ಕುಂಜಾರುಗಿರಿ: ವ್ಯಕ್ತಿಯ ದರೋಡೆ ಪ್ರಕರಣ ;  ಆರೋಪಿ ಬಂಧನ -vishwanews24

Featured, ಉಡುಪಿ

ಕುಂಜಾರುಗಿರಿ: ವ್ಯಕ್ತಿಯ ದರೋಡೆ ಪ್ರಕರಣ ;  ಆರೋಪಿ ಬಂಧನ

ಉಡುಪಿ: ಕುರ್ಕಾಲು ಗ್ರಾಮದ ಕುಂಜಾರುಗಿರಿ ದುರ್ಗಾದೇವಿ ದೇವಸ್ಥಾನದಲ್ಲಿ ದೀಪೋತ್ಸವ ಕಾರ್ಯಕ್ರಮಕ್ಕೆ ಬಂದಿದ್ದ 68 ವರ್ಷದ ವ್ಯಕ್ತಿಯ ಮೇಲೆ ಸುತ್ತಿಗೆಯಿಂದ ಹಲ್ಲೆ ನಡೆಸಿ, ₹4.50 ಲಕ್ಷ ಮೌಲ್ಯದ ಚಿನ್ನದ ಸರಗಳನ್ನು ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿರ್ವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ನ.24ರಂದು ಬಿ. ರಾಜಮೂರ್ತಿ ಭಟ್ (68) ಅವರು ಕುಂಜಾರುಗಿರಿ ದುರ್ಗಾದೇವಿ ದೇವಸ್ಥಾನದಲ್ಲಿ ದೀಪೋತ್ಸವ ಕಾರ್ಯಕ್ರಮಕ್ಕೆ ತೆರಳಿದ್ದರು. ಅಲ್ಲಿ ಪರಿಚಯದ ಮುರಳಿಕೃಷ್ಣ ಎಂಬಾತನೂ ಇದ್ದನು. ರಾತ್ರಿ ಸುಮಾರು 8.30ರ ವೇಳೆಗೆ ರಾಜಮೂರ್ತಿ ಭಟ್ ಅವರ ಬಳಿ ಬಂದ ಮುರಳಿಕೃಷ್ಣ, ಮಾತನಾಡಲು ಇದೆ ಎಂದು ಹೇಳಿ ದೇವಸ್ಥಾನದಿಂದ ಹೊರಗೆ ಕರೆದುಕೊಂಡು ಹೋಗಿ ತನ್ನ ಕಾರಿನಲ್ಲಿ ಕುಳ್ಳಿರಿಸಿದ್ದನು.

ಈ ವೇಳೆ ತಾನು ಸುಮಾರು 60 ಎಕರೆ ಪ್ರದೇಶದಲ್ಲಿ ಭತ್ತದ ಬೇಸಾಯ ಮಾಡುತ್ತಿದ್ದು, ಅದನ್ನು 200 ಎಕರೆಗೆ ವಿಸ್ತರಿಸಲು ₹25 ಲಕ್ಷ ಹಣದ ಅಗತ್ಯವಿದೆ ಎಂದು ತಿಳಿಸಿ ಸಹಾಯ ಮಾಡುವಂತೆ ಕೇಳಿಕೊಂಡಿದ್ದನು. ಆದರೆ ರಾಜಮೂರ್ತಿ ಭಟ್ ಅವರು ಹಣ ನೀಡಲು ಒಪ್ಪದಿದ್ದಾಗ, ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರಗಳನ್ನು ದೋಚುವ ಉದ್ದೇಶದಿಂದ ಸುತ್ತಿಗೆಯಿಂದ ಹಲ್ಲೆ ನಡೆಸಿ ಗಂಭೀರ ಗಾಯಗೊಳಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಹಲ್ಲೆಯಿಂದ ತಪ್ಪಿಸಿಕೊಳ್ಳಲು ರಾಜಮೂರ್ತಿ ಭಟ್ ಅವರು ಪ್ರಯತ್ನಿಸಿದಾಗ ಅವರನ್ನು ಬೆನ್ನಟ್ಟಿ ದೂಡಿ, ಕುತ್ತಿಗೆಯಲ್ಲಿದ್ದ ಸುಮಾರು 20 ಗ್ರಾಂ ತೂಕದ ಚಿನ್ನದ ಸರ ಹಾಗೂ 28 ಗ್ರಾಂ ತೂಕದ ತುಳಸಿ ಮಣಿಗಳಿರುವ ಚಿನ್ನದ ಸರವನ್ನು ಕಿತ್ತುಕೊಂಡು ಕಾರು ಸಮೇತ ಪರಾರಿಯಾಗಿದ್ದಾನೆ. ಕಳವಾದ ಚಿನ್ನಾಭರಣಗಳ ಅಂದಾಜು ಮೌಲ್ಯ ₹4.50 ಲಕ್ಷ ಎಂದು ತಿಳಿದುಬಂದಿದೆ.

Leave a Reply