ಶಬರಿಮಲೆಗೆ ಮಹಿಳೆಯರ ಪ್ರವೇಶ : ಹಿಂದೂ ಸಂಘಟನೆಗಳಿಂದ ಪ್ರತಿಭಟನೆ
ಪತ್ತನಂತಿಟ್ಟ: ಶಬರಿಮಲೆಗೆ ಮಹಿಳೆಯರಿಗೆ ಪ್ರವೇಶ ಕಲ್ಪಿಸಿದ ಸುಪ್ರೀಂಕೋರ್ಟ್ ತೀರ್ಪು ವಿರುದ್ಧ ಹಿಂದೂ ಸಂಘಟನೆಗಳು ಮಂಗಳವಾರ ಪತ್ತನಂತಿಟ್ಟ, ಕೊಲ್ಲಂ, ಆಲಪ್ಪುಳ, ಎರ್ನಾಕುಳಂ, ಪಾಲಕ್ಕಾಡ್ ಜಿಲ್ಲೆಗಳಲ್ಲಿ ರಸ್ತೆ ತಡೆಯುವ ಮೂಲಕ ಪ್ರತಿಭಟನೆ ನಡೆಸಿವೆ.
ಪ್ರತಿಭಟನೆಗಳಲ್ಲಿ ಮಹಿಳೆಯರೂ ಭಾಗವಹಿಸಿದ್ದರು. ಪಂಪಾ ತೀರದಲ್ಲಿ ನಾಮಜಪ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಪಾಲಕ್ಕಾಡ್ ಮರುತ ರೋಡ್‍ನಲ್ಲಿ ಹಿಂದೂ ಪರಿಷತ್ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿದ್ದಾರೆ, ಕೊಯಂಬತ್ತೂರ್- ತ್ರಿಶ್ಶೂರ್ ರಸ್ತೆಯಲ್ಲಿ ಅರ್ಧ ಗಂಟೆ ಕಾಲ ಸಂಚಾರ ಸ್ಥಗಿತಗೊಂಡಿತ್ತು. ಕೊಚ್ಚಿಯಲ್ಲಿ ಪ್ರತಿಭಟನಾಕಾರರು ವಾಹನಗಳಿಗೆ ತಡೆಯೊಡ್ಡಿದಾಗ ಸಂಘರ್ಷವೇರ್ಪಟ್ಟಿದೆ ಆಲಪ್ಪುಳದಲ್ಲಿ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ.
ಶಬರಿಮಲೆ ವಿಷಯದಲ್ಲಿ ಅಂತಿಮ ತೀರ್ಪು ಪ್ರಕಟಿಸುವ ಮುನ್ನವೇ ಮಹಿಳೆಯರಿಗೆ ಪ್ರವೇಶ ಕಲ್ಪಿಸಲು ಪಿಣರಾಯಿ ವಿಜಯನ್ ಸರ್ಕಾರ ಉತ್ಸಾಹ ತೋರಿಸುತ್ತಿದೆ .ಮಹಿಳಾ ಪೊಲೀಸರೊಂದಿಗೆ ಪಿಣರಾಯಿ ಸರ್ಕಾರ ಶಬರಿಮಲೆಗೆ ಬಂದರೆ ಗಾಂಧೀ ಮಾರ್ಗದ ಮೂಲಕ ತಾವು ಪ್ರತಿಭಟನೆ ನಡೆಸುವುದಾಗಿ ಬಿಜೆಪಿ ರಾಜ್ಯ ಅಧ್ಯಕ್ಷ ಪಿ.ಎಸ್ ಶ್ರೀಧರನ್ ಪಿಳ್ಳೆ ಪಿಳ್ಳೆ ಕಣ್ಣೂರಿನಲ್ಲಿ ಹೇಳಿದ್ದಾರೆ.
ಈ ನಡುವೆ, ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರು ಹೋಗಬಹುದು ಎಂದು ಸುಪ್ರೀಂಕೋರ್ಟ್ ತೀರ್ಪನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಬೇಕೆ? ಎಂಬುದರ ಬಗ್ಗೆ ತೀರ್ಮಾನಿಸಲು ದೇವಸ್ವಂ ಮಂಡಳಿ ಬುಧವಾರ ಸಭೆ ಸೇರಲಿದೆ. ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ತಜ್ಞರ ಅಭಿಪ್ರಾಯಗಳನ್ನು ಸ್ವೀಕರಿಸಿ ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳಲಾಗುವುದು ಎಂದು ದೇವಸ್ವಂ ಮಂಡಳಿ ಹೇಳಿದೆ.
ನಮ್ಮ ಪಕ್ಷ ಹಿಂದೂಗಳ ಒಳಿತು ಬಯಸುತ್ತದೆ. ಈ ವಿಷಯದಲ್ಲಿ ಸಂಘ ಪರಿವಾರ್ ಮತ್ತು ನಮಗೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ, ಉತ್ತರ ಭಾರತದಲ್ಲಿನ ದೇವಾಲಯಗಳಲ್ಲಿ ಎಲ್ಲ ವಯಸ್ಸಿನ ಮಹಿಳೆಯರಿಗೆ ಪ್ರವೇಶವಿರುವುದನ್ನು ನೋಡಿ ರಾಷ್ಟ್ರ ಮಟ್ಟದಲ್ಲಿನ ಆರ್‌ಎಸ್‌ಎಸ್ ಸುಪ್ರೀಂಕೋರ್ಟ್ ತೀರ್ಪನ್ನು ಸ್ವಾಗತಿಸಿದೆ. ಆದರೆ ಕೇರಳದಲ್ಲಿನ ಪರಿಸ್ಥಿತಿಯೇ ಬೇರೆ. ಸುಪ್ರೀಂಕೋರ್ಟಿನ ತೀರ್ಪಿನ ನೆಪದಲ್ಲಿ ಶಬರಿಮಲೆಯನ್ನು ನಾಶಪಡಿಸುವ ಸಿಪಿಎಂ ಯತ್ನಗಳನ್ನು ತಡೆಯಲು ಬಿಜೆಪಿ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಪಿ.ಎಸ್ ಶ್ರೀಧರನ್ ಪಿಳ್ಳೆ ಹೇಳಿರುವುದಾಗಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ವರದಿ ಪ್ರಕಾರ ಶಬರಿಮಲೆಗೆ ಮಹಿಳೆಯರ ಪ್ರವೇಶ ತೀರ್ಪು ಬಗ್ಗೆ ತಮ್ಮ ನಿಲುವು ಪ್ರಕಟಿಸಲು ಬಿಜೆಪಿ ಮತ್ತು ಸಂಘ ಪರಿವಾರ ಅಕ್ಟೋಬರ್ 8ರಂದು ಕೊಚ್ಚಿಯಲ್ಲಿ ಸಭೆ ಸೇರಲಿದೆ. ಮಹಿಳೆಯರ ಪ್ರವೇಶ ಬಗ್ಗೆ ಕೇರಳ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಬೇಕೆಂದು ಒತ್ತಾಯಿಸುವುದರ ಜತೆಗೆ ಮೇಲ್ಮನವಿ ಸಲ್ಲಿಸುವ ಬಗ್ಗೆಯೂ ಬಿಜೆಪಿ ಚಿಂತನೆ ನಡೆಸಲಿದೆ.

