ಉಡುಪಿ : ಅಗ್ನಿ ಅವಘಡ ವೇಳೆ ಅಗ್ನಿಶಾಮಕ ಸೇವೆಯಲ್ಲಿ ವಿಳಂಬವಾಗಿಲ್ಲ : ಅಗ್ನಿಶಾಮಕ ಅಧಿಕಾರಿ ಸ್ಪಷ್ಟನೆ – vishwanews24
ಉಡುಪಿ : ಅಗ್ನಿ ಅವಘಡ ವೇಳೆ ಅಗ್ನಿಶಾಮಕ ಸೇವೆಯಲ್ಲಿ ವಿಳಂಬವಾಗಿಲ್ಲ : ಅಗ್ನಿಶಾಮಕ ಅಧಿಕಾರಿ ಸ್ಪಷ್ಟನೆ
ಉಡುಪಿ: ಇತ್ತೀಚೆಗೆ ಉಡುಪಿ ನಗರದಲ್ಲಿ ಸಂಭವಿಸಿದ ಅಗ್ನಿ ಅವಘಡಕ್ಕೆ ಅಗ್ನಿಶಾಮಕ ದಳ ವಿಳಂಬವಾಗಿ ಸ್ಪಂದಿಸಿದೆ ಎಂಬ ಸುದ್ದಿಗಳಿಗೆ ಸಂಬಂಧಿಸಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಸ್ಪಷ್ಟೀಕರಣ ನೀಡಿದ್ದಾರೆ.
ಏ.26ರಂದು ಸಂಜೆ 5:05ಕ್ಕೆ ಕಡೆಕಾರ್ 12ನೇ ಕ್ರಾಸ್, ಕೋಟಿ ಚೆನ್ನಯ್ಯ ರಸ್ತೆಯ ಗದ್ದೆಗೆ ಬೆಂಕಿ ಬಿದ್ದಿರುವ ಬಗ್ಗೆ ಉಡುಪಿ ಅಗ್ನಿಶಾಮಕ ಠಾಣೆಗೆ ಕರೆ ಬಂದಿದ್ದು, ಕರೆ ಸಂಖ್ಯೆ 138/2026ರಂತೆ ದಾಖಲಿಸಿ 5:06ಕ್ಕೆ ಜಲವಾಹನದೊಂದಿಗೆ ಸಿಬ್ಬಂದಿ ಘಟನಾ ಸ್ಥಳಕ್ಕೆ ತೆರಳಿದ್ದರು.
ಅಲ್ಲಿ ಮನೆಗಳಿಗೆ ಬೆಂಕಿ ಹರಡದಂತೆ ಬಿಟರ್ ಮೂಲಕ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದ್ದ ವೇಳೆ ಸಂಜೆ 5:25ಕ್ಕೆ ಉಡುಪಿ ಸಿಟಿ ಬಸ್ ನಿಲ್ದಾಣ ಸಮೀಪದ ಖಾದರ್ ವಾಣಿಜ್ಯ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿರುವ ಕುರಿತು ಮತ್ತೊಂದು ಕರೆ ಬಂದಿದ್ದು, ಅದನ್ನು ಕರೆ ಸಂಖ್ಯೆ 139/2026ರಂತೆ ದಾಖಲಿಸಿ 5:26ಕ್ಕೆ ಅಗ್ನಿಶಾಮಕ ಸಿಬ್ಬಂದಿ ತಕ್ಷಣವೇ ದುರಂತ ಸ್ಥಳಕ್ಕೆ ಧಾವಿಸಿದ್ದರು.
ಇದನ್ನೂ ಓದಿ:
ಘಟನಾ ಸ್ಥಳಕ್ಕೆ ತಲುಪಿದಾಗ ಮೊಬೈಲ್, ಆಟಿಕೆ, ಎಲೆಕ್ಟ್ರಿಕಲ್, ಪ್ಲಾಸ್ಟಿಕ್ ಸೇರಿದಂತೆ ಹಲವು ಅಂಗಡಿಗಳಿಗೆ ಬೆಂಕಿ ವ್ಯಾಪಿಸಿದ್ದು, ಬೆಂಕಿಯ ತೀವ್ರತೆ ಹೆಚ್ಚಿದ್ದ ಹಿನ್ನೆಲೆ ಮಲ್ಪೆ, ಕಾರ್ಕಳ, ಕುಂದಾಪುರ ಹಾಗೂ ಕದ್ರಿ ಅಗ್ನಿಶಾಮಕ ಠಾಣೆಗಳ ಜಲವಾಹನಗಳನ್ನು ಸ್ಥಳಕ್ಕೆ ಕರೆಯಿಸಲಾಯಿತು.
ಜಿಲ್ಲಾ ಅಗ್ನಿಶಾಮಕ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಹಲವು ಠಾಣೆಗಳ ಸಿಬ್ಬಂದಿ ನಿರಂತರ ಕಾರ್ಯಾಚರಣೆ ನಡೆಸಿ ಸುಮಾರು ಎರಡು ಗಂಟೆಗಳ ಬಳಿಕ ಬೆಂಕಿಯನ್ನು ನಿಯಂತ್ರಣಕ್ಕೆ ತಂದು, ಮೂರು ಗಂಟೆಗಳ ಬಳಿಕ ಸಂಪೂರ್ಣ ನಂದಿಸಲಾಯಿತು.
ತೀವ್ರ ಬೆಂಕಿಯ ನಡುವೆಯೂ ಸಿಬ್ಬಂದಿ ಪ್ರಾಣದ ಹಂಗು ತೊರೆದು ಕಟ್ಟಡದೊಳಗೆ ನುಗ್ಗಿ ಕಾರ್ಯಾಚರಣೆ ನಡೆಸಿದ್ದು, ಸುಮಾರು 17 ಅಂಗಡಿಗಳು, ಆರು ಬೈಕ್ಗಳು, ಪಕ್ಕದ ಸಿಟಿ ಸೆಂಟರ್ ಮಾಲ್ ಸೇರಿದಂತೆ ಕೋಟ್ಯಂತರ ರೂ. ಮೌಲ್ಯದ ಆಸ್ತಿಯನ್ನು ರಕ್ಷಿಸಲಾಗಿದೆ ಎಂದು ತಿಳಿಸಲಾಗಿದೆ.
ಇದನ್ನೂ ಓದಿ:
ಕೌಟುಂಬಿಕ ಕಲಹ : ಸಬ್ ಇನ್ಸ್ಪೆಕ್ಟರ್ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ – vishwanews24
ಉಡುಪಿ ಠಾಣೆಯಲ್ಲಿ ಒಂದೇ ಜಲವಾಹನ ಇದ್ದರೂ ಮೊದಲ ಕರೆಯನ್ನು ಅರ್ಧಕ್ಕೆ ನಿಲ್ಲಿಸಿ ತಕ್ಷಣ ಎರಡನೇ ಸ್ಥಳಕ್ಕೆ ಧಾವಿಸಿ ಸ್ಪಂದಿಸಲಾಗಿದೆ. ಅಗ್ನಿಶಾಮಕ ಸೇವೆಯಲ್ಲಿ ಯಾವುದೇ ರೀತಿಯ ವಿಳಂಬವಾಗಿಲ್ಲ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.
