ಐಎಎಸ್ ಅಧಿಕಾರಿ ಎಂದು ನಂಬಿಸಿ ಕೋಟ್ಯಾಂತರ ರೂ. ವಂಚನೆ : ಆರೋಪಿ ಬಂಧನ – vishwanews24
ಐಎಎಸ್ ಅಧಿಕಾರಿ ಎಂದು ನಂಬಿಸಿ ಕೋಟ್ಯಾಂತರ ರೂ. ವಂಚನೆ : ಆರೋಪಿ ಬಂಧನ
ಬೆಂಗಳೂರು :ತಾನು 2023ನೇ ಬ್ಯಾಚ್‌ನ ಐಎಎಸ್ ಅಧಿಕಾರಿ ಎಂದು ನಂಬಿಸಿ, ಸರ್ಕಾರಿ ಅಧಿಕಾರಿಗಳು ಮತ್ತು ಉದ್ಯಮಿಗಳಿಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದ ಕಿಲಾಡಿ ಮಿಥುನ್ ಎಂಬಾತನನ್ನು ಬೆಂಗಳೂರಿನ ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ವಂಚಕ ಚಿಕ್ಕಮಗಳೂರು ಜಿಲ್ಲೆಯ ಕಡೂರು ಮೂಲದವನಾಗಿದ್ದು, ಈತನ ಬಲೆಗೆ ಸರ್ಕಾರಿ ಆಸ್ಪತ್ರೆಯ ಜಿಲ್ಲಾ ಸರ್ಜನ್ ಕೂಡ ಬಿದ್ದಿರುವುದು ಬೆಳಕಿಗೆ ಬಂದಿದೆ.
ಬಂಧಿತ ಮಿಥುನ್ ತಾನು ರಾಷ್ಟ್ರೀಯ ಆರೋಗ್ಯ ಅಭಿಯಾನ (NHM) ವಿಭಾಗದ ಮುಖ್ಯಸ್ಥ ಹಾಗೂ ಆರೋಗ್ಯ ಸೌಧದಲ್ಲಿ ಉನ್ನತ ಅಧಿಕಾರಿಯಾಗಿದ್ದೇನೆ ಎಂದು ನಂಬಿಸಿದ್ದ. ಚಿಕ್ಕಮಗಳೂರಿನ ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಯ ಜಿಲ್ಲಾ ಸರ್ಜನ್ ಡಾ. ಚಂದ್ರಶೇಖರ್ ಅವರಿಗೆ, ತಾನು ಐಎಎಸ್ ಅಧಿಕಾರಿ ಎಂದು ಪರಿಚಯ ಮಾಡಿಕೊಂಡಿದ್ದ ಈತ, ಸ್ವತಃ ಆಸ್ಪತ್ರೆಯಲ್ಲೇ ವೈದ್ಯರು ಮತ್ತು ನರ್ಸ್‌ಗಳ ಸಭೆ ನಡೆಸಿ ಎಲ್ಲರನ್ನೂ ನಂಬಿಸುವಲ್ಲಿ ಯಶಸ್ವಿಯಾಗಿದ್ದ.
ಇದನ್ನೂ ಓದಿ:
ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಸೇರಿ 3 ಮಸೂದೆಗಳ ಮಂಡನೆ – vishwanews24
41 ಲಕ್ಷ ರೂಪಾಯಿ ವಂಚನೆ
ಜಿಲ್ಲಾ ಸರ್ಜನ್ ಮೂಲಕ ಪರಿಚಯವಾದ ಶ್ರೇಯಸ್ ಮೆಡಿಕಲ್ ಮಾಲೀಕ ಸತೀಶ್ ಅವರಿಗೆ ಸುಮಾರು 1.8 ಕೋಟಿ ರೂಪಾಯಿ ಮೌಲ್ಯದ ಔಷಧ ಸರಬರಾಜು ಟೆಂಡರ್ ಕೊಡಿಸುವುದಾಗಿ ಮಿಥುನ್ ನಂಬಿಸಿದ್ದ. ಇದಕ್ಕಾಗಿ ಶೇ 20ರಷ್ಟು ಕಮಿಷನ್ ನೀಡಬೇಕೆಂದು ಒಪ್ಪಂದ ಮಾಡಿಕೊಂಡು, ಜಕ್ಕೂರು ಬಳಿ ಬರೋಬ್ಬರಿ 36 ಲಕ್ಷ ರೂ. ಸೇರಿದಂತೆ ಒಟ್ಟು 41 ಲಕ್ಷ ರೂಪಾಯಿಗಳನ್ನು ಪಡೆದು ವಂಚಿಸಿದ್ದಾನೆ.
ತನ್ನ ಪ್ರಭಾವ ತೋರಿಸಲು ಬೆಂಗಳೂರಿನ ಓರ್ವ ಡಿಸಿಪಿ ಹೆಸರನ್ನು ಬಳಸಲು ಹೋಗಿ ಅಮೃತಹಳ್ಳಿ ಪೊಲೀಸರಿಗೆ ಅನುಮಾನ ಬರುವಂತೆ ಮಾಡಿದ್ದ. ಪೊಲೀಸರು ಈತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಈತನ ಅಸಲಿ ಬಣ್ಣ ಬಯಲಾಗಿದೆ. ತಾನು 10 ಲಕ್ಷ ಜನರಲ್ಲಿ ಪರೀಕ್ಷೆ ಬರೆದು ಪಾಸಾದ 900 ಅಧಿಕಾರಿಗಳಲ್ಲಿ ಒಬ್ಬ ಎಂದು ಸುಳ್ಳು ಹೇಳಿ ಪ್ರಭಾವಿ ಸ್ವಾಮೀಜಿಗಳನ್ನೂ ಈತ ನಂಬಿಸಿದ್ದ ಎನ್ನಲಾಗಿದೆ.
ಇದನ್ನೂ ಓದಿ:
ಸದ್ಯ ಪೊಲೀಸರು ಜಿಲ್ಲಾ ಸರ್ಜನ್ ಡಾ. ಚಂದ್ರಶೇಖರ್ ಅವರನ್ನು ವಿಚಾರಣೆ ನಡೆಸುತ್ತಿದ್ದು, ಇನ್ನೂ ಹಲವು ಆಸ್ಪತ್ರೆ ಮಾಲೀಕರಿಗೆ ಈತ ವಂಚಿಸಿರುವ ಶಂಕೆ ವ್ಯಕ್ತವಾಗಿದೆ.
