ಗೋಹತ್ಯೆ ಪ್ರಕರಣದಲ್ಲಿ ಮಹತ್ವದ ತೀರ್ಪು : ಗುಜರಾತ್‌ನಲ್ಲಿ ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ – vishwanews24

Featured, ರಾಷ್ಟ್ರ ನ್ಯೂಸ್

ಗೋಹತ್ಯೆ ಪ್ರಕರಣದಲ್ಲಿ ಮಹತ್ವದ ತೀರ್ಪು : ಗುಜರಾತ್‌ನಲ್ಲಿ ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ

ಗಾಂಧಿನಗರ: ಗೋಹತ್ಯೆ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ಗುಜರಾತ್‌ನ ಕಲೋಲ್ ಹೆಚ್ಚುವರಿ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ನ್ಯಾಯಾಧೀಶ ಬಿ.ಆರ್. ರಾಜ್‌ಪೂತ್ ಅವರು 76 ಪುಟಗಳ ಸುದೀರ್ಘ ತೀರ್ಪು ಪ್ರಕಟಿಸಿದ್ದು, ಅದರಲ್ಲಿ ಮನುಸ್ಮೃತಿ ಹಾಗೂ ವೇದಗಳ ಉಲ್ಲೇಖ ಮಾಡಿರುವುದು ಗಮನ ಸೆಳೆದಿದೆ.

ಹಸುವಿನ ಹತ್ಯೆ ಪ್ರಕರಣಗಳಲ್ಲಿ ಕಠಿಣ ಶಿಕ್ಷೆ ವಿಧಿಸದಿದ್ದರೆ ಗೋವುಗಳು ನಿರ್ನಾಮವಾಗುವ ಅಪಾಯವಿದೆ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದೆ. ಅಹಮದಾಬಾದ್ ಮೂಲದ ವಸೀಮ್ (34), ಮೊಹಮ್ಮದ್ ರಫೀಕ್ (28) ಮತ್ತು ಅಸ್ಫಾಕ್ ಅಲಿಯಾಸ್ ಸಲ್ಮಾನ್ (19) ಜೀವಾವಧಿ ಶಿಕ್ಷೆಗೆ ಗುರಿಯಾದವರು. ಮೂವರಿಗೂ ದಂಡವನ್ನೂ ವಿಧಿಸಲಾಗಿದೆ. ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಪ್ರಕರಣದ ಇತರ ಇಬ್ಬರು ಆರೋಪಿಗಳನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲೇ ಮತ್ತೊಬ್ಬ ಆರೋಪಿ ಮೃತಪಟ್ಟಿದ್ದಾನೆ. 2024ರ ಆಗಸ್ಟ್ 22ರಂದು ಗಾಂಧಿನಗರ ಜಿಲ್ಲೆಯ ಜಮ್ಲಾ ಗ್ರಾಮದ ಮನೆಯೊಂದರಲ್ಲಿ ಆರೋಪಿಗಳು ಗೋಹತ್ಯೆ ನಡೆಸಿದ್ದರು ಎಂಬ ಆರೋಪವಿತ್ತು. ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು 277 ಕೆ.ಜಿ. ಮಾಂಸವನ್ನು ವಶಪಡಿಸಿಕೊಂಡಿದ್ದರು.

ಕಾಂಗ್ರೆಸ್ ಬ್ಯಾಂಕ್‌ ಗಳನ್ನು ನಿರ್ಮಿಸಿತು, ಬಿಜೆಪಿ ಅವುಗಳನ್ನು ಮಾರಾಟ ಮಾಡುತ್ತಿದೆ : ರಾಹುಲ್ ಗಾಂಧಿ ವಾಗ್ದಾಳಿ – vishwanews24

ಆರೋಪಿಗಳು ತಮ್ಮ ಕುಟುಂಬದ ಜೀವನೋಪಾಯಕ್ಕೆ ಆಧಾರವಾಗಿದ್ದು, ಈ ಹಿಂದೆ ಯಾವುದೇ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿಲ್ಲ ಎಂಬ ಕಾರಣ ನೀಡಿ ಪ್ರತಿವಾದಿ ಪರ ವಕೀಲರು ಶಿಕ್ಷೆಯಲ್ಲಿ ವಿನಾಯಿತಿ ನೀಡುವಂತೆ ಮನವಿ ಮಾಡಿದ್ದರು. ಆದರೆ ನ್ಯಾಯಾಲಯ ಈ ವಾದಗಳನ್ನು ತಿರಸ್ಕರಿಸಿದೆ. 2017ರಲ್ಲಿ ತಿದ್ದುಪಡಿಯಾದ ಗುಜರಾತ್ ಪ್ರಾಣಿ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ನ್ಯಾಯಾಲಯದ 76 ಪುಟಗಳ ತೀರ್ಪಿನಲ್ಲಿ ಹಿಂದೂ ಧರ್ಮಗ್ರಂಥಗಳಾದ ಮನುಸ್ಮೃತಿ ಮತ್ತು ವೇದಗಳ ಉಲ್ಲೇಖ ಮಾಡಲಾಗಿದೆ. ಹಸುವನ್ನು ಪವಿತ್ರವೆಂದು ಪರಿಗಣಿಸುವ ಧಾರ್ಮಿಕ ನಂಬಿಕೆಗಳು ಹಾಗೂ ಗೋವಿನ ಮಹತ್ವವನ್ನು ನ್ಯಾಯಾಧೀಶರು ತಮ್ಮ ತೀರ್ಪಿನಲ್ಲಿ ವಿವರಿಸಿದ್ದಾರೆ.

ಹಸುಗಳನ್ನು ಕ್ರೂರವಾಗಿ ಹತ್ಯೆ ಮಾಡಿ, ಅವುಗಳ ದೇಹದ ಭಾಗಗಳನ್ನು ಕತ್ತರಿಸಿ ಮಾಂಸವನ್ನು ಮಾರಾಟಕ್ಕೆ ಸಿದ್ಧಪಡಿಸಿರುವುದನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದೆ. ಇಂತಹ ಕೃತ್ಯಗಳಿಗೆ ಕಾನೂನಿನ ಪ್ರಕಾರ ಕಠಿಣ ಶಿಕ್ಷೆ ವಿಧಿಸುವ ಅಗತ್ಯವಿದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ. ಮನುಸ್ಮೃತಿಯಲ್ಲಿ ಗೋವಿನ ಮಹತ್ವ, ಗೋವುಗಳನ್ನು ರಕ್ಷಿಸುವ ಜವಾಬ್ದಾರಿ ಹಾಗೂ ಕಾಮಧೇನುವಿನ ಕುರಿತಾದ ಉಲ್ಲೇಖಗಳನ್ನು ನ್ಯಾಯಾಲಯ ಪ್ರಸ್ತಾಪಿಸಿದೆ. ಋಗ್ವೇದದಲ್ಲಿ ಹಸುವನ್ನು ‘ಅಘ್ನ್ಯಾ’ ಎಂದು ಕರೆಯಲಾಗಿದ್ದು, ಅದರ ಅರ್ಥ ಕೊಲ್ಲಬಾರದದ್ದು ಎಂಬುದನ್ನೂ ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.

ಸೌಜನ್ಯಾ ಪ್ರಕರಣ ತನಿಖೆ: ಎಸ್‌ಐಟಿ ಮುಖ್ಯಸ್ಥರ ಬದಲಾವಣೆ ; ಶಶಿಕುಮಾರ್ ಬದಲಿಗೆ ಚೇತನ್ ಸಿಂಗ್ ರಾಥೋಡ್ ನೇಮಕ – vishwanews24

ಗುಜರಾತ್ ಮುಖ್ಯಮಂತ್ರಿ ಹರ್ಷ ಸಾಂಘ್ವಿ ನ್ಯಾಯಾಲಯದ ತೀರ್ಪನ್ನು ಸ್ವಾಗತಿಸಿದ್ದಾರೆ. ತಾಯಿ ಹಸುವಿನ ರಕ್ಷಣೆ ಗುಜರಾತ್‌ನ ದೃಢ ಸಂಕಲ್ಪವಾಗಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ಗೋಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಿರುವುದು ಹಾಗೂ ನ್ಯಾಯಾಲಯದ ತೀರ್ಪಿನಲ್ಲಿ ಧಾರ್ಮಿಕ ಗ್ರಂಥಗಳ ಉಲ್ಲೇಖ ಮಾಡಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ.

Leave a Reply