ಉಳ್ಳಾಲ: ಕೆರೆಬೈಲ್ ಗುಡ್ಡೆಯಲ್ಲಿ ಮನೆ ಮೇಲೆ ಕುಸಿದ ಕಾಂಪೌಂಡ್ ಹಾಲ್: ತಪ್ಪಿದ ಭಾರೀ ದುರಂತ – vishwanews24
ಉಳ್ಳಾಲ: ಕೆರೆಬೈಲ್ ಗುಡ್ಡೆಯಲ್ಲಿ ಮನೆ ಮೇಲೆ ಕುಸಿದ ಕಾಂಪೌಂಡ್ ಹಾಲ್: ತಪ್ಪಿದ ಭಾರೀ ದುರಂತ
ಉಳ್ಳಾಲ: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ತಾಲೂಕಿನ ಕೆರೆಬೈಲ್ ಗುಡ್ಡೆ ಪ್ರದೇಶದಲ್ಲಿ ಭೀಕರ ಅವಘಡವೊಂದು ಬುಧವಾರ (ಜು.01) ರಂದು ಸಂಭವಿಸಿದೆ.
ಗುಡ್ಡದ ತುದಿಯಲ್ಲಿದ್ದ ಖಾಸಗಿ ಗೆಸ್ಟ್ ಹೌಸ್ನ ಕಾಂಪೌಂಡ್ ಹಾಲ್ ಕುಸಿದು ಕೆಳಗಿದ್ದ ಮನೆಯ ಮೇಲೆ ಬಿದ್ದ ಪರಿಣಾಮ, ಮನೆ ಸಂಪೂರ್ಣವಾಗಿ ಹಾನಿಗೀಡಾಗಿದೆ. ಆದರೆ, ಅದೃಷ್ಟವಶಾತ್ ಮನೆಯಲ್ಲಿದ್ದ ಕುಟುಂಬದ ಸದಸ್ಯರು ವಾರದ ಹಿಂದಷ್ಟೇ ಸಂಬಂಧಿಕರ ಮನೆಗೆ ಸ್ಥಳಾಂತರಗೊಂಡಿದ್ದರಿಂದ ದೊಡ್ಡದೊಂದು ಪ್ರಾಣಾಪಾಯ ಪವಾಡ ಸದೃಶವಾಗಿ ತಪ್ಪಿದೆ.
ಕೆರೆಬೈಲ್ ನಿವಾಸಿ ಕಿಶೋರ್ ಅವರ ಮನೆ ಹಾನಿಗೀಡಾಗಿದ್ದು, ಕೆರೆಬೈಲು ಗುಡ್ಡೆ ಪ್ರದೇಶದಲ್ಲಿ ಸುಮಾರು 40 ಕ್ಕೂ ಹೆಚ್ಚು ಮನೆಗಳು ಇದ್ದು ಗುಡ್ಡದ ತುತ್ತ ತುದಿಯಲ್ಲಿ ಮಂಗಳೂರಿನ ಸಂಸ್ಥೆಯೊಂದಕ್ಕೆ ಸೇರಿದ ಗೆಸ್ಟ್ ಹೌಸ್ ಇದ್ದು, ಈ ಮನೆಯ ಆವರಣ ಗೋಡೆ ಕುಸಿದು ದುರಂತ ಸಂಭವಿಸಿದೆ.
ನಾಗುರಿ ದುರಂತ – ಕಳಪೆ ಕಾಮಗಾರಿಯ ಶಂಕೆ : ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಲು ಆದೇಶ – vishwanews24
ವಾರದ ಹಿಂದೆ ಸ್ಥಳಾಂತರಗೊಂಡಿದ್ದರು : ಕಿಶೋರ್ ಅವರ ಮನೆಯ ಮೇಲೆಯಿದ್ದ ಆವರಣಗೋಡೆಯಲ್ಲಿ ಬಿರುಕು ಬಿದ್ದ ಹಿನ್ನಲೆಯಲ್ಲಿ ವಾರದ ಹಿಂದೆ ತಮ್ಮ ಸಂಬಂಧಿಕರ ಮನೆಗೆ ಸ್ಥಳಾಂತರಗೊಂಡಿದ್ದರು. ಕಳೆದ ಬಾರಿ ಮಳೆಗಾಲದಲ್ಲಿ ಈ ಆವರಣ ಗೋಡೆ ಬಿರುಕು ಬಿದ್ದ ಸಂದರ್ಭದಲ್ಲಿ ಮಳೆಗಾಲದಲ್ಲಿ ಬಾಡಿಗೆ ಮನೆಗೆ ಈ ಕುಟುಂಬ ಸ್ಥಳಾಂತರಗೊಂಡಿತ್ತು. ಮಳೆ ಕಳೆದ ಬಳಿಕ ವಾಪಾಸ್ ನೆಲೆಸಿದ್ದು, ಈ ಬಾರಿಯ ಮಳೆಗಾಲದ ಹಿನ್ನಲೆಯಲ್ಲಿ ಸ್ಥಳಾಂತರಗೊಂಡಿದ್ದರಿಂದ ದೊಡ್ಡದೊಂದು ಅವಘಡ ತಪ್ಪಿದಂತಾಗಿದೆ.
ಅಪಾಯದಲ್ಲಿ ಹಲವಾರು ಮನೆಗಳು: ಮಂಗಳೂರಿನ ಸಂಸ್ಥೆಗೆ ಸೇರಿದ ಈ ಗೆಸ್ಟ್ ಹೌಸ್ ಸುತ್ತ ಎತ್ತರದ ಆವರಣ ಗೋಡೆ ಹಾಕಿದ್ದು, ಕಳೆದ ನಾಲ್ಕೆದು ವರುಷಗಳಿಂದ ಈ ಸಮಸ್ಯೆ ಉದ್ಭವಿಸಿದೆ. ಸ್ಥಳೀಯ ನಿವಾಸಿಗಳು ಕಳೆದ 40 ವರುಷಗಳಿಂದ ಇಲ್ಲಿ ವಾಸಿಸುತ್ತಿದ್ದು, ಆವರಣ ಗೋಡೆ ನಿರ್ಮಾಣವಾದ ಬಳಿಕ ಈ ಸಮಸ್ಯೆ ಉದ್ಭವಿಸಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಇನ್ನಷ್ಟು ಆವರಣಗೋಡೆ ಕುಸಿಯುವ ಮೊದಲು ಆವರಣಗೋಡೆಯನ್ನು ವೈಜ್ಞಾನಿಕವಾಗಿ ನಿರ್ಮಿಸಿ ಶಾಶ್ವತ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.
