ಕೆಎಸ್ಆರ್ಟಿಸಿ ಪ್ರಯಾಣಿಕರಿಗೆ ಗುಡ್ನ್ಯೂಸ್ : ಇನ್ಮುಂದೆ ವಾಟ್ಸಾಪ್ ಮೂಲಕ ಟಿಕೆಟ್ ಬುಕ್ಕಿಂಗ್ಗೆ ಅವಕಾಶ – vishwanews24
ಕೆಎಸ್ಆರ್ಟಿಸಿ ಪ್ರಯಾಣಿಕರಿಗೆ ಗುಡ್ನ್ಯೂಸ್ ..
ಇನ್ಮುಂದೆ ವಾಟ್ಸಾಪ್ ಮೂಲಕ ಟಿಕೆಟ್ ಬುಕ್ಕಿಂಗ್ಗೆ ಅವಕಾಶ ..
ವಾಟ್ಸಾಪ್ನಲ್ಲಿ ಟಿಕೆಟ್ ಬುಕಿಂಗ್ ಮಾಡುವುದು ಹೇಗೆ?
ಬೆಂಗಳೂರು: ದಸರಾ ಹಬ್ಬದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ರಾಜ್ಯದ ಪ್ರಯಾಣಿಕರಿಗೆ ಡಿಜಿಟಲ್ ಸೌಲಭ್ಯವೊಂದನ್ನು ಪರಿಚಯಿಸಿದ್ದು, ಇನ್ಮುಂದೆ ವಾಟ್ಸಾಪ್ ಮೂಲಕವೇ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಬಸ್ ಟಿಕೆಟ್ಗಳನ್ನು ಬುಕ್ ಮಾಡುವ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಟಿಕೆಟ್ಗಾಗಿ ಬಸ್ ನಿಲ್ದಾಣಗಳಲ್ಲಿ ಸರತಿ ಸಾಲಿನಲ್ಲಿ ನಿಲ್ಲುವ ಅನಿವಾರ್ಯತೆ ಕಡಿಮೆಯಾಗಲಿದೆ.
ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳ ಸೇವೆಗಳನ್ನು ಒಂದೇ ಡಿಜಿಟಲ್ ವೇದಿಕೆಯಡಿ ತರುವ ಉದ್ದೇಶದಿಂದ ಸರ್ಕಾರ ‘ಒನ್ ಕರ್ನಾಟಕ ಮೊಬಿಲಿಟಿ ಆ್ಯಪ್’ ಅನ್ನು ಪರಿಚಯಿಸಿದೆ. ಇದರೊಂದಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ , ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬಸ್ಗಳಿಗೆ ವಾಟ್ಸಾಪ್ ಟಿಕೆಟ್ ಬುಕಿಂಗ್ ಸೌಲಭ್ಯ ಆರಂಭಿಸಲಾಗಿದೆ.
ಉಡುಪಿ: ಗೂಡ್ಸ್ ಟೆಂಪೋದಲ್ಲಿ ಮಕ್ಕಳ ಅಪಾಯಕಾರಿ ಪ್ರಯಾಣ ; ಕಾನೂನು ಕ್ರಮಕ್ಕೆ ಸಾರ್ವಜನಿಕರ ಆಗ್ರಹ- vishwanews24
ಗುರುವಾರ ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನವೀಕರಿಸಿದ ‘KSRTC ಅವತಾರ್ 2.0’ ಮೊಬೈಲ್ ಆ್ಯಪ್ ಹಾಗೂ ವಾಟ್ಸಾಪ್ ಟಿಕೆಟಿಂಗ್ ಸೇವೆಯನ್ನು ಬಿಡುಗಡೆ ಮಾಡಿದರು. ‘ಒನ್ ಕರ್ನಾಟಕ ಮೊಬಿಲಿಟಿ’ ಆ್ಯಪ್ನಲ್ಲಿ ಸುರಕ್ಷಿತ ಬಳಕೆದಾರ ಪ್ರವೇಶ ವ್ಯವಸ್ಥೆ ಇರಲಿದ್ದು, ಪ್ರಯಾಣಿಕರು ತಮ್ಮ ಹಿಂದಿನ ಟಿಕೆಟ್ ಬುಕಿಂಗ್ಗಳ ವಿವರಗಳನ್ನು ವೀಕ್ಷಿಸುವುದರ ಜೊತೆಗೆ ವಹಿವಾಟುಗಳನ್ನು ನಿರ್ವಹಿಸಬಹುದಾಗಿದೆ.
ಇದೇ ವೇದಿಕೆಯ ಮೂಲಕ ನಾಲ್ಕು ರಸ್ತೆ ಸಾರಿಗೆ ನಿಗಮಗಳಿಗೆ ಸಂಬಂಧಿಸಿದ ದೂರುಗಳನ್ನು ಸಲ್ಲಿಸಲು, ದೂರುಗಳ ಸ್ಥಿತಿ ಪರಿಶೀಲಿಸಲು, ಅಗತ್ಯವಿದ್ದಲ್ಲಿ ಮೇಲ್ಮನವಿ ಸಲ್ಲಿಸಲು ಹಾಗೂ ಪರಿಹಾರದ ಪ್ರಗತಿಯನ್ನು ಟ್ರ್ಯಾಕ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಹಂತ ಹಂತವಾಗಿ ಡಿಜಿಟಲ್ ಮಾಸಿಕ ಬಸ್ ಪಾಸ್ ಸೌಲಭ್ಯವನ್ನೂ ಪರಿಚಯಿಸಲು ಸರ್ಕಾರ ಮುಂದಾಗಿದೆ. ಇದರ ಮೂಲಕ ಆನ್ಲೈನ್ನಲ್ಲೇ ಬಸ್ ಪಾಸ್ಗಳನ್ನು ಬುಕ್, ಸ್ವೀಕರಿಸಿ ಹಾಗೂ ನಿರ್ವಹಿಸಬಹುದಾಗಿದೆ. QR ಕೋಡ್ ಆಧಾರಿತ ಡಿಜಿಟಲ್ ಪರಿಶೀಲನಾ ವ್ಯವಸ್ಥೆಯನ್ನೂ ಅಳವಡಿಸಲಾಗುತ್ತದೆ.
ವಾಟ್ಸಾಪ್ನಲ್ಲಿ ಟಿಕೆಟ್ ಬುಕಿಂಗ್ ಮಾಡುವ ವಿಧಾನ
ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು ವಾಟ್ಸಾಪ್ ಮೂಲಕ KSRTC, NWKRTC ಹಾಗೂ KKRTC ಬಸ್ಗಳ ಟಿಕೆಟ್ ಬುಕ್ಕಿಂಗ್ ಸೌಲಭ್ಯ ಒದಗಿಸಲಾಗಿದೆ. ಪ್ರಯಾಣಿಕರು 6364940880 ವಾಟ್ಸಾಪ್ ಸಂಖ್ಯೆಗೆ ಸಂದೇಶ ಕಳುಹಿಸುವ ಮೂಲಕ ಬುಕ್ಕಿಂಗ್ ಆರಂಭಿಸಬಹುದು. ನಂತರ ವಾಟ್ಸಾಪ್ನಲ್ಲಿಯೇ ಲಭ್ಯವಾಗುವ ಸಂವಾದಾತ್ಮಕ ವ್ಯವಸ್ಥೆಯು ಟಿಕೆಟ್ ಕಾಯ್ದಿರಿಸುವಿಕೆಯ ಸಂಪೂರ್ಣ ಪ್ರಕ್ರಿಯೆಗೆ ಮಾರ್ಗದರ್ಶನ ನೀಡಲಿದೆ.
ಪ್ರಯಾಣ ಆರಂಭದ ಸ್ಥಳ, ಹೋಗಬೇಕಾದ ಸ್ಥಳ ಹಾಗೂ ಪ್ರಯಾಣದ ದಿನಾಂಕ ಆಯ್ಕೆ ಮಾಡಿ ಲಭ್ಯವಿರುವ ಬಸ್ ಸೇವೆಗಳನ್ನು ಹುಡುಕಬೇಕು.
ನಿಮ್ಮ ಪ್ರಯಾಣದ ಆದ್ಯತೆಗೆ ಅನುಗುಣವಾಗಿ ಸೂಕ್ತವಾದ ಬಸ್ ಆಯ್ಕೆ ಮಾಡಬೇಕು.
ನಂತರ ಹಂತದಲ್ಲಿ ಪ್ರಯಾಣಿಕರ ವಿವರಗಳನ್ನು ನಮೂದಿಸಬೇಕು.
ಟಿಕೆಟ್ ವಿವರಗಳನ್ನು ಪರಿಶೀಲಿಸಿ ಹಣ ಪಾವತಿ ಪೂರ್ಣಗೊಳಿಸಿದರೆ ಟಿಕೆಟ್ ಬುಕಿಂಗ್ ಖಚಿತವಾಗಲಿದೆ.
ಹಣ ಪಾವತಿ ಹೇಗೆ?
ವಾಟ್ಸಾಪ್, ಇ-ಮೇಲ್ ರಿಪ್ಲೈ ಟಿಕೆಟ್ ಬುಕ್ ಬಳಿಕ ಹಣ ಪಾವತಿಗಾಗಿ ಯುಪಿಐ, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಹಾಗೂ ವಾಲೆಟ್ಗಳು ಸೇರಿದಂತೆ ವಿವಿಧ ಪಾವತಿ ವಿಧಾನ ಬಳಕೆಗೆ ಅವಕಾಶ ಇದೆ. ಪಾವತಿ ಯಶಸ್ವಿಯಾದ ನಂತರ ಬುಕ್ಕಿಂಗ್ ದೃಢೀಕರಣ ಹಾಗೂ ಇ-ಟಿಕೆಟ್ ಅನ್ನು ವಾಟ್ಸಾಪ್ ಮತ್ತು ಇ-ಮೇಲ್ ಮೂಲಕ ಪ್ರಯಾಣಿಕರಿಗೆ ಹಂಚಿಕೊಳ್ಳಲಾಗುತ್ತದೆ.
