ಹಳೆಕೋಟ–ಕಡವಾಡ ಕ್ರಾಸ್ ರಸ್ತೆ ದುರಸ್ತಿ ಆಗ್ರಹಿಸಿ ಜಿಲ್ಲಾಧಿಕಾರಿಗೆ ಕರವೇ ಮನವಿ – vishwanews24
ಹಳೆಕೋಟ–ಕಡವಾಡ ಕ್ರಾಸ್ ರಸ್ತೆ ದುರಸ್ತಿ ಆಗ್ರಹಿಸಿ ಜಿಲ್ಲಾಧಿಕಾರಿಗೆ ಕರವೇ ಮನವಿ
ಕಾರವಾರ ಇಳಕಲ್ ಕೈಗಾ ರಾಜ್ಯ ರಸ್ತೆಯ ಹಳೆಕೋಟದಿಂದ ಕಡವಾಡ ಕ್ರಾಸ್ ವರೆಗೆ ರಸ್ತೆಯ ಒಂದು ಬದಿ ಪೂರ್ಣ ಹಾಳಾಗಿದ್ದು ವಾಹನ ಸವಾರರು ಪ್ರಯಾಣಿಕರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಹಾಗೂ ತಾಲ್ಲೂಕು ಘಟಕದ ಮಾರ್ಗದರ್ಶನದಲ್ಲಿ ಕರವೇ ಕಾರವಾರ ನಗರ ಘಟಕ ಅಧ್ಯಕ್ಷರಾದ ರಾಜಾ ನಾಯ್ಕ ಅವರು ಉತ್ತರಕನ್ನಡ ಜಿಲ್ಲೆ ಜಿಲ್ಲಾಧಿಕಾರಿಗೆ ವ್ಯಾಟ್ಸಪ್ ಹಾಗೂ ಇ ಮೇಲ್ ಮೂಲಕ ಸೋಮವಾರ ಮನವಿ ಸಲ್ಲಿಸಿದರು.
ಕೆಲವು ವರ್ಷದ ಹಿಂದೆಯಷ್ಟೇ ಕೋಟ್ಯಾಂತರ ಹಣ ಹಾಕಿ ನಿರ್ಮಿಸಿದ ರಸ್ತೆ ಸಂಪೂರ್ಣ ಹಳ್ಳ ಹಿಡಿದಿದೆ. ಗುಣಮಟ್ಟದ ಕಾಮಗಾರಿ ಕೈಗೊಳ್ಳದಿರುವುದು ಈ ಸ್ಥಿತಿಗೆ ಕಾರಣ ಎಂಬ ಆರೋಪ ಕೇಳಿಬಂದಿದೆ. ಮುಖ್ಯ ರಸ್ತೆಯ ಅರ್ಧ ಪಥ ಮಾತ್ರ ಡಾಂಬರೀಕರಣ ಕಾಮಗಾರಿ ಅಂದು ಮಾಡಲಾಗಿತ್ತು. ರಸ್ತೆ ಅರ್ಧ ಪಥ ಕಾಮಗಾರಿ ನಡೆಸದೇ ತೀವ್ರ ನಿರ್ಲಕ್ಷ್ಯ ಮಾಡಲಾಗಿತ್ತು. ಈಗ ಈ ರಸ್ತೆಯ ಅರ್ಧ ಭಾಗ ಸಂಪೂರ್ಣ ವಾಹನ ಸಂಚಾರ ಅಯೋಗ್ಯವಾಗಿದೆ. ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸದಿರುವುದು ದುರ್ದೈವದ ಸಂಗತಿ. ಕಾರವಾರ ಇಳಕಲ್ ಕೈಗಾ ಸಂಪರ್ಕ ಕಲ್ಪಿಸುವ ರಾಜ್ಯ ರಸ್ತೆಯಲ್ಲಿನ ಹಳೆಕೋಟದಿಂದ ಕಡವಾಡ ಕ್ರಾಸ್ ವರೆಗೆ ರಸ್ತೆಯ ಒಂದು ಬದಿ ಸಂಪೂರ್ಣ ಹಾಳಾಗಿದ್ದು ಈ ರಸ್ತೆಯಲ್ಲಿ ಸಂಚಾರ ಮಾಡುವುದು ತೀವ್ರ ಕಷ್ಟಕರವಾಗಿದೆ.
ವಾಹನ ಸವಾರರು ರಾತ್ರಿ ವೇಳೆಯಲ್ಲಿ ಬೀಳುವುದಲ್ಲದೇ ಹಗಲಿನಲ್ಲಿ ರಸ್ತೆ ಹೊಂಡಗಳು ತಪ್ಪಿಸಲು ಹೋಗಿ ಎದುರಿನ ವಾಹನಕ್ಕೆ ಬಡಿದು ಸ್ಕೀಡ್ ಆಗಿ ಬಿದ್ದು ಅಪಘಾತ ಸಂಭವಿಸುತ್ತಿವೆ. ದಿನೇ ದಿನೇ ಈ ಕಾರವಾರ ಇಳಕಲ್ ರಸ್ತೆಯ ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೂ ಮೃತ್ಯು ಕೂಪವಾಗಿ ಪರಿಣಮಿಸಿದೆ. ಏಕೆಂದರೆ ಈ ರಸ್ತೆಯ ಹದಗೆಟ್ಟ ಭಾಗದಿಂದ ಸಂಚಾರ ಮಾಡದೇ ವಿರುದ್ದ ಬದಿಯ ಪಥದತ್ತ ವೇಗವಾಗಿ ಸಂಚರಿಸುತ್ತಾರೆ. ಸಣ್ಣ ಪುಟ್ಟ ಅಪಘಾತಗಳು ಸಂಭವಿಸುತ್ತಿವೆ. ಸಾಕಷ್ಟು ಸಂಖ್ಯೆಯಲ್ಲಿ ಈ ಭಾಗದಿಂದ ಬಸ್ ಬೈಕ್ ರಿಕ್ಷಾ ಶಾಲಾ ವಾಹನಗಳಲ್ಲಿ ವಿದ್ಯಾರ್ಥಿಗಳು ಶಾಲೆಗೆ ಹೋಗುತ್ತಿದ್ದಾರೆ. ಕಾರವಾರ ಇಳಕಲ್ ರಾಜ್ಯ ರಸ್ತೆ ಕೂಡಲೇ ದುರಸ್ತಿ ಕೈಗೊಳ್ಳಬೇಕೆಂದು ಕರವೇ ಕಾರವಾರ ನಗರ ಘಟಕ ಅಧ್ಯಕ್ಷರಾದ ರಾಜಾ ನಾಯ್ಕ ಅವರು ಮನವಿಯಲ್ಲಿ ಒತ್ತಾಯಿಸಿದ್ದಾರೆ.
