ಮಂಗಳೂರು: ಕರ್ನಾಟಕ ಬ್ಯಾಂಕ್ ನೂತನ ಎಂಡಿ, ಸಿಇಒ ಆಗಿ ಉದಯ ಕುಮಾರ್ ಹೆಬ್ಬಾರ್ ನೇಮಕ – vishwanews24
ಮಂಗಳೂರು: ಕರ್ನಾಟಕ ಬ್ಯಾಂಕ್ ನೂತನ ಎಂಡಿ, ಸಿಇಒ ಆಗಿ ಉದಯ ಕುಮಾರ್ ಹೆಬ್ಬಾರ್ ನೇಮಕ
ಮಂಗಳೂರು : ಶತಮಾನಕ್ಕೂ ಅಧಿಕ ಇತಿಹಾಸ ಹೊಂದಿರುವ ಖಾಸಗಿ ವಲಯದ ಪ್ರಮುಖ ಬ್ಯಾಂಕ್ ಆದ ‘ಕರ್ನಾಟಕ ಬ್ಯಾಂಕ್’, ತನ್ನ ನೂತನ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (ಸಿಇಒ) ಉದಯ ಕುಮಾರ್ ಹೆಬ್ಬಾರ್ ಅವರನ್ನು ನೇಮಕ ಮಾಡಿರುವುದಾಗಿ ಘೋಷಿಸಿದೆ.
ಅಧಿಕಾರ ವಹಿಸಿಕೊಂಡ ದಿನದಿಂದ ಅನ್ವಯವಾಗುವಂತೆ ಮೂರು ವರ್ಷಗಳ ಅವಧಿಗೆ ಬ್ಯಾಂಕ್ನ ಹೆಚ್ಚುವರಿ ನಿರ್ದೇಶಕ, ಪೂರ್ಣಾವಧಿ ನಿರ್ದೇಶಕ ಹಾಗೂ ಪ್ರಮುಖ ವ್ಯವಸ್ಥಾಪಕ ಸಿಬ್ಬಂದಿಯಾಗಿ ಉದಯ ಕುಮಾರ್ ಹೆಬ್ಬಾರ್ ಕಾರ್ಯನಿರ್ವಹಿಸಲಿದ್ದಾರೆ. ಕಂಪನಿಗಳ ಕಾಯ್ದೆ 2013ರ ನಿಬಂಧನೆಗಳು ಮತ್ತು ಲಿಸ್ಟಿಂಗ್ ನಿಯಮಾವಳಿಗಳ ಪ್ರಕಾರ, ಈ ನೇಮಕಾತಿಯು ಬ್ಯಾಂಕ್ನ ಷೇರುದಾರರ ಅನುಮೋದನೆಗೆ ಒಳಪಟ್ಟಿರುತ್ತದೆ.
ಉದಯ ಕುಮಾರ್ ಅವರ ಅಪಾರ ಅನುಭವ, ಕಾರ್ಯತಂತ್ರದ ದೃಷ್ಟಿಕೋನ ಮತ್ತು ಸಮರ್ಥ ನಾಯಕತ್ವವು ಬ್ಯಾಂಕ್ನ ಪ್ರಗತಿಯ ಪಯಣಕ್ಕೆ ಮತ್ತಷ್ಟು ವೇಗ ನೀಡಲಿದ್ದು, ಭಾರತೀಯ ಬ್ಯಾಂಕಿಂಗ್ ವಲಯದಲ್ಲಿ ಬ್ಯಾಂಕ್ನ ಸ್ಥಾನವನ್ನು ಇನ್ನಷ್ಟು ಬಲಪಡಿಸಲಿದೆ ಎಂದು ಕರ್ನಾಟಕ ಬ್ಯಾಂಕ್ ತಿಳಿಸಿದೆ.
ನಾಲ್ಕು ದಶಕಗಳ ಶ್ರೀಮಂತ ಅನುಭವ:
ಉದಯ ಕುಮಾರ್ ಹೆಬ್ಬಾರ್ ಅವರು ಬ್ಯಾಂಕ್ಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿ (NBFC) ನಾಲ್ಕು ದಶಕಗಳಿಗೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಬ್ಯಾಂಕಿಂಗ್ ಕಾರ್ಯಾಚರಣೆಗಳು, ವಾಣಿಜ್ಯ ಬ್ಯಾಂಕಿಂಗ್, ಗ್ರಾಮೀಣ ಮತ್ತು ಕೃಷಿ ಹಣಕಾಸು, ಮೈಕ್ರೋ-ಬ್ಯಾಂಕಿಂಗ್, ಕಾರ್ಪೊರೇಟ್ ಆಡಳಿತ ಮತ್ತು ರಿಸ್ಕ್ ಮ್ಯಾನೇಜ್ಮೆಂಟ್ ಕ್ಷೇತ್ರಗಳಲ್ಲಿ ಅವರು ಪರಿಣತಿ ಹೊಂದಿದ್ದಾರೆ.
ಕರ್ನಾಟಕ ಬ್ಯಾಂಕ್ ಸೇರುವ ಮುನ್ನ, ಅವರು ಸೆಪ್ಟೆಂಬರ್ 2010ರಿಂದ ಜೂನ್ 2015ರವರೆಗೆ ‘ಕ್ರೆಡಿಟ್ ಆಕ್ಸೆಸ್ ಗ್ರಾಮೀಣ್ ಲಿಮಿಟೆಡ್’ನ ಸಿಇಒ ಆಗಿ ಹಾಗೂ ನಂತರ ಜೂನ್ 2015ರಿಂದ ಜೂನ್ 2025ರವರೆಗೆ ಅದರ ಎಂಡಿ ಮತ್ತು ಸಿಇಒ ಆಗಿ ಸೇವೆ ಸಲ್ಲಿಸಿದ್ದರು. ತಮ್ಮ ಕಾರ್ಯನಿರ್ವಾಹಕ ಅವಧಿಯ ನಂತರವೂ ಅವರು ಆ ಸಂಸ್ಥೆಯ ಮಂಡಳಿಯಲ್ಲಿ ಕಾರ್ಯನಿರ್ವಾಹಕೇತರ ನಿರ್ದೇಶಕರಾಗಿ ಮುಂದುವರಿದಿದ್ದರು. ಅಲ್ಲದೆ, ಕ್ರೆಡಿಟ್ ಆಕ್ಸೆಸ್ ಲೈಫ್ ಇನ್ಶುರೆನ್ಸ್ ಲಿಮಿಟೆಡ್ ಮತ್ತು ಆಮ್ಸ್ಟರ್ಡ್ಯಾಮ್ನ ಕ್ರೆಡಿಟ್ ಆಕ್ಸೆಸ್ ಇಂಡಿಯಾ ಬಿವಿ ಸೇರಿದಂತೆ ಹಲವು ಸಂಸ್ಥೆಗಳ ಆಡಳಿತ ಮಂಡಳಿಯಲ್ಲಿಯೂ ಉನ್ನತ ಹುದ್ದೆಗಳನ್ನು ನಿರ್ವಹಿಸಿದ್ದಾರೆ.
ಇದಕ್ಕೂ ಮುನ್ನ ತಮ್ಮ ವೃತ್ತಿಜೀವನದಲ್ಲಿ ಬಾಕ್ಲೇðಸ್ ಬ್ಯಾಂಕ್ ಪಿಎಲ್ಸಿ, ಐಸಿಐಸಿಐ ಬ್ಯಾಂಕ್ ಲಿಮಿಟೆಡ್ ಮತ್ತು ಕಾರ್ಪೊರೇಷನ್ ಬ್ಯಾಂಕ್ನಂತಹ ಪ್ರತಿಷ್ಠಿತ ಬ್ಯಾಂಕಿಂಗ್ ಸಂಸ್ಥೆಗಳಲ್ಲಿ ಪ್ರಮುಖ ನಾಯಕತ್ವ ಮತ್ತು ಕಾರ್ಯಾಚರಣೆಯ ಹುದ್ದೆಗಳನ್ನು ನಿರ್ವಹಿಸಿ, ವಿವಿಧ ಬ್ಯಾಂಕಿಂಗ್ ವಿಭಾಗಗಳಲ್ಲಿ ವ್ಯಾಪಕ ಅನುಭವ ಪಡೆದಿದ್ದಾರೆ.
