ಉಡುಪಿ , ದಕ್ಷಿಣ ಕನ್ನಡ ಜಿಲ್ಲೆಗಳ ಸರಕಾರಿ ಕಚೇರಿಗಳಲ್ಲಿ ತುಳುವಿಗೆ ಅಧಿಕೃತ ಸ್ಥಾನ -vishwanews24
ಉಡುಪಿ , ದಕ್ಷಿಣ ಕನ್ನಡ ಜಿಲ್ಲೆಗಳ ಸರಕಾರಿ ಕಚೇರಿಗಳಲ್ಲಿ ತುಳುವಿಗೆ ಅಧಿಕೃತ ಸ್ಥಾನ
ಸಾರ್ವಜನಿಕರು ಇನ್ನು ಮುಂದೆ ತುಳು ಭಾಷೆಯಲ್ಲೇ ಅರ್ಜಿ ಮತ್ತು ಮನವಿ ಸಲ್ಲಿಸಲು ಅವಕಾಶ
ಮಂಗಳೂರು/ಉಡುಪಿ : ಕರಾವಳಿಗರ ಹಲವು ವರ್ಷಗಳ ಹೋರಾಟದ ಫಲವಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಸೀಮಿತವಾಗಿ ತುಳು ಭಾಷೆಯನ್ನು ರಾಜ್ಯದ ಎರಡನೇ ಭಾಷೆಯಾಗಿ ಅನುಮೋದನೆ ನೀಡಿದ್ದು, ಅನುಷ್ಟಾನಕ್ಕೆ ಸಂಬಂಧಪಟ್ಟಂತೆ ಸರಕಾರ ಆದೇಶಿಸಿದೆ.
ಈ ಆದೇಶದ ಅನ್ವಯ ಎರಡೂ ಜಿಲ್ಲೆಗಳ ಸರಕಾರಿ ಕಚೇರಿಗಳಲ್ಲಿ ಸಾರ್ವಜನಿಕರು ಇನ್ನು ಮುಂದೆ ತುಳು ಭಾಷೆಯಲ್ಲೇ ಅರ್ಜಿ ಮತ್ತು ಮನವಿಗಳನ್ನು ಸಲ್ಲಿಸಬಹುದು. ಅವುಗಳಿಗೆ ಅಧಿಕಾರಿಗಳು ಕನ್ನಡದ ಜತೆಗೆ ತುಳುವಿನಲ್ಲೂ ಉತ್ತರಿಸುವರು. ಜಿಲ್ಲಾಧಿಕಾರಿ ಹಂತದಲ್ಲಿ ಹೊರಡುವ ಪ್ರಮುಖ ಆದೇಶಗಳು ಹಾಗೂ ಕಚೇರಿಗಳ ಪ್ರಮುಖ ಸೂಚನ ಫಲಕಗಳನ್ನು ಕನ್ನಡದ ಜತೆಗೆ ತುಳುವಿನಲ್ಲೂ ಪ್ರದರ್ಶಿಸಬೇಕು.
ಆಡಳಿತದಲ್ಲಿ ತುಳು ಭಾಷೆಯನ್ನು ‘ಕನ್ನಡ ಲಿಪಿ’ಯಲ್ಲೇ ಬಳಸಲಾಗುವುದು. ಎರಡೂ ಜಿಲ್ಲಾಡಳಿತ ಕಚೇರಿಗಳಲ್ಲಿ ಪ್ರತ್ಯೇಕ ‘ಅನುಷ್ಠಾನ ಘಟಕ’ ಸ್ಥಾಪಿಸಲಾ ಗುತ್ತದೆ. ಇದರೊಂದಿಗೆ ಒಟ್ಟು 20 ಭಾಷಾಂತರಕಾರರನ್ನು ನೇಮಿಸಿಕೊಳ್ಳಲು ಸರಕಾರ ಅನುಮತಿ ನೀಡಿದೆ. ಇವರಿಗೆ ಎಲ್ಲ ವೆಚ್ಚಗಳೂ ಸೇರಿ ಮಾಸಿಕ 30,000 ರೂ. ಗೌರವ ಸಂಭಾವನೆ ನಿಗದಿಪಡಿಸಲಾಗಿದೆ.
