ನಾನು ಸಿಎಂ ಆಗಿರುವುದನ್ನು ವಿಪಕ್ಷಗಳಿಗೆ ಸಹಿಸಲಾಗುತ್ತಿಲ್ಲ : ಡಿ.ಕೆ. ಶಿವಕುಮಾರ್ – vishwanews24
ನಾನು ಸಿಎಂ ಆಗಿರುವುದನ್ನು ವಿಪಕ್ಷಗಳಿಗೆ ಸಹಿಸಲಾಗುತ್ತಿಲ್ಲ ; ದಿನವೂ ನನ್ನ ವಿರುದ್ಧ ನೆಗೆಟಿವ್ ಹುಡುಕುತ್ತಾರೆ : ಡಿ.ಕೆ. ಶಿವಕುಮಾರ್
ಮೈಸೂರು: ನಾನು ಸಿಎಂ ಆಗಿರುವುದು ವಿಪಕ್ಷಗಳಿಗೆ ಸಹಿಸಲು ಆಗುತ್ತಿಲ್ಲ. ದಿನವೂ ನನ್ನ ಬಗ್ಗೆ ನೆಗೆಟಿವ್ ಹುಡುಕುತ್ತಾರೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಮೈಸೂರಿನಲ್ಲಿ ತಮ್ಮ ಕುರಿತಾದ ನೂತನ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, “ನನ್ನ ಬದುಕು ತೆರೆದ ಪುಸ್ತಕ. ನಾನು ಜೈಲಿನಲ್ಲಿ ಕೂತಿದ್ದಾಗಲೇ ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರುತ್ತೇನೆ ಮತ್ತು ನಾನು ಮುಖ್ಯಮಂತ್ರಿಯಾಗುತ್ತೇನೆ ಎಂದು ಯೋಚನೆ ಮಾಡಿದ್ದೆ. ನಾನು ಸುಮ್ಮನೆ ಬಂದು ಈ ಸಿಎಂ ಸೀಟಿನಲ್ಲಿ ಕೂತಿಲ್ಲ. 35 ವರ್ಷಗಳ ಹಿಂದೆಯೇ ನಾನು ಮುಖ್ಯಮಂತ್ರಿಯಾಗುತ್ತೇನೆ ಎಂದು ಜ್ಯೋತಿಷಿಗಳು ಹೇಳಿದ್ದರು. ಎಷ್ಟೋ ನಾಯಕರನ್ನು ಬೆಳೆಸಿ, ಶ್ರಮಪಟ್ಟು ಇಲ್ಲಿ ಬಂದು ಕುಳಿತಿದ್ದೇನೆ” ಎಂದು ಹೇಳಿದರು.
“ನಾನು ಸಿದ್ದರಾಮಯ್ಯನವರಿಗೆ ಎಂದಿಗೂ ಕೇಡು ಬಯಸಿಲ್ಲ, ಮುಂದೆಯೂ ಬಯಸುವುದಿಲ್ಲ. ಹೆಚ್.ಡಿ. ಕುಮಾರಸ್ವಾಮಿ ಜೊತೆ ಸರ್ಕಾರ ನಡೆಸುವಾಗಲೂ ಅವರಿಗೆ ಕೆಡಕನ್ನು ಬಯಸಲಿಲ್ಲ. ಆದರೆ ಈಗ ಕುಮಾರಸ್ವಾಮಿಗೆ ನನ್ನನ್ನು ನೋಡಿ ಸಹಿಸಲು ಸಾಧ್ಯವಾಗುತ್ತಿಲ್ಲ. ‘ಅಯ್ಯೋ ಡಿಕೆ ಸಿಎಂ ಆಗಿಬಿಟ್ಟ’ ಎಂದು ಕೆಲವರು ಕೊರಗುತ್ತಿದ್ದಾರೆ. ಆದರೆ ನಾನು ತಾಳ್ಮೆಯಿಂದ ಇದ್ದೇನೆ, ಯಾರಿಗೂ ಮೋಸ ಮಾಡುವ ಮನಸ್ಸು ನನಗಿಲ್ಲ. ನಾನು ಸಿಎಂ ಆದರೂ ತನ್ವೀರ್ ಸೇಠ್ ಅವರನ್ನು ಮಂತ್ರಿ ಮಂಡಲಕ್ಕೆ ಸೇರಿಸಿಕೊಳ್ಳಲು ಆಗಲಿಲ್ಲ ಎಂಬ ದೊಡ್ಡ ನೋವು ನನಗಿದೆ” ಎಂದರು.
“ಎಸ್. ಬಂಗಾರಪ್ಪ, ಎಸ್.ಎಂ. ಕೃಷ್ಣ ಹಾಗೂ ಹೆಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗುವಲ್ಲಿ ನನ್ನ ಪಾತ್ರ ಏನಿತ್ತು ಎಂಬ ಬಗ್ಗೆ ಮಾತನಾಡುವುದು ಬಹಳಷ್ಟಿದೆ. ಅದನ್ನು ಮುಂದೆ ಯಾವಾಗಲಾದರೂ ಪುಸ್ತಕದಲ್ಲಿ ದಾಖಲಿಸುತ್ತೇನೆ. ನನ್ನ 48ನೇ ವಯಸ್ಸಿನಲ್ಲಿ ಮುಕ್ತ ವಿಶ್ವವಿದ್ಯಾಲಯದಿಂದ ಪದವಿ ಪಡೆದದ್ದು ಜೀವನದ ಅತ್ಯಂತ ಸಂತೋಷದ ದಿನವಾಗಿತ್ತು. ಆದರೆ ಅಂದು ಬಿಜೆಪಿಯ ಶಂಕರಮೂರ್ತಿ ಅವರು ನನ್ನನ್ನು ವೇದಿಕೆ ಹತ್ತಿಸದೆ ಅವಮಾನ ಮಾಡಿದ್ದರು” ಎಂದು ನೆನಪಿಸಿಕೊಂಡರು.
ಶಿರ್ವ: ಗೂಗಲ್ ಪೇಗೆ ಹಣ ಜಮೆಯಾದ ನಕಲಿ ಸಂದೇಶ ಕಳುಹಿಸಿ ವ್ಯಕ್ತಿಗೆ ₹2.49 ಲಕ್ಷ ವಂಚನೆ – vishwanews24
