ್ತ ನೆರವೇರಲಿದೆ.
ಈ ಸಂದರ್ಭದಲ್ಲಿ ಸೋದೆ ಶ್ರೀಪಾದರೊಂದಿಗೆ ಮಠದ ದಿವಾನರು, ಆಸ್ಥಾನ ವಿದ್ವಾಂಸರು, ಪಂಡಿತರು, ಭಕ್ತಾದಿಗಳು ಹಾಗೂ ಗಣ್ಯರು ಉಪಸ್ಥಿತರಿರಲಿದ್ದಾರೆ ಎಂದು ಶ್ರೀಗಳು ನುಡಿದರು.
ಇದನ್ನೂ ಓದಿ :
