ಕಟೀಲಮ್ಮನ ಮಡಿಲಲ್ಲಿ ವೈಭವದಿಂದ ನಡೆದ ಬ್ರಹ್ಮಕಲಶೋತ್ಸವ , ಲಕ್ಷಾಂತರ ಭಕ್ತರ ಸಮಾಗಮ, ನಾಳೆ ನಾಗಮಂಡಲ-Vishwanews24

Featured

ಮಂಗಳೂರು: ಭಕ್ತರ ಇಷ್ಟಾರ್ಥ ಗಳನ್ನು ಕರುಣಿಸುವ ಮಹಾಮಾತೆ, ನಂದಿನಿ ನದಿಯ ಮಡಿಲಲ್ಲಿ ಪವಡಿಸಿದ ಸಾವಿರ ಸೀಮೆಯ ಆದಿಮಾಯೆ, ಭ್ರಾಮರಿ ಅವತಾರಿಣಿ ಶ್ರೀ ದುರ್ಗಾಪರಮೇಶ್ವರಿಗೆ ಗುರುವಾರ ಪರಮ ಪವಿತ್ರ ಬ್ರಹ್ಮ ಕಲಶೋತ್ಸವ ವೈಭವದಿಂದ ನೆರವೇರಿತು. ಈ ಪುಣ್ಯ ಸಂಭ್ರಮವನ್ನು ಸಹಸ್ರಾರು ಭಕ್ತರು ಕಣ್ತುಂಬಿ ಕೊಂಡು ಭಕ್ತಿಭಾವದಿಂದ ಪುನೀತರಾದರು.

ಸೂರ್ಯೋದಯಕ್ಕೆ ಮುನ್ನವೇ ವೈದಿಕ ವಿಧಿ ವಿಧಾನಗಳು ಆರಂಭವಾದವು. ಹಲವು ಭಕ್ತರು ನೇರವಾಗಿ ವೀಕ್ಷಿಸಿದರೆ, ಲಕ್ಷಾಂತರ ಮಂದಿ ಕ್ಷೇತ್ರದ ವ್ಯಾಪ್ತಿಯಲ್ಲಿ ಅಳವಡಿಸಿದ್ದ ಎಲ್‌ಇಡಿ ಪರದೆ  ಮೂಲಕ ಕಣ್ತುಂಬಿಕೊಂಡರು.

ಕಟೀಲು ದುರ್ಗಾಪರಮೇಶ್ವರಿಯ ಸನ್ನಿಧಾನದಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಬ್ರಹ್ಮಕಲಶೋತ್ಸವ ಸಂಭ್ರಮ ಈಗ ನಡೆಯುತ್ತಿದೆ. ರಾಜ್ಯದ, ದೇಶದ ವಿವಿಧ ಭಾಗಗಳಿಂದ ಲಕ್ಷಾಂತರ ಮಂದಿ ಭಕ್ತರ ಸಮಾಗಮ ಕಟೀಲಿನಲ್ಲಿ ನಡೆದಿದೆ. ದುರ್ಗಾಪರಮೇಶ್ವರಿಗೆ ವೈಭವದ ಬ್ರಹ್ಮಕಲಶೋತ್ಸವ ನಡೆದಿದ್ದು, ಜನರು ತಾಯಿಯ ಆಶೀರ್ವಾದ ಪಡೆದು ಧನ್ಯರಾಗಿದ್ದಾರೆ.

 

20 ಸಾವಿರ ಸ್ವಯಂಸೇವಕರು ಪ್ರತಿನಿತ್ಯ ಸೇವೆ ಸಲ್ಲಿಸುತ್ತಿದ್ದು, ಭಕ್ತರು ತಮ್ಮ ಶಕ್ತಿಯನುಸಾರ ಸೇವೆ ಸಲ್ಲಿಸಿದ್ದಾರೆ. ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿ ಪ್ರತಿನಿತ್ಯ ಲಕ್ಷಾಂತರ ಜನ ಅನ್ನಸಂತರ್ಪಣೆ ಮಾಡುತ್ತಿದ್ದಾರೆ. ಹೀಗಾಗಿ ಜನರು ಅಕ್ಕಿ, ತರಕಾರಿ, ಅಡುಗೆ ಸಾಮಾನು ಸೇರಿದಂತೆ ಪಾತ್ರೆ-ಪಗಡೆಗಳನ್ನು ಭಕ್ತಿಯಿಂದ ಕ್ಷೇತ್ರಕ್ಕೆ ನೀಡುತ್ತಿದ್ದಾರೆ.

ಬ್ರಹ್ಮಕಲಶ ಮಂಡಲದಲ್ಲಿ 984 ಚಿಕ್ಕ ಕಲಶಗಳನ್ನಿಟ್ಟು, ಮಂಡಲದ ಮಧ್ಯದಲ್ಲಿ ಬ್ರಹ್ಮಕಲಶವನ್ನಿಟ್ಟು ಎಲ್ಲಾ ದೇವಾಧಿದೇವತೆಗಳನ್ನು ಪೂಜಿಸಿ ಪವಿತ್ರ ದ್ರವ್ಯದಿಂದ ದೇವಿಗೆ ಕಲಶಾಭಿಷೇಕ ಮಾಡಲಾಗಿದೆ. ಪ್ರತಿದಿನ ಲಕ್ಷಾಂತರ ಮಂದಿ ದೇವಸ್ಥಾನಕ್ಕೆ ಬಂದರೂ ಯಾವುದೇ ಅನಾನುಕೂಲವಾಗದಂತೆ ವ್ಯವಸ್ಥೆ ಮಾಡಲಾಗಿದೆ.

ನಾಳೆ ನಾಗಮಂಡಲ; ನಾಡಿದ್ದು ಕೋಟಿ ಜಪ ಯಜ್ಞ
ಕಟೀಲಿನಲ್ಲಿ ಜ.31ರಂದು ವಿವಿಧ ವೈದಿಕ-ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಫೆ.1ರಂದು ಭ್ರಾಮರೀ ವನದಲ್ಲಿ ಸಂಜೆ 7ರಿಂದ ಸಗ್ರಿ ಶ್ರೀ ಗೋಪಾಲಕೃಷ್ಣ ಸಾಮಗರ ನೇತೃತ್ವದಲ್ಲಿ, ಮದ್ದೂರು ಶ್ರೀ ಕೃಷ್ಣಪ್ರಸಾದ ವೈದ್ಯ ಬಳಗದವರ ಸಹಭಾಗಿತ್ವದಲ್ಲಿ ನಾಗಮಂಡಲೋತ್ಸವ ನಡೆಯಲಿದೆ. ಫೆ. 2ರಂದು ಭ್ರಾಮರಿ ವನದಲ್ಲಿ ಬೆಳಗ್ಗೆ ಕೋಟಿ ಜಪಯಜ್ಞ ಆರಂಭವಾಗಿ ಸಂಜೆ ಪರಿಸಮಾಪ್ತಿಯಾಗಲಿದೆ. ಫೆ.3ರಂದು ಭ್ರಾಮರಿ ವನದಲ್ಲಿ ಮುಂಜಾನೆ 7ರಿಂದ ಸಹಸ್ರಚಂಡಿಕಾಯಾಗ ನಡೆಯಲಿದೆ.

ಜ.22ರಿಂದ ಆರಂಭವಾದ ಶ್ರೀ ಕ್ಷೇತ್ರ ಕಟೀಲಿನ ಬ್ರಹ್ಮಕಲಶೋತ್ಸವಕ್ಕೆ ಹತ್ತೂರುಗಳಿಂದ ಲಕ್ಷಾಂತರ ಜನರು ಆಗಮಿಸಿ, ತಾಯಿಯ ದರ್ಶನ ಪಡೆದು ಪುನೀತರಾಗಿದ್ದಾರೆ. ಬ್ರಹ್ಮಕಲಶೋತ್ಸವ ನಡೆದ ಗುರುವಾರ ಶ್ರೀ ಕ್ಷೇತ್ರದಲ್ಲಿ ಜನಸಾಗರವೇ ನೆರೆದಿತ್ತು. ಎತ್ತ ನೋಡಿದರೂ ಜನಜಾತ್ರೆಯೇ ಮೇಳೈಸಿತ್ತು. ಮಧ್ಯಾಹ್ನ ಸುಮಾರು 1.50 ಲಕ್ಷ ಜನರು ಅನ್ನಪ್ರಸಾದ ಸ್ವೀಕರಿಸಿದರು. ಸಾವಿರಾರು ಸ್ವಯಂಸೇವಕರ ತಂಡ ಹಗಲಿರುಳು ದುಡಿದು ಕ್ಷೇತ್ರದ ಮಂಗಲ ಕಾರ್ಯವನ್ನು ಯಶಸ್ವಿಯಾಗಿ ನಡೆಸುವಲ್ಲಿ ವಿಶೇಷವಾಗಿ ತೊಡಗಿಸಿಕೊಂಡಿದ್ದಾರೆ. ಕಟೀಲಿನ ಜಗನ್ಮಾತೆಯು ಪುಷ್ಪಪ್ರಿಯೆ ಆಗಿರುವುದರಿಂದ ಶ್ರೀ ಕ್ಷೇತ್ರವನ್ನು ಬಗೆಬಗೆಯ ಪುಷ್ಪಗಳಿಂದ ಅಲಂಕರಿಸಲಾಗಿದೆ. ಕ್ಷೇತ್ರಕ್ಕೆ ಬಂದ ಹೊರೆಕಾಣಿಕೆಯು ಕರಾವಳಿಯ ದೇಗುಲಗಳ ಬ್ರಹ್ಮಕಲಶೋತ್ಸವದ ಪೈಕಿ ದಾಖಲೆ ಎಂದು ಕ್ಷೇತ್ರದ ಪ್ರಮುಖರು ಉಲ್ಲೇಖೀಸಿದ್ದಾರೆ.

 

ನಟಿ ಶಿಲ್ಪಾ ಶೆಟ್ಟಿ ಸೇರಿದಂತೆ ಪ್ರಮುಖ ಗಣ್ಯರೂ ದೇವಸ್ಥಾನಕ್ಕೆ ಭೇಟಿ ನೀಡಿ ದುರ್ಗಾಪರಮೇಶ್ವರಿಯ ಆಶೀರ್ವಾದ ಪಡೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಅಧಿದೇವತೆ ಕಟೀಲು ದುರ್ಗಾಪರಮೇಶ್ವರಿಯ ಸನ್ನಿಧಿಯಲ್ಲಿ ಬ್ರಹ್ಮಕಲಶೋತ್ಸವದ ಸಂಭ್ರಮ ಜೋರಾಗಿ ನಡೆಯುತ್ತಿದೆ. ಕಾರಣಿಕ ಶಕ್ತಿಯಾಗಿ ಮೆರೆಯುತ್ತಿರುವ ಮಂದಸ್ಮಿತ ದುರ್ಗಾಪರಮೇಶ್ವರಿಯನ್ನು ಕಂಡು ಜನ ಸಂಪ್ರೀತರಾಗಿದ್ದಾರೆ.