ಉಡುಪಿ: ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ ಹಲ್ಲೆ ಪ್ರಕರಣ: ಆರೋಪಿ ವೈದ್ಯನ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಎಸ್ಪಿ, ಡಿಎಚ್ಓಗೆ ಮನವಿ – vishwanews24
ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ ಹಲ್ಲೆ ಪ್ರಕರಣ: ಆರೋಪಿ ವೈದ್ಯನ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಎಸ್ಪಿ, ಡಿಎಚ್ಓಗೆ ಮನವಿ
ಉಡುಪಿ: ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯ ಹಾಗೂ ಕನ್ನಡಪ್ರಭ ಪತ್ರಿಕೆಯ ವರದಿಗಾರ ಶ್ರೀಕಾಂತ್ ಹೆಮ್ಮಾಡಿ ಅವರ ಮೇಲೆ ಏಕಾಏಕಿ ಹಲ್ಲೆ ನಡೆಸಿ, ಜೀವ ಬೆದರಿಕೆಯೊಡ್ಡಿರುವ ಕುಂದಾಪುರ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಮಹೇಂದ್ರ ಕುಮಾರ್ ಶೆಟ್ಟಿ ವಿರುದ್ಧ ಕಠಿಣ ಕಾನೂನು ಕ್ರಮ ಜರಗಿಸುವಂತೆ ಆಗ್ರಹಿಸಿ ಸಂಘದ ನಿಯೋಗ ಶುಕ್ರವಾರ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಸೇರಿದಂತೆ ವಿವಿಧ ಚಿಕಿತ್ಸೆಗಳ ಸಂದರ್ಭದಲ್ಲಿ ಬಡ ಹಾಗೂ ಸಾಮಾನ್ಯ ರೋಗಿಗಳಿಂದ ಹಣ ಪಡೆಯ ಲಾಗುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಶ್ರೀಕಾಂತ್ ಹೆಮ್ಮಾಡಿ ತಮ್ಮ ಪತ್ರಿಕೆಯಲ್ಲಿ ವರದಿ ಪ್ರಕಟಿಸಿದ್ದರು.
ಮೂಡುಬಿದಿರೆ: ಚಾಲಕನ ನಿಯಂತ್ರಣ ತಪ್ಪಿ ಜನರೇಟರ್ ಸಾಗಿಸುತ್ತಿದ್ದ ಪಿಕಪ್ ವಾಹನ ಪಲ್ಟಿ – vishwanews24
ಈ ವರದಿಯಿಂದ ಅಸಮಾಧಾನ ಗೊಂಡಿದ್ದ ಡಾ.ಮಹೇಂದ್ರ ಕುಮಾರ್ ಶೆಟ್ಟಿ ಆ. 21ರಂದು ಕುಂದಾಪುರದ ಹೊಟೇಲೊಂದರಲ್ಲಿ ಉಪಹಾರ ಸೇವಿಸುತ್ತಿದ್ದ ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ ಮೇಲೆ ಏಕಾಏಕಿ ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದಾರೆ.
ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆಯುತ್ತಿದೆ ಎನ್ನಲಾದ ಅಕ್ರಮ ಹಾಗೂ ಭ್ರಷ್ಟಾಚಾರದ ಕುರಿತು ವರದಿ ಮಾಡುವುದು ಪತ್ರಕರ್ತನ ಕರ್ತವ್ಯ. ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ವಿಚಾರಗಳನ್ನು ಬೆಳಕಿಗೆ ತರುವ ಮೂಲಕ ಶ್ರೀಕಾಂತ್ ಹೆಮ್ಮಾಡಿ ತಮ್ಮ ಪತ್ರಿಕಾ ಧರ್ಮ ಹಾಗೂ ವೃತ್ತಿಪರ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಇದಕ್ಕಾಗಿ ಸರಕಾರಿ ವೈದ್ಯಾಧಿಕಾರಿಯೊಬ್ಬರು ಪತ್ರಕರ್ತನ ಮೇಲೆ ಹಲ್ಲೆ ನಡೆಸಿರುವುದು ಅತ್ಯಂತ ಗಂಭೀರ ಹಾಗೂ ಖಂಡನೀಯ ಕೃತ್ಯವಾಗಿದೆ.
ಡೇವಿಡ್ ಡಿಸೋಜ ಹತ್ಯೆ ಪ್ರಕರಣ : ಮತ್ತೊಬ್ಬ ಆರೋಪಿ ಬಂಧನ – vishwanews24
ಪತ್ರಕರ್ತರ ಮೇಲೆ ದೈಹಿಕ ಹಲ್ಲೆ ಹಾಗೂ ಬೆದರಿಕೆ ನಡೆಸುವ ಮೂಲಕ ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಯಾವುದೇ ಪ್ರಯತ್ನವನ್ನು ಸಹಿಸಲಾಗದು. ಇದು ಕೇವಲ ಓರ್ವ ಪತ್ರಕರ್ತನ ಮೇಲಿನ ಹಲ್ಲೆಯಲ್ಲ, ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಪತ್ರಿಕಾ ರಂಗದ ಮೇಲಿನ ನೇರ ದಾಳಿಯಾಗಿದೆ ಎಂದು ಸಂಘ ಟೀಕಿಸಿದೆ. ಆದ್ದರಿಂದ ಯಾವುದೇ ರಾಜಕೀಯ, ಆಡಳಿತಾತ್ಮಕ ಅಥವಾ ಇತರ ಯಾವುದೇ ರೀತಿಯ ಒತ್ತಡಗಳಿಗೆ ಮಣಿಯದೆ, ಹಲ್ಲೆ ನಡೆಸಿದ ಆರೋಪಿ ಡಾ.ಮಹೇಂದ್ರ ಕುಮಾರ್ ಶೆಟ್ಟಿ ಅವರನ್ನು ಕೂಡಲೇ ಬಂಧಿಸಿ, ಕಾನೂನು ಬದ್ಧವಾಗಿ ಕಠಿಣ ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಆಗ್ರಹಿಸಿದೆ.
ಅದೇ ರೀತಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಪತ್ರಕರ್ತನ ಮೇಲೆ ಹಲ್ಲೆ ನಡೆಸಿರುವ ಆರೋಪಿ ವೈದ್ಯ ಡಾ.ಮಹೇಂದ್ರ ಕುಮಾರ್ ಶೆಟ್ಟಿ ಅವರನ್ನು ಅಮಾನತುಗೊಳಿಸಿ ಇಲಾಖಾ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಜರಗಿಸಬೇಕು ಎಂದು ಸಂಘ ಒತ್ತಾಯಿಸಿದೆ.
ವೆನ್ಲಾಕ್ ಆಸ್ಪತ್ರೆ ಉನ್ನತೀಕರಣಕ್ಕೆ ಸರಕಾರದಿಂದ 70 ಕೋಟಿ ರೂ.ಅನುದಾನ : ಸಚಿವ ಯು.ಟಿ.ಖಾದರ್ – vishwanews24
ನಿಯೋಗದಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ, ರಾಜ್ಯ ಸಮಿತಿ ಸದಸ್ಯ ಆಸ್ಟ್ರೋ ಮೋಹನ್, ಕೋಶಾಧಿಕಾರಿ ಹರೀಶ್ ಕುಂದರ್, ಉಪಾಧ್ಯಕ್ಷ ಪ್ರಭಾಕರ ಆಚಾರ್ಯ ಚಿತ್ತೂರು, ಕಾರ್ಯದರ್ಶಿಗಳಾದ ಉಮೇಶ್ ಮಾರ್ಪಳ್ಳಿ, ಲೋಕೇಶ್ ಆಚಾರ್ಯ ತೆಕ್ಕಟ್ಟೆ, ಸುರೇಶ್ ಎರ್ಮಾಳು, ತಾಲೂಕು ಅಧ್ಯಕ್ಷರುಗಳಾದ ನಾಗರಾಜ ರಾಯಪ್ಪನಮಠ, ಹಮೀದ್ ಪಡುಬಿದ್ರೆ, ಉದಯಶಂಕರ್, ರಾಜೇಶ್ ಗಾಣಿಗ ಅಚ್ಲಾಡಿ, ಪ್ರಮುಖರಾದ ಪ್ರಮೋದ್ ಸುವರ್ಣ, ಪ್ರವೀಣ್ ಮುದೂರು, ಅಜಿತ್ ಆರಾಡಿ, ಚೇತನ್ ಮಟಪಾಡಿ, ಪುಂಡಲಿಕ ಮರಾಠೆ, ಗಣೇಶ್ ಬೀಜಾಡಿ, ಶಶಿಧರ್ ಮಾಸ್ತಿಬೈಲು ಮೊದಲಾದವರು ಉಪಸ್ಥಿತರಿದ್ದರು.
