ಇಸ್ರೋದಿಂದ ಕಾರ್ಟೊಸಾಟ್-3 ಹಾಗೂ ಅಮೆರಿಕದ 13 ಉಪಗ್ರಹಗಳ ಯಶಸ್ವಿ ಉಡಾವಣೆ -Vishwanews24
ಹೈದರಾಬಾದ್: ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ (ಇಸ್ರೋ) ಭೂಮಿ ಚಿತ್ರಣ ಹಾಗೂ ಮ್ಯಾಪ್ಗೆ ಸಂಬಂಧಿಸಿದ ಕಾರ್ಟೊಸ್ಯಾಟ್-3 ಸೇರಿದಂತೆ ಅಮೆರಿಕದ 13 ಮೈಕ್ರೋ ಉಪಗ್ರಹಗಳನ್ನು ಆಂಧ್ರಪ್ರದೇಶದ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾಯಿಸಿದೆ.
ಕಾರ್ಟೊಸ್ಯಾಟ್-3 ಹಾಗೂ ಅಮೆರಿಕದ 13 ಸಣ್ಣ ಉಪಗ್ರಹಗಳು ಸೇರಿ 14 ಉಪಗ್ರಹಗಳನ್ನು ಹೊತ್ತ ಪಿಎಸ್ಎಲ್ವಿ-ಸಿ47 ರಾಕೆಟ್ ಇಂದು ಬೆಳಗ್ಗೆ 9.28ಕ್ಕೆ ನಭಕ್ಕೆ ಚಿಮ್ಮಿದೆ. ಕಾರ್ಟೊಸ್ಯಾಟ್-3 ಅತ್ಯಂತ ಸ್ಪಷ್ಟವಾಗಿ ಫೋಟೊಗಳನ್ನು ಸೆರೆಹಿಡಿಯುವ ಸಾಮರ್ಥ್ಯದ ಮೂರನೇ ತಲೆಮಾರಿನ ಉಪಗ್ರಹವಾಗಿದೆ. ಒಟ್ಟು 1,625 ಕೆಜಿ ಭಾರವುಳ್ಳ ಉಹಗ್ರಹಗಳನ್ನು ಪಿಎಸ್ಎಲ್ವಿ-ಸಿ47 ರಾಕೆಟ್ ಹೊತ್ತೊಯ್ದಿದೆ.
ಮೂರನೇ ತಲೆಮಾರಿನ ಉಪಗ್ರಹವಾಗಿರುವ ಕಾರ್ಟೋಸ್ಯಾಟ್-3 ಅರ್ಥ್ ಇಮೇಜಿಂಗ್ ಮತ್ತು ಮ್ಯಾಪಿಂಗ್ನ ಕಾರ್ಯ ನಿರ್ವಹಿಸುತ್ತದೆ. ಭೂವೀಕ್ಷಣೆಯ ಉಪಗ್ರಹವಾದ ಇದು ಅತ್ಯುನ್ನತ ರೆಸಲ್ಯೂಷನ್ನ ಫೋಟೋ ತಂತ್ರಜ್ಞಾನ ಹೊಂದಿದೆ. ಅತ್ಯುತ್ತಮ ರೆಸಲ್ಯೂಷನ್ ಹೊಂದಿರುವ ಭೂಮಿಯ ಚಿತ್ರಗಳನ್ನು ಇದು ಕ್ಲಿಕ್ಕಿಸಬಲ್ಲುದು.
1,625 ಕಿಲೋ ತೂಕವಿರುವ ಕಾರ್ಟೊಸ್ಯಾಟ್-3 ಉಪಗ್ರಹವು ಬೃಹತ್ ಮಟ್ಟದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಸಹಾಯವಾಗಲಿದೆ. ನಗರಾಭಿವೃದ್ಧಿ ಯೋಜನೆ, ಕರಾವಳಿ ಭಾಗದ ಭೂ ಬಳಕೆ ಇತ್ಯಾದಿ ವಿಚಾರಗಳಲ್ಲಿ ಈ ಉಪಗ್ರಹ ಉಪಯುಕ್ತವೆನಿಸಲಿದೆ. ಅದಕ್ಕೆಂದೇ ಈ ಉಪಗ್ರಹವನ್ನು ರೂಪಿಸಿ ಭೂಕಕ್ಷೆಗೆ ಸೇರಿಸಲಾಗಿದೆ. ಈ ಬೃಹತ್ ಉಪಗ್ರಹವು ಐದು ವರ್ಷ ಜೀವಿತಾವಧಿ ಹೊಂದಿದೆ.
Views of #PSLVC47 lift off from Sriharikota.
Mission Accomplished. Thanks for your support. pic.twitter.com/44fEip0K8q
— ISRO (@isro) November 27, 2019
ಈ ಬಗ್ಗೆ ಇಸ್ರೋ ಮುಖ್ಯಸ್ಥ ಡಾ.ಕೆ.ಶಿವನ್ ಮಾತನಾಡಿ. ನನಗೆ ಸಂತೋಷವಾಗಿದೆ, ಪಿಎಸ್ಎಲ್ವಿ-ಸಿ 47 ಇತರೆ 13 ಉಪಗ್ರಹಗಳೊಂದಿಗೆ ನಿಖರವಾಗಿ ಕಕ್ಷೆಯಲ್ಲಿ ಉಡಾವಣೆಯಾಗಿದೆ. ಕಾರ್ಟೊಸಾಟ್ -3 ಅತ್ಯುನ್ನತ ರೆಸಲ್ಯೂಶನ್ ಹೊಂದಿರುವ ಸಿವಿಲಿಯನ್ ಉಪಗ್ರಹವಾಗಿದೆ. ನಾವು ಮಾರ್ಚ್ವರೆಗೆ 13 ಯೋಜನೆಗಳು, 6 ದೊಡ್ಡ ವಾಹನ ಯೋಜನೆಗಳು ಮತ್ತು 7 ಉಪಗ್ರಹ ಯೋಜನೆಗಳ ಮೇಲೆ ನಾವು ಕಾರ್ಯ ನಿರ್ವಹಿಸಬೇಕಿದೆ ಎಂದರು.
