ಉದ್ಯಾವರ :ಚರಂಡಿಗೆ ಬಿದ್ದ ಸಕ್ಕರೆ ಸಾಗಣೆ ಲಾರಿ; ಮದ್ಯದ ಅಮಲಿನಲ್ಲಿದ್ದ ಚಾಲಕ ವಶಕ್ಕೆ – vishwanews24
ಉದ್ಯಾವರ :ಚರಂಡಿಗೆ ಬಿದ್ದ ಸಕ್ಕರೆ ಸಾಗಣೆ ಲಾರಿ; ಮದ್ಯದ ಅಮಲಿನಲ್ಲಿದ್ದ ಚಾಲಕ ವಶಕ್ಕೆ
ಉಡುಪಿ: ರಾಷ್ಟ್ರೀಯ ಹೆದ್ದಾರಿ–66ರ ಉದ್ಯಾವರ ಸಮೀಪ ಸಕ್ಕರೆ ಸಾಗಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಬಿದ್ದ ಘಟನೆ ಮಂಗಳವಾರ ಸಂಜೆ ಸಂಭವಿಸಿದೆ. ಚಾಲಕ ಮದ್ಯದ ಅಮಲಿನಲ್ಲಿ ವಾಹನ ಚಲಾಯಿಸುತ್ತಿದ್ದ ಕಂಡುಬಂದಿದ್ದು, ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.
ಕೇರಳಕ್ಕೆ ಸಕ್ಕರೆ ಸಾಗಿಸುತ್ತಿದ್ದ ಲಾರಿಯನ್ನು ಉದ್ಯಾವರ ಸಮೀಪ ರಸ್ತೆ ಬದಿಯಲ್ಲಿ ನಿಲ್ಲಿಸಲು ಚಾಲಕ ಯತ್ನಿಸಿದ್ದಾನೆ. ಆದರೆ ಕಂಠಪೂರ್ತಿ ಕುಡಿದಿದ್ದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಲಾರಿ ಚರಂಡಿಗೆ ನುಗ್ಗಿದೆ. ಲಾರಿಯ ಚಕ್ರ ಮಣ್ಣಿನಲ್ಲಿ ಹೂತುಹೋಗಿದ್ದರಿಂದ ಲಾರಿ ಮುಂದೆ ಚಲಿಸದೇ ನಿಂತಿದ್ದು, ಸಂಭವಿಸಬಹುದಾಗಿದ್ದ ಭಾರೀ ಅನಾಹುತ ತಪ್ಪಿದಂತಾಗಿದೆ.
ಅವಘಡ ಸಂಭವಿಸುತ್ತಿದ್ದಂತೆ ಸ್ಥಳದಲ್ಲಿ ಜನರು ಜಮಾಯಿಸಿದ್ದು, ಮದ್ಯದ ಅಮಲಿನಲ್ಲಿ ತೂರಾಡುತ್ತಿದ್ದ ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಕಾಪು ಪೊಲೀಸರು ಪರಿಶೀಲನೆ ನಡೆಸಿದರು. ಲಾರಿ ಚಾಲಕ ಮದ್ಯದ ಅಮಲಿನಲ್ಲಿ ವಾಹನ ಚಲಾಯಿಸುತ್ತಿದ್ದದ್ದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದ್ದು, ಆತನನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.
