ಮಂಗಳೂರು: ಎಂಆರ್‌ಪಿಎಲ್ ತೈಲ ಸ್ಥಾವರದಲ್ಲಿ ಭಾರೀ ಸ್ಫೋಟ; -vishwanews24

Featured, ದಕ್ಷಿಣ ಕನ್ನಡ

ಮಂಗಳೂರು: ಎಂಆರ್‌ಪಿಎಲ್ ತೈಲ ಸ್ಥಾವರದಲ್ಲಿ ಭಾರೀ ಸ್ಫೋಟ..

ಬೈಕಂಪಾಡಿ, ಸುರತ್ಕಲ್, ಜೋಕಟ್ಟೆಯಲ್ಲಿ ಕಂಪಿಸಿದ ಕಟ್ಟಡಗಳು

ಮಂಗಳೂರು: ಎಂಆರ್‌ಪಿಎಲ್ ತೈಲ ಸ್ಥಾವರದಲ್ಲಿ ಭಾರೀ ಸ್ಫೋಟ ಸಂಭವಿಸಿದ್ದು ಸಮೀಪದ ಬಜ್ಜೆ ಕಳವಾರು, ಬೈಕಂಪಾಡಿ, ಜೋಕಟ್ಟೆ, ಸುರತ್ಕಲ್, ಕಾಟಿಪಳ್ಳ ಪ್ರದೇಶಗಳಲ್ಲಿ ಭೂಕಂಪದ ರೀತಿಯ ಅನುಭವವಾಗಿದೆ. ಜೊತೆಗೆ ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರೀ ಹೊಗೆ ಆವರಿಸಿದೆ.

ಮೂರನೇ ಪ್ಲಾಂಟ್ ಇರುವ ಕಟ್ಟಡದ ಕೆಳಭಾಗದಲ್ಲೇ ಬೆಂಕಿ, ದಟ್ಟ ಹೊಗೆ ಆವರಿಸಿದ್ದು ಒಳಗಡೆ ಏನಾಗಿದೆ ಎಂಬ ಮಾಹಿತಿ ಇನ್ನು ಲಭ್ಯವಾಗಿಲ್ಲ. ಸ್ಫೋಟದಿಂದ ಉಂಟಾದ ಭಾರೀ ಶಬ್ದವು ಬೈಕಂಪಾಡಿ, ಸುರತ್ಕಲ್ ವರೆಗೂ ಕೇಳಿಬಂದಿದೆ. ಮಂಗಳೂರು ಏರ್ಪೋಟ್ ಬಳಿಯೂ ದಟ್ಟ ಹೊಗೆ ಆವರಿಸಿದ್ದು, ಆತಂಕ ನಿರ್ಮಾಣವಾಗಿದೆ. ಘಟನೆ ಬಗ್ಗೆ ಎಂಆರ್‌ಪಿಎಲ್ ಅಧಿಕಾರಿಗಳು ಇನ್ನು ಅಧಿಕೃತ ಮಾಹಿತಿ ನೀಡಿಲ್ಲ.

ತೈಲ ಸ್ಥಾವರದ ಮೂರನೇ ಪ್ಲಾಂಟ್ ಇರುವ ಜೋಕಟ್ಟೆ ಏರಿಯಾದಲ್ಲಿ ಸ್ಫೋಟ ಸಂಭವಿಸಿದೆ. ಪರಿಣಾಮ ಅಲ್ಲಿಂದ ಭಾರೀ ಪ್ರಮಾಣದ ಬೆಂಕಿ ಮತ್ತು ಹೊಗೆ ಕಾಣಿಸಿಕೊಂಡಿದೆ. ಜೋಕಟ್ಟೆ ಪಂಚಾಯತ್ ಕಟ್ಟಡ ಸೇರಿದಂತೆ ಅಲ್ಲಿನ ಸುತ್ತಮುತ್ತಲಿನ ಮನೆಗಳು ಕಂಪಿಸಿದೆ. ಕೆಲವು ಕಟ್ಟಡಗಳು ಬಿರುಕು ಬಿಟ್ಟಿದ್ದು, ಬಾಗಿಲು ಕಿಟಕಿಗಳು ಉದುರಿವೆ. ಜನರು ಆತಂಕದಿಂದ ಹೊರಗೆ ಓಡಿ ಬಂದಿದ್ದಾರೆ. ಪಂಚಾಯತ್ ಕಟ್ಟಡದ ಬಳಿ ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದು ಆತಂಕದಲ್ಲಿದ್ದಾರೆಂದು ಡಿವೈಎಫ್‌ಐ ಪ್ರಮುಖರಾದ ಮುನೀರ್ ಕಾಟಿಪಳ್ಳ ಅವರು ಮಾಹಿತಿ ನೀಡಿದ್ದಾರೆ.

ಮಂಗಳೂರು, ಪಾಂಡೇಶ್ವರ ಸೇರಿದಂತೆ ಆಸುಪಾಸಿನ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದ್ದು ಕಾರ್ಯಾಚರಣೆ ನಡೆಸುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

 

Leave a Reply