ಮಹಂತ ನರೇಂದ್ರ ಗಿರಿ ಆತ್ಮಹತ್ಯೆ: ಅವರ ಮೂವರು ಶಿಷ್ಯಂದಿರ ಬಂಧನ -Vishwanews24
ಮಹಂತ ನರೇಂದ್ರ ಗಿರಿ ಆತ್ಮಹತ್ಯೆ: ಅವರ ಮೂವರು ಶಿಷ್ಯಂದಿರ ಬಂಧನ -Vishwanews24
ಲಖನೌ: ಅಖಿಲ ಭಾರತೀಯ ಅಖಾಡ ಪರಿಷತ್ ಅಧ್ಯಕ್ಷ ಮಹಾಂತ ನರೇಂದ್ರ ಗಿರಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಮೂವರು ಶಿಷ್ಯಂದಿರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಆನಂದಗಿರಿ, ಆದ್ಯ ತಿವಾರಿ ಮತ್ತು ಸಂದೀಪ್ ತಿವಾರಿ ಎಂದು ಗುರುತಿಸಲಾಗಿದೆ. ಆನಂದಗಿರಿಯನ್ನು ಹರಿದ್ವಾರದಲ್ಲಿ ಹಾಗೂ ಇನ್ನಿಬ್ಬರನ್ನು ಪ್ರಯಾಗ್‌ರಾಜ್‌ನಲ್ಲಿ ಪೊಲೀಸರು ಬಂಧಿಸಿದ್ದಾರೆ. ಮೂವರ ವಿರುದ್ಧ ಐಪಿಸಿ ಸೆಕ್ಷನ್ 306ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಂಧಿತರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಆರೋಪದ ಅಡಿ ಐಪಿಸಿ ಸೆಕ್ಷನ್ 306ರ ಪ್ರಕಾರ ಪ್ರಕರಣ ದಾಖಲಿಸಿದ್ದಾರೆ.
ಉತ್ತರ ಪ್ರದೇಶದ ಪ್ರಯಾಗ್ ರಾಜ್ ಪಟ್ಟಣದಲ್ಲಿ ಬಘಾಂಬರಿ ಮಠದಲ್ಲಿನ ಕೊಠಡಿಯೊಳಗೆ ನೇಣುಬಿಗಿದ ಸ್ಥಿತಿಯಲ್ಲಿ ನರೇಂದ್ರ ಗಿರಿ ಅವರ ದೇಹ ಪತ್ತೆಯಾಗಿತ್ತು. ಪೊಲೀಸ್ ಮೂಲಗಳ ಪ್ರಕಾರ ಗಿರಿ ಅವರ ಕೊಠಡಿಯಲ್ಲಿ ಎಂಟು ಪುಟಗಳ ಆತ್ಮಹತ್ಯಾ ಪತ್ರ ಪತ್ತೆಯಾಗಿದೆ.
ಈ ಪತ್ರದಲ್ಲಿ ಮಹಾಂತ ಅವರು ‘ನನ್ನ ಮೂವರು ಶಿಷ್ಯಂದಿರು ನನಗೆ ಕಿರುಕುಳ ನೀಡುತ್ತಿದ್ದರು. ನಾನು ತುಂಬಾ ಘನತೆ ಮತ್ತು ಗೌರವದಿಂದ ಜೀವನ ನಡೆಸುತ್ತಿದ್ದೆ. ಆದರೆ, ಇತ್ತೀಚೆಗೆ ಶಿಷ್ಯಂದಿರ ಕಿರುಕುಳದಿಂದಾಗಿ ಅವಮಾನ ಅನುಭವಿಸಿ ಬದುಕುವಂತಾಯಿತು‘ ಎಂದು ಬರೆದಿರುವುದಾಗಿ ಪ್ರಯಾಗ್‌ರಾಜ್‌ನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಪತ್ರದಲ್ಲಿ ತಮಗೆ ಕಿರುಕುಳ ನೀಡಿದ ಮೂವರು ಶಿಷ್ಯಂದಿರ ಹೆಸರನ್ನು ಬರೆದಿರುವುದಾಗಿ ಮೂಲಗಳು ತಿಳಿಸಿವೆ. ಈ ಪತ್ರದ ಆಧಾರದ ಮೇಲೆ ಪೊಲೀಸರು ಶಿಷ್ಯಂದಿರನ್ನು ಬಂಧಿಸಿದ್ದಾರೆ.
