ಉಡುಪಿ: ನೀಟ್ ಪರೀಕ್ಷೆಗೆ ತಡವಾಗಿ ಬಂದ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದ ಶಾಸಕ ಯಶ್‌ಪಾಲ್ ಸುವರ್ಣಗೆ ವ್ಯಾಪಕ ಶ್ಲಾಘನೆ -vishwanews24

Featured, ಉಡುಪಿ

ಉಡುಪಿ: ನೀಟ್ ಪರೀಕ್ಷೆಗೆ ತಡವಾಗಿ ಬಂದ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದ ಶಾಸಕ ಯಶ್‌ಪಾಲ್ ಸುವರ್ಣಗೆ ವ್ಯಾಪಕ ಶ್ಲಾಘನೆ

ಉಡುಪಿ : ನೀಟ್ ಪರೀಕ್ಷೆಯ ಪ್ರವೇಶದ ಸಮಯ ಮೀರಿದ ಕಾರಣಕ್ಕೆ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ನಿರಾಕರಿಸಲ್ಪಟ್ಟಿದ್ದ ವಿದ್ಯಾರ್ಥಿನಿಯೊಬ್ಬಳಿಗೆ, ಸಮಯೋಚಿತವಾಗಿ ಮಧ್ಯಪ್ರವೇಶಿಸಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿಕೊಟ್ಟ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಅವರ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಭಾನುವಾರ ದೇಶಾದ್ಯಂತ ನಡೆದ ನೀಟ್ ಪರೀಕ್ಷೆಯ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಕಾರ್ಕಳದ ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ಅಕ್ಷತಾ, ಪರೀಕ್ಷಾ ಕೇಂದ್ರದ ಪ್ರವೇಶದ ಅಂತಿಮ ಸಮಯವಾದ ಮಧ್ಯಾಹ್ನ 1:30ರ ಬದಲಾಗಿ, ಎರಡು ನಿಮಿಷ ತಡವಾಗಿ ಅಂದರೆ 1:32ಕ್ಕೆ ಉಡುಪಿಯ ಎಂಜಿಎಂ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ತಲುಪಿದ್ದರು. ಇದರಿಂದಾಗಿ ಪರೀಕ್ಷಾ ಅಧಿಕಾರಿಗಳು ಅವರಿಗೆ ಪ್ರವೇಶ ನಿರಾಕರಿಸಿದ್ದರು.

ಅಕ್ಷತಾ ಮತ್ತು ಆಕೆಯ ಪೋಷಕರು ಕಾರ್ಕಳದ ಗ್ರಾಮೀಣ ಪ್ರದೇಶದಿಂದ ಬರುತ್ತಿದ್ದಾಗ, ಮಾರ್ಗಮಧ್ಯೆ ಅವರ ವಾಹನ ಕೆಟ್ಟು ನಿಂತಿತ್ತು. ತಕ್ಷಣವೇ ಪರ್ಯಾಯ ವಾಹನ ವ್ಯವಸ್ಥೆ ಮಾಡಿಕೊಂಡು ಪರೀಕ್ಷಾ ಕೇಂದ್ರಕ್ಕೆ ಧಾವಿಸಿದರೂ ಎರಡು ನಿಮಿಷ ತಡವಾಗಿತ್ತು.

ಈ ವಿಷಯದಿಂದ ಕಂಗಾಲಾದ ವಿದ್ಯಾರ್ಥಿನಿಯ ಪೋಷಕರು ಮತ್ತು ಕಾಲೇಜಿನ ಆಡಳಿತ ಮಂಡಳಿಯು ಸಹಾಯಕ್ಕಾಗಿ ಶಾಸಕ ಯಶ್‌ಪಾಲ್ ಸುವರ್ಣ ಅವರನ್ನು ಸಂಪರ್ಕಿಸಿದರು. ಕೂಡಲೇ ಸ್ಪಂದಿಸಿದ ಶಾಸಕರು, ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಮತ್ತು ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರನ್ನು ಸಂಪರ್ಕಿಸಿ, ವಿಶೇಷ ಸಂದರ್ಭವನ್ನು ಪರಿಗಣಿಸಿ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುವಂತೆ ಮನವಿ ಮಾಡಿದರು.

ಶಾಸಕರ ಮಧ್ಯಪ್ರವೇಶದ ನಂತರ, ಜಿಲ್ಲಾಡಳಿತದ ವಿಶೇಷ ಅನುಮತಿಯೊಂದಿಗೆ ಅಕ್ಷತಾ ಅವರಿಗೆ ಮಧ್ಯಾಹ್ನ ಸುಮಾರು 2:45ಕ್ಕೆ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ಕಲ್ಪಿಸಲಾಯಿತು ಮತ್ತು ಅವರು ನೀಟ್ ಪರೀಕ್ಷೆಯನ್ನು ಬರೆದರು.

ವಿದ್ಯಾರ್ಥಿನಿಯ ಭವಿಷ್ಯವನ್ನು ಉಳಿಸಲು ಶಾಸಕರು ತೋರಿದ ಸಮಯೋಚಿತ ಕಾರ್ಯಕ್ಕೆ ಪೋಷಕರು ಹಾಗೂ ಕಾಲೇಜಿನ ಆಡಳಿತ ಮಂಡಳಿಯವರು ಕೃತಜ್ಞತೆ ಸಲ್ಲಿಸಿದ್ದಾರೆ. ಕುಂಜಾರುಬೆಟ್ಟಿನ ಖಾಸಗಿ ಸಂಸ್ಥೆಯ ಉಪನ್ಯಾಸಕಿ ಪ್ರಿಯಾಂಕಾ ಪಾಲನ್ ಅವರು ಕೂಡ ಶಾಸಕರ ತ್ವರಿತ ಸ್ಪಂದನೆ ಮತ್ತು ಗ್ರಾಮೀಣ ವಿದ್ಯಾರ್ಥಿನಿಯ ಶಿಕ್ಷಣದ ಬಗ್ಗೆ ತೋರಿದ ಕಾಳಜಿಯನ್ನು ಶ್ಲಾಘಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಶಾಸಕ ಯಶ್‌ಪಾಲ್ ಸುವರ್ಣ, “ವಿದ್ಯಾರ್ಥಿಯ ಜೀವನದಲ್ಲಿ ನೀಟ್ ಪರೀಕ್ಷೆಯು ಅತ್ಯಂತ ಮಹತ್ವದ ಮೈಲಿಗಲ್ಲಾಗಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿನಿಯೊಬ್ಬಳು ಅನಿವಾರ್ಯ ಕಾರಣಗಳಿಂದಾಗಿ ಕೇವಲ ಎರಡು ನಿಮಿಷ ತಡವಾಗಿ ಬಂದಿದ್ದಾಳೆ ಎಂದು ತಿಳಿದ ತಕ್ಷಣ, ಆಕೆಯ ಭವಿಷ್ಯದ ದೃಷ್ಟಿಯಿಂದ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಪರೀಕ್ಷೆಗೆ ಅವಕಾಶ ಮಾಡಿಕೊಡಲಾಗಿದೆ. ವಿದ್ಯಾರ್ಥಿನಿಯ ಶಿಕ್ಷಣಕ್ಕೆ ತೊಂದರೆಯಾಗದಂತೆ ತಕ್ಷಣ ಸ್ಪಂದಿಸಿದ ಜಿಲ್ಲಾಡಳಿತ, ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ನಾನು ಕೃತಜ್ಞನಾಗಿದ್ದೇನೆ” ಎಂದು ತಿಳಿಸಿದ್ದಾರೆ.

Leave a Reply