ಉಡುಪಿ ಬೆಂಕಿ ಅವಘಡ ಸ್ಥಳಕ್ಕೆ ಅಗ್ನಿಶಾಮಕ ದಳ ತಲುಪಲು ವಿಳಂಬ : ತನಿಖೆಗೆ ವಿವೇಕ್ ಜಿ. ಸುವರ್ಣ ಆಗ್ರಹ – vishwanews24
ಉಡುಪಿ ಬೆಂಕಿ ಅವಘಡ ಸ್ಥಳಕ್ಕೆ ಅಗ್ನಿಶಾಮಕ ದಳ ತಲುಪಲು ವಿಳಂಬ : ತನಿಖೆಗೆ ವಿವೇಕ್ ಜಿ. ಸುವರ್ಣ ಆಗ್ರಹ
ಉಡುಪಿ: ನಗರದ ಹೃದಯಭಾಗವಾದ ಸಿಟಿಬಸ್ ನಿಲ್ದಾಣ ಸಮೀಪ ಸಂಭವಿಸಿದ ಅಗ್ನಿ ಅವಘಡವು ತೀವ್ರ ಚಿಂತೆಗೆ ಕಾರಣವಾಗಿದೆ. ಈ ದುರ್ಘಟನೆಯಲ್ಲಿ ವಿಶೇಷವಾಗಿ ಮೊಬೈಲ್ ಅಂಗಡಿಗಳಿಗೆ ಸಂಭವಿಸಿದ ಅಪಾರ ನಷ್ಟ ನೋವಿನ ಸಂಗತಿಯಾಗಿದೆ. ಮೊಬೈಲ್ ರಿಟೈಲ್ ವ್ಯಾಪಾರಿಗಳ ಜೀವನಾಧಾರವಾದ್ದ ಅಂಗಡಿಯೇ ಹಾನಿಗೊಳಗಾಗಿರುವುದು ಅತ್ಯಂತ ವಿಷಾದನೀಯ.
ನಗರದ ಕಿನ್ನಿಮೂಲ್ಕಿಯಲ್ಲಿ ಅಗ್ನಿಶಾಮಕ ದಳದ ಮುಖ್ಯ ಕಚೇರಿ ಮತ್ತು ಎಲ್ಲಾ ವಾಹನ ಸಹಿತ ಅಗತ್ಯ ಸೌಕರ್ಯಗಳಿದ್ದರೂ, ಅವಘಡ ನಡೆದ ಸ್ಥಳ ಅಲ್ಲಿಂದ 1ರಿಂದ 2 ಕಿ.ಮೀ. ದೂರದಲ್ಲಿದ್ದರೂ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ತಲುಪಲು ಸುಮಾರು 40 ರಿಂದ 45 ನಿಮಿಷಗಳಷ್ಟು ವಿಳಂಬವಾಗಿರುವುದು ಗಂಭೀರ ನಿರ್ಲಕ್ಷ್ಯದ ಸೂಚಕವಾಗಿದೆ. ಈ ವಿಳಂಬವೇ ಬೆಂಕಿ ಅವಘಡದ ತೀವ್ರತೆ ಹೆಚ್ಚಲು ಪ್ರಮುಖ ಕಾರಣವಾಗಿದೆ ಎಂಬುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ:
ಇಂತಹ ನಿರ್ಲಕ್ಷ್ಯ ಭವಿಷ್ಯದಲ್ಲಿ ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ತುರ್ತು ಪರಿಸ್ಥಿತಿಗಳಲ್ಲಿ ತಕ್ಷಣ ಸ್ಪಂದನೆ ನೀಡುವ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವುದು ಅನಿವಾರ್ಯವಾಗಿದೆ. ಜಿಲ್ಲಾಡಳಿತವು ಈ ಘಟನೆಗೆ ಗಂಭೀರವಾಗಿ ಸ್ಪಂದಿಸಿ, ಅಗ್ನಿಶಾಮಕ ದಳದ ಕಾರ್ಯಪದ್ದತಿಯಲ್ಲಿ ಉಂಟಾದ ವಿಳಂಬದ ಕುರಿತು ಸಮಗ್ರ ತನಿಖೆ ನಡೆಸಿ, ಹೊಣೆಗಾರರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಜತೆಗೆ, ಹಾನಿಗೊಳಗಾದ ವ್ಯಾಪಾರಿಗಳಿಗೆ ತಕ್ಷಣ ಪರಿಹಾರ ಒದಗಿಸಿ, ಅವರ ಜೀವನೋಪಾಯವನ್ನು ಪುನಃ ಸ್ಥಾಪಿಸಲು ನೆರವಾಗಬೇಕು.
ಇಂತಹ ಘಟನೆಗಳು ಮರುಕಳಿಸದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಸಾರ್ವಜನಿಕರ ಭದ್ರತೆ ಖಚಿತಪಡಿಸಬೇಕು ಎಂದು ಉಡುಪಿ ಮೊಬೈಲ್ ರಿಟೈಲ್ ಅಸೋಸಿಯೇಶನ್ ಜಿಲ್ಲಾಧ್ಯಕ್ಷರಾದ ವಿವೇಕ ಜಿ ಸುವರ್ಣ ಆಗ್ರಹಿಸಿದ್ದಾರೆ..
ಇದನ್ನೂ ಓದಿ:
ರಾಜ್ಯದ ಎಲ್ಲಾ ಶಾಲೆಗಳಲ್ಲಿ ನ್ಯೂಸ್ ಪೇಪರ್ ಓದುವುದು ಕಡ್ಡಾಯ : ಶಿಕ್ಷಣ ಇಲಾಖೆ ಆದೇಶ – vishwanews24
