ಹಬ್ಬದ ಸಂಭ್ರಮ ಉಜ್ವಲ ಫಲಾನುಭವಿಗಳಿಗೆ ಉಚಿತ ಗ್ಯಾಸ್ ಸಿಲಿಂಡರ್ ಘೋಷಣೆ: ಯೋಗಿ ಆದಿತ್ಯನಾಥ್  – vishwanews24

Featured, ರಾಷ್ಟ್ರ ನ್ಯೂಸ್

ಹಬ್ಬದ ಸಂಭ್ರಮ ಉಜ್ವಲ ಫಲಾನುಭವಿಗಳಿಗೆ ಉಚಿತ ಗ್ಯಾಸ್ ಸಿಲಿಂಡರ್ ಘೋಷಣೆ: ಯೋಗಿ ಆದಿತ್ಯನಾಥ್ 

ಲಖನೌ : ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಮಹತ್ವದ ಸಿಹಿ ಸುದ್ದಿ ನೀಡಿದ್ದಾರೆ. ದೀಪಾವಳಿ ಮತ್ತು ಹೋಳಿ ಹಬ್ಬದ ಸಂದರ್ಭದಲ್ಲಿ ಅರ್ಹ ಉಜ್ವಲ ಯೋಜನೆಯ ಕುಟುಂಬಗಳಿಗೆ ತಲಾ ಒಂದು ಉಚಿತ ಎಲ್‌ಪಿಜಿ ಸಿಲಿಂಡರ್ ನೀಡಲಾಗುವುದು ಎಂದು ಮಂಗಳವಾರ ಘೋಷಿಸಿದ್ದಾರೆ.

ರಾಜ್ಯದ 1.89 ಕೋಟಿಗೂ ಅಧಿಕ ಫಲಾನುಭವಿಗಳಿಗೆ ಗ್ಯಾಸ್ ಸಿಲಿಂಡರ್ ಮರುಪೂರಣ ಸಬ್ಸಿಡಿ ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಯೋಜನೆಗಾಗಿ ರಾಜ್ಯ ಸರ್ಕಾರ 1,500 ಕೋಟಿ ರೂ. ಅನುದಾನ ಮೀಸಲಿಟ್ಟಿದೆ ಎಂದು ತಿಳಿಸಿದರು. ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 983.45 ರೂ.ಗಳಾಗಿದ್ದು, ಇದರಲ್ಲಿ ಕೇಂದ್ರ ಸರ್ಕಾರ 335 ರೂ. ಸಬ್ಸಿಡಿ ನೀಡುತ್ತದೆ. ಉಳಿದ 648.55 ರೂ.ಗಳನ್ನು ಗ್ರಾಹಕರು ಪಾವತಿಸಬೇಕಾಗುತ್ತದೆ ಎಂದು ಯೋಗಿ ವಿವರಿಸಿದರು.

ನಕ್ಸಲ್ ಮುಂಡಗಾರು ಲತಾ ವಶಕ್ಕೆ ಪಡೆದ ಉಪ್ಪಿನಂಗಡಿ ಪೊಲೀಸರು – vishwanews24

ಆದರೆ, ಉಜ್ವಲ ಯೋಜನೆಯಡಿ ನೋಂದಾಯಿಸಿಕೊಂಡಿರುವ ಅರ್ಹ ಬಡ ಕುಟುಂಬಗಳಿಗೆ ದೀಪಾವಳಿ ಮತ್ತು ಹೋಳಿ ಸಂದರ್ಭದಲ್ಲಿ ಉಚಿತ ಸಿಲಿಂಡರ್ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದರಿಂದ ಕುಟುಂಬಗಳಿಗೆ ಆರ್ಥಿಕ ಹೊರೆ ಕಡಿಮೆಯಾಗಲಿದ್ದು, ಉಳಿಯುವ ಹಣವನ್ನು ಹಬ್ಬದ ಸಿಹಿತಿಂಡಿ ಹಾಗೂ ದೀಪಗಳ ಖರೀದಿಗೆ ಬಳಸಿಕೊಳ್ಳಬಹುದು ಎಂದು ಅವರು ಹೇಳಿದರು. ಇದೇ ವೇಳೆ ಹಿಂದಿನ ಕಾಂಗ್ರೆಸ್ ಸರ್ಕಾರದ ಆಡಳಿತವನ್ನು ಟೀಕಿಸಿದ ಯೋಗಿ, ಆ ಅವಧಿಯಲ್ಲಿ ಒಂದು ಗ್ಯಾಸ್ ಸಂಪರ್ಕ ಪಡೆಯುವುದಕ್ಕೂ ಜನರು ಸಾಕಷ್ಟು ಸಂಕಷ್ಟ ಎದುರಿಸಬೇಕಾಗಿತ್ತು. ಆದರೆ ತಮ್ಮ ಸರ್ಕಾರ ಬಡ ಕುಟುಂಬಗಳಿಗೆ ಉಚಿತ ಗ್ಯಾಸ್ ಸಂಪರ್ಕ ಒದಗಿಸುವ ಮೂಲಕ ಉತ್ತಮ ಆಡಳಿತದ ಮಾದರಿ ನೀಡಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ನವೆಂಬರ್ 7ರಂದು ಅಯೋಧ್ಯೆಯಲ್ಲಿ ನಡೆಯಲಿರುವ ದೀಪೋತ್ಸವವನ್ನು ಸಾಮಾಜಿಕ ಏಕತೆ ಮತ್ತು ಸಾಂಸ್ಕೃತಿಕ ಸಾಮರಸ್ಯದ ಸಂಕೇತ ಎಂದು ಮುಖ್ಯಮಂತ್ರಿ ಬಣ್ಣಿಸಿದ್ದಾರೆ. ಕಾರ್ಯಕ್ರಮದ ಸಿದ್ಧತೆಗಳನ್ನು ಪರಿಶೀಲಿಸಲು ಅವರು ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ. ಈ ಕುರಿತು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಯೋಗಿ, ಜಾತಿ ವಿಭಜನೆಗಳನ್ನು ರಾಜಕೀಯದ ಅಸ್ತ್ರವನ್ನಾಗಿ ಬಳಸಲಾಗುತ್ತಿದ್ದ ಕಾಲವೊಂದಿತ್ತು. ಆದರೆ 2017ರಲ್ಲಿ ತಮ್ಮ ಸರ್ಕಾರ ದೀಪೋತ್ಸವವನ್ನು ಆರಂಭಿಸುವ ಮೂಲಕ ಅಯೋಧ್ಯೆಯ ಸಾಂಸ್ಕೃತಿಕ ಪರಂಪರೆಯನ್ನು ಸಮಾಜದ ಎಲ್ಲ ವರ್ಗಗಳ ಜನರ ಸಂಭ್ರಮವನ್ನಾಗಿ ರೂಪಿಸಿದೆ ಎಂದು ಹೇಳಿದ್ದಾರೆ. “ವಿಭಿನ್ನ ಕೈಗಳಲ್ಲಿ ದೀಪಗಳು ಉರಿಯುತ್ತವೆ. ಆದರೆ ಅವುಗಳ ಬೆಳಕು ಇಡೀ ಸಮಾಜವನ್ನು ಒಂದುಗೂಡಿಸುತ್ತದೆ. ಇದೇ ದೀಪೋತ್ಸವದ ಸಂದೇಶ” ಎಂದು ಅವರು ತಿಳಿಸಿದ್ದಾರೆ.

ಉಡುಪಿ: ಪ್ರದೀಪ್ ಪೂಜಾರಿ ಆತ್ಮಹತ್ಯೆ ಪ್ರಕರಣ : ಇಬ್ಬರು ಆರೋಪಿಗಳು ವಶಕ್ಕೆ – vishwanews24

ಜಾತಿ ಕಟ್ಟುನಿಟ್ಟು ಸಮಾಜವನ್ನು ವಿಭಜಿಸಿದರೆ, ಹಂಚಿಕೊಂಡ ನಂಬಿಕೆ ಮತ್ತು ಸಂಸ್ಕೃತಿ ಜನರನ್ನು ಒಂದೇ ದಾರದಲ್ಲಿ ಬೆಸೆಯುತ್ತದೆ. ಅಯೋಧ್ಯೆಯ ದೀಪೋತ್ಸವವು ಸಾಮಾಜಿಕ ಏಕತೆಗೆ ಅತ್ಯುತ್ತಮ ಉದಾಹರಣೆಯಾಗಿದೆ. 2017ಕ್ಕೂ ಮೊದಲು ಸಾಂಸ್ಕೃತಿಕ ಶಕ್ತಿಯ ಮೂಲಕ ಸಮಾಜವನ್ನು ಒಗ್ಗೂಡಿಸುವ ಪ್ರಯತ್ನಗಳಿಗೆ ಆದ್ಯತೆ ನೀಡಲಾಗಿರಲಿಲ್ಲ. ತಮ್ಮ ಸರ್ಕಾರ ದೀಪೋತ್ಸವದ ಮೂಲಕ ಈ ಮನಸ್ಥಿತಿಯನ್ನು ಬದಲಾಯಿಸಿದೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

Leave a Reply