ಎಂಆರ್ಪಿಎಲ್ ಕಾರ್ಮಿಕರ ಮುಷ್ಕರ: ಮೃತ ಮನೀಶ್ ಕಾರ್ಕಡಗೆ ಶ್ರದ್ಧಾಂಜಲಿ, ಪರಿಹಾರಕ್ಕೆ ಆಗ್ರಹ -vishwanews24
ಎಂಆರ್ಪಿಎಲ್ ಕಾರ್ಮಿಕರ ಮುಷ್ಕರ: ಮೃತ ಮನೀಶ್ ಕಾರ್ಕಡಗೆ ಶ್ರದ್ಧಾಂಜಲಿ, ಪರಿಹಾರಕ್ಕೆ ಆಗ್ರಹ
ಮಂಗಳೂರು: ಎಂಆರ್ಪಿಎಲ್ನಲ್ಲಿ ನಿನ್ನೆ (ಸೆ.30ರ ಬುಧವಾರ) ನಡೆದ ಭೀಕರ ದುರ್ಘಟನೆಯಲ್ಲಿ ಮೃತಪಟ್ಟ ಕಾರ್ಮಿಕ ಮನೀಶ್ ಕಾರ್ಕಡ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ, ಕಾರ್ಮಿಕರು ಇಂದು (ಆ.1) ಮುಷ್ಕರ ನಡೆಸಿದರು. ಕಾರ್ಗೋ ಗೇಟ್ ಮುಂಭಾಗ ಜಮಾಯಿಸಿದ ನೂರಾರು ಕಾರ್ಮಿಕರು, ಮೃತರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ನಡೆಸಿದರು.
ಈ ಸಂದರ್ಭದಲ್ಲಿ ಕಾರ್ಮಿಕ ಸಂಘಟನೆಗಳು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟವು. ಮೃತ ಮನೀಶ್ ಕಾರ್ಕಡ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ನೀಡಬೇಕು, ಮನೆಯವರಲ್ಲಿ ಒಬ್ಬರಿಗೆ ಉದ್ಯೋಗ ಕಲ್ಪಿಸಬೇಕು, ಎಂಆರ್ಪಿಎಲ್ನಲ್ಲಿ ದುಡಿಯುವ ಎಲ್ಲ ಕಾರ್ಮಿಕ ವರ್ಗಕ್ಕೆ ಆರೋಗ್ಯ ವಿಮೆ ಜಾರಿಗೊಳಿಸಬೇಕು ಎಂದು ಆಗ್ರಹಿಸಲಾಯಿತು. ಇದರೊಂದಿಗೆ ಕೆಲಸದ ಸ್ಥಳದಲ್ಲಿ ಸೂಕ್ತ ಸುರಕ್ಷತಾ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಲಾಯಿತು.
ಸ್ಥಳದಲ್ಲಿ ಶಾಸಕ ಉಮಾನಾಥ ಕೋಟ್ಯಾನ್, ಸತ್ಯಜಿತ್ ಸುರತ್ಕಲ್, ಭರತ್ ರಾಜ್ ಕೃಷ್ಣಾಪುರ, ಪ್ರಶಾಂತ್ ಮೂಡಾಯಿಕೋಡಿ ಮತ್ತಿತರರು ಉಪಸ್ಥಿತರಿದ್ದರು. ಶಾಸಕ ಉಮಾನಾಥ ಕೋಟ್ಯಾನ್ ಅವರ ಉಪಸ್ಥಿತಿಯಲ್ಲಿ ಬೇಡಿಕೆ ಪಟ್ಟಿಯನ್ನು ಮಂಡಿಸಿ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಯಿತು.
ಸಭೆಯಲ್ಲಿ ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನು ಅಧಿಕಾರಿಗಳು ನೀಡಿದರು ಎಂದು ತಿಳಿದುಬಂದಿದೆ. ಸುರಕ್ಷತಾ ಕ್ರಮಗಳನ್ನು ಬಿಗಿಗೊಳಿಸಿ, ಕಾರ್ಮಿಕರ ಹಿತರಕ್ಷಣೆಗೆ ಆದ್ಯತೆ ನೀಡುವುದಾಗಿ ಭರವಸೆ ನೀಡಲಾಗಿದೆ.
