ಮಾ.31ರಂದು ರಾಜ್ಯಕ್ಕೆ ರಾಹುಲ್ ಗಾಂಧಿ ಭೇಟಿ – Vishwanews24

Featured, ರಾಜ್ಯ ನ್ಯೂಸ್

ಶ್ರೀ ಶಿವಕುಮಾರ ಸ್ವಾಮೀಜಿ ಅವರ 115ನೇ ಜಯಂತಿ ; ಸಿದ್ದಗಂಗಾ ಮಠಕ್ಕೆ ಭೇಟಿ..

ಬೆಂಗಳೂರು: ಶ್ರೀ ಶಿವಕುಮಾರ ಸ್ವಾಮೀಜಿ ಅವರ 115ನೇ ಜಯಂತಿ ಕಾರ್ಯಕ್ರಮ ನಿಮಿತ್ತ ಮಾ. 31 ರಂದು ನಮ್ಮ ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿ ಅವರು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಮಾ. 31 ರ ಮಧ್ಯಾಹ್ನ 3.30 ಕ್ಕೆ ತುಮಕೂರು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಅವರ ಗದ್ದುಗೆಗೆ ಪೂಜೆ, ಗೌರವ ಸಲ್ಲಿಸುವರು. ಅಂದು ಮಧ್ಯಾಹ್ನ 2 ಗಂಟೆಗೆ ಬೆಂಗಳೂರು ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ಅಲ್ಲಿಂದ ನೇರವಾಗಿ ಸಿದ್ದಗಂಗಾ ಮಠಕ್ಕೆ ತೆರಳಿ, ಅಲ್ಲಿಯೇ ಪ್ರಸಾದ ಸ್ವೀಕರಿಸುತ್ತಾರೆ. ನಂತರ ಬೆಂಗಳೂರಿಗೆ ಬಂದು ಕಾಂಗ್ರೆಸ್ ಕಚೇರಿಯಲ್ಲಿ ಸಭೆ ನಡೆಸಿ ಬಿಬಿಎಂಪಿ ವ್ಯಾಪ್ತಿ ನಾಯಕರನ್ನು ಭೇಟಿ ಮಾಡಲಿದ್ದಾರೆ. ನಂತರ ಏ.1 ರಂದು ಎಲ್ಲ ಶಾಸಕರು, ಮಾಜಿ ಶಾಸಕರು, 2018 ರ ಚುನಾವಣೆ ಪರಾಜಿತ ಅಭ್ಯರ್ಥಿಗಳು, ಸಂಸತ್ ಚುನಾವಣೆ ಪರಾಜಿತ ಅಭ್ಯರ್ಥಿಗಳು, ಮಾಜಿ ಸಂಸದರು, ವಿವಿಧ ಘಟಕಗಳ ಅಧ್ಯಕ್ಷರ ಜತೆ ಸಭೆ ಮಾಡಲಿದ್ದಾರೆ ಎಂದು ತಿಳಿಸಿದರು.

ಜೂಮ್ ಮುಲಕ ಪಕ್ಷದ ಸದಸ್ಯತ್ವ ನೋಂದಣಿಯಲ್ಲಿ ಸಕ್ರಿಯವಾಗಿರುವವರ ಜತೆ ಸಂಪರ್ಕ ಮಾಡಲಾಗುವುದು.ರಾಜ್ಯದಲ್ಲಿ ಈಗಾಗಲೇ 47 ಲಕ್ಷ ಕಾಂಗ್ರೆಸ್ ಸದಸ್ಯರನ್ನು ನೋಂದಣಿ ಮಾಡಲಾಗಿದ್ದು, ಇಡೀ ದೇಶದಲ್ಲಿ ರಾಜ್ಯ ಮೊದಲ ಸ್ಥಾನದಲ್ಲಿದೆ. ಇನ್ನು ತಾಂತ್ರಿಕ ಕಾರಣದಿಂದ ಪ್ರಾವಿಷನ್ ಆಗಿರುವ ಸದಸ್ಯತ್ವ ಬೇರೆ ಇದೆ. ಸದಸ್ಯತ್ವ ನೋಂದಣಿ ಅವಧಿ ವಿಸ್ತರಣೆ ಮಾಡಬೇಕು ಎಂದು ಕೆಲವರು ಮನವಿ ಮಾಡಿದ್ದು, ಈ ಬಗ್ಗೆ ದೆಹಲಿ ನಾಯಕರು ತೀರ್ಮಾನ ಮಾಡುತ್ತಾರೆ. 31 ರಂದು ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ ಎಂದರು.

ಬ್ಲಾಕ್ ಮಟ್ಟದಿಂದ ರಾಷ್ಟ್ರ ಮಟ್ಟದವರೆಗೂ ಪಕ್ಷದ ವಿವಿಧ ಚುನಾವಣೆಗಳು ತೀರ್ಮಾನ ಆಗಿದ್ದರಿಂದ ನಾವು ತರಾತುರಿಯಲ್ಲಿ ಸದಸ್ಯತ್ವ ಮಾಡಿದ್ದೇವೆ. ಎಲ್ಲವೂ ನೈಜ ಸದಸ್ಯತ್ವವಾಗಿವೆ. ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡವರ ಜತೆ ಮಾತನಾಡಬೇಕು ಎಂದು ರಾಹುಲ್ ಗಾಂಧಿ ಅವರು ಬಯಸಿದ್ದಾರೆ. ಇನ್ನು ಯೂತ್ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್, ಎನ್‌ಎಸ್ ಯು ಐ , ಸೇವಾದಳ ಹಾಗೂ ಮುಂಚೂಣಿ ಘಟಕಗಳ ಮುಖ್ಯಸ್ಥರ ಜತೆ ಪ್ರತ್ಯೇಕ ಸಭೆ ಮಾಡಲಿದ್ದಾರೆ ಎಂದರು.

ಪದ್ಮಶ್ರೀ ಪ್ರಶಸ್ತಿ ಸ್ವೀಕಾರ ಮಾಡಿದ ದಕ್ಷಿಣ ಕನ್ನಡ ಜಿಲ್ಲೆಯ ಪಗ್ರತಿಪರ ಕೃಷಿಕ ಅಮೈ ಮಹಾಲಿಂಗ ನಾಯ್ಕ – Vishwanews24

Leave a Reply