ಐಟಿ ದಾಳಿಯಿಂದ ಲೋಕಸಭೆ ಚುನಾವಣೆಯಲ್ಲಿ ನಮಗೆ ಶೇ.10ರಷ್ಟು ಮತಗಳು ಹೆಚ್ಚಾಗಲಿವೆ :ಎಚ್.ಡಿ. ರೇವಣ್ಣ – Vishwanews24
ಹಾಸನ : ನಾವು ಈ ಐಟಿ ದಾಳಿಗೆಲ್ಲ ಹೆದರೋ ಹಾಗಿದ್ರೆ ನಾವು ಯಾವತ್ತೋ ಮನೆಗೆ ಹೋಗಬೇಕಾಗಿತ್ತು. ಈ ದಾಳಿಗೆ ಪ್ರತಿಯಾಗಿ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಮಾಡಿದಂತೆ ನಾವೂ ಪ್ರತಿಭಟನೆ ಮಾಡುತ್ತೇವೆ. ದೆಹಲಿ ಮತ್ತು ಬೆಂಗಳೂರಿನಲ್ಲಿ ಹೋರಾಟ ಮಾಡುತ್ತೇವೆ ಎಂದು ಸಚಿವ ಎಚ್.ಡಿ. ರೇವಣ್ಣ ಹೇಳಿದ್ದಾರೆ.
ಈ ಬಗ್ಗೆ ಮಾ.28 ರ ಗುರುವಾರ ಹೊಳೆನರಸೀಪುರದಲ್ಲಿ ಪ್ರತಿಕ್ರಿಯಿಸಿದ ಸಚಿವ ಎಚ್.ಡಿ. ರೇವಣ್ಣ, ಆದಾಯ ತೆರಿಗೆ ಇಲಾಖೆ ಮುಖ್ಯಸ್ಥ ಬಿಜೆಪಿಯ ಏಜೆಂಟ್ ಆಗಿದ್ದಾರೆ. ಬಿಜೆಪಿ ಪಕ್ಷಕ್ಕೆ ಐಟಿ ಮುಖ್ಯಸ್ಥ ಸೇರ್ಪಡೆಯಾಗುವುದು ಒಳಿತು. ಬಳಿಕ ಬಿಜೆಪಿಯಿಂದ ಟಿಕೆಟ್ ಪಡೆದು ಚುನಾವಣೆಗೆ ಸ್ಪರ್ಧಿಸಲಿ ಎಂದು ಕಿಡಿಕಾರಿದರು.
ಐಟಿ ರೇಡ್ ಗೆ ನಾವು ಭಯಪಡುವವರಲ್ಲ, ಬಿಜೆಪಿಗೆ ಅಂತ್ಯ ಕಾಲ ಸಮೀಪಿಸಿದೆ ಎಂದು ಸಚಿವ ಪುಟ್ಟರಾಜು ಹಾಗೂ ಇತರರ ಮನೆ ಮೇಲೆ ನಡೆದ ಐಟಿ ದಾಳಿ ಖಂಡಿಸಿದರು.
ಹೀಗೆಲ್ಲಾ ಮಾಡಿ ನಮ್ಮನ್ನು ಹೆದರಿಸಬಹುದು ಎನ್ನುವುದು ಅವರ ಭ್ರಮೆ. ಇಂಥವನ್ನೆಲ್ಲಾ ಸಾಕಷ್ಟು ನೋಡಿದ್ದೇನೆ. ಬಿಜೆಪಿಗೆ ಕೊನೆಗಾಲ ಸಮೀಪಿಸುತ್ತಿದೆ. ಐಟಿ ದಾಳಿಯಿಂದ ಲೋಕಸಭೆ ಚುನಾವಣೆಯಲ್ಲಿ ನಮಗೆ ಶೇ10ರಷ್ಟು ಮತಗಳು ಹೆಚ್ಚಾಗಲಿವೆ. ಐಟಿ ಇಲಾಖೆ ಮುಖ್ಯಸ್ಥರ ವಿರುದ್ಧ ಸಿಬಿಐ ತನಿಖೆ ಆಗಬೇಕು’ ಎಂದು ಅವರು ಗುಡುಗಿದರು..
