ಮುಖ್ಯಮಂತ್ರಿ ನಿವಾಸ ಹಾಗೂ ವಿಧಾನಸೌಧಕ್ಕೆ ಹುಸಿ ಬಾಂಬ್ ಬೆದರಿಕೆ ಕರೆ : ಆರೋಪಿ ಬಂಧನ -vishwanews24

Featured, ರಾಜ್ಯ ನ್ಯೂಸ್

ಮುಖ್ಯಮಂತ್ರಿ ನಿವಾಸ ಹಾಗೂ ವಿಧಾನಸೌಧಕ್ಕೆ ಹುಸಿ ಬಾಂಬ್ ಬೆದರಿಕೆ ಕರೆ : ಆರೋಪಿ ಬಂಧನ

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸದಾಶಿವ ನಗರದ ನಿವಾಸ ಹಾಗೂ ವಿಧಾನಸೌಧಕ್ಕೆ ಹುಸಿ ಬಾಂಬ್ ಬೆದರಿಕೆ ಕರೆ ಮಾಡಿದ್ದ ಆರೋಪಿಯನ್ನು ಸದಾಶಿವ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕಾರ್ತೀಕ್ ಬಂಧಿತ ಆರೋಪಿ. ಈತ ನ.7ರಂದು ಸಿಎಂ ನಿವಾಸ ಹಾಗೂ ವಿಧಾನಸೌಧಕ್ಕೆ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಕರೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಏನು..?

ನವೆಂಬರ್ 7ರಂದು ಆರೋಪಿ ಕಾರ್ತಿಕ್ ‘ನಮ್ಮ ಯಾತ್ರಿ’ ಆ್ಯಪ್ ಮೂಲಕ ಆಟೋ ರಿಕ್ಷಾವೊಂದನ್ನು ಸದಾಶಿವ ನಗರದಿಂದ ಆರ್.ಆರ್. ನಗರಕ್ಕೆ ತೆರಳಲೆಂದು ಬುಕ್ ಮಾಡಿದ್ದಾನೆ. ಕಾರ್ತಿಕ್ ಪಿಕ್ ಅಪ್ ಲೋಕೇಷನ್ ಕಳುಹಿಸಿದ್ದು, ಆ ಲೋಕೇಷನ್ ಸಿಎಂ ನಿವಾಸದ ಬಳಿ ತೋರಿಸುತ್ತಿತ್ತು. ಅದರಂತೆ ಲೋಕೇಷನ್ ಗೆ ಆಗಮಿಸಿದ ಆಟೋ ಚಾಲಕ ಕಾರ್ತಿಕ್ ಮೊಬೈಲ್ ಗೆ ಮಾಡಿದಾಗ, ”ನಾನು ಮುಖ್ಯಮಂತ್ರಿಯ ಮನೆಯಲ್ಲಿ ಇದ್ದೀನಿ. ಅಲ್ಲಿ ಬ್ಯಾರಿಕೇಡ್ ಬಳಿಯಿರುವ ಪೊಲೀಸರಿಗೆ ಒಮ್ಮೆ ಪೋನ್ ಕೊಡಿ” ಸೂಚಿಸಿದ್ದಾನೆ. ಅದರಂತೆ ಆಟೋ ಚಾಲಕ ಪೊಲೀಸರಿಗೆ ಮೊಬೈಲ್ ಫೋನ್ ನೀಡಿದಾಗ, ಸದಾಶಿವ ನಗರದಲ್ಲಿರುವ ಸಿಎಂ ನಿವಾಸ ಹಾಗೂ ವಿಧಾನಸೌಧದಲ್ಲಿ ಬಾಂಬ್ ಇಟ್ಟಿರುವುದಾಗಿ ಕಾರ್ತಿಕ್ ಬೆದರಿಕೆ ಹಾಕಿದ್ದಾನೆ. ಅಲ್ಲದೆ, ಮುಖ್ಯಮಂತ್ರಿಯ ಬೆಂಗಾವಲು ಪಡೆ ತೆರಳುವ ಸಂದರ್ಭದಲ್ಲಿ ಸ್ಫೋಟ ಸಂಭವಿಸಲಿದೆ ಎಂದೂ ಹೇಳಿ ಕರೆ ಕಟ್ ಮಾಡಿದ್ದಾನೆ.

ತಕ್ಷಣ ಗಾಬರಿಯಾದ ಪೊಲೀಸರು, ಪಿಕಪ್ ಗೆ ಬಂದಿದ್ದ ಆಟೋವನ್ನು ಪರಿಶೀಲಿಸಿದ್ದಾರೆ. ಬಳಿಕ ಎಲ್ಲ ಕಡೆ ಪರಿಶೀಲನೆ ನಡೆಸಿದ್ದು, ಅಂತಿಮವಾಗಿ ಅದೊಂದು ಹುಸಿ ಬೆದರಿಕೆ ಕರೆ ಎಂಬುದು ಮನವರಿಕೆ ಆಗಿತ್ತು.

ಘಟನೆಯ ಬಗ್ಗೆ ಆಟೋ ಚಾಲಕ ನೀಡಿರುವ ದೂರಿನಂತೆ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಇದೀಗ ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿ ಕಾರ್ತಿಕ್ ಈ ಹಿಂದೆಯೂ ಹಲವು ಬಾರಿ ಹುಸಿ ಬೆದರಿಕೆ ಕರೆ ಮಾಡಿದ್ದ. ಆತ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Leave a Reply