ಐಸಿಸ್ ಸಂಪರ್ಕ ಹಿನ್ನೆಲೆ ಉಳ್ಳಾಲದ ಬುರ್ಖಾಧಾರಿ ಮಹಿಳೆ ಬಂಧನದ ಬಗ್ಗೆ ಮತೀಯವಾದಿ ಸಂಘಟನೆಗಳ ದಿವ್ಯ ಮೌನ : ಯಶ್ಪಾಲ್ ಸುವರ್ಣ ಆಕ್ರೋಶ – Vishwanews24
ಐಸಿಸ್ ಸಂಪರ್ಕ ಹಿನ್ನೆಲೆ ಉಳ್ಳಾಲದ ಬುರ್ಖಾಧಾರಿ ಮಹಿಳೆ ಬಂಧನದ ಬಗ್ಗೆ ಮತೀಯವಾದಿ ಸಂಘಟನೆಗಳ ದಿವ್ಯ ಮೌನ : ಯಶ್ಪಾಲ್ ಸುವರ್ಣ ಆಕ್ರೋಶ – Vishwanews24
ಕಾಲೇಜು ವಿದ್ಯಾರ್ಥಿನಿಯರ ಹಿಜಾಬ್ ವಿಚಾರದಲ್ಲಿ ವಿವಾದ ಸೃಷ್ಟಿಸಲು ಯತ್ನಿಸಿದ್ದ ಮತೀಯವಾದಿ ಸಂಘಟನೆಗಳು ಐಸಿಸ್ ಉಗ್ರಸಂಘಟನೆಯ ಸಂಪರ್ಕದ ಆರೋಪದಲ್ಲಿ ರಾಷ್ಟ್ರೀಯ ತನಿಖಾ ದಳದಿಂಧ ಬಂಧಿತಳಾದ ಉಳ್ಳಾಲದ ಮಾಜಿ ಶಾಸಕರ ಸಂಬಂಧಿ ಮಹಿಳೆಯ ಬಗ್ಗೆ ಮೌನ ತಾಳಿರುವ ಬಗ್ಗೆ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಅವಕಾಶ ನೀಡದಿರುವ ಸರಕಾರಿ ಕಾಲೇಜಿನ ಪ್ರಾಂಶುಪಾಲರಿಗೆ ಒತ್ತಡ ಹೇರಲು ಮುಂದಾಗಿದ್ದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಹಿತ ವಿವಿಧ ಮತೀಯವಾದಿ ಸಂಘಟನೆಗಳು ಉಳ್ಳಾಲದ ಬುರ್ಖಾಧಾರಿ ಮಹಿಳೆಯ ಬಂಧನ ವಿಚಾರದಲ್ಲಿ ಮಾತ್ರ ಮೌನವಹಿಸುವ ಮೂಲಕ ಈ ದೇಶ ವಿರೋಧಿ ಸಂಘಟನೆಗಳ ಬಣ್ಣ ಬಯಲಾಗಿದೆ.
ದೇಶದ ಆಂತರಿಕ ಭದ್ರತೆಗೆ ಮಾರಕವಾಗಿರುವ ಐಸಿಸ್ ಉಗ್ರ ಸಂಘಟನೆಯೊಂದಿಗೆ ಮತೀಯವಾದಿ ಸಂಘಟನೆಗಳು ಕರಾವಳಿ ಭಾಗದಲ್ಲಿ ಸಂಪರ್ಕದ ಬಗ್ಗೆ ರಾಷ್ಟ್ರೀಯ ತನಿಖಾ ದಳದ ತನಿಖೆಯಲ್ಲಿ ಬಯಲಾಗಿದ್ದು, ಇದೇ ಮನಸ್ಥಿತಿಯ ಸಂಘಟನೆಗಳು ಹಿಜಾಬ್ ವಿವಾದದ ಮೂಲಕ ಕರಾವಳಿ ಜಿಲ್ಲೆಯ ಶಾಂತಿ ಸುವ್ಯವಸ್ಥೆ ಕದಡಲು ಪ್ರಯತ್ನಿಸುತ್ತಿದೆ.
ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ ವಿಚಾರದಲ್ಲಿ ತಮ್ಮ ಧಾರ್ಮಿಕ ಆಚರಣೆಗೆ ಅವಕಾಶ ನೀಡಲು ಒತ್ತಡ ಹೇರುತ್ತಿರುವ ಸಂಘಟನೆಗಳಿಗೆ ಸೊಪ್ಪು ಹಾಕದೇ ಬುರ್ಖಾ, ಹಿಜಾಬ್ ಸಹಿತ ಎಲ್ಲಾ ವಿಚಾರದಲ್ಲೂ ಶಾಲಾಡಳಿತ ಕಠಿಣ ನಿಯಮ ರೂಪಿಸಬೇಕು.
ಉಳ್ಳಾಲದಲ್ಲಿ ಬಂಧಿತಳಾದ ಮಹಿಳೆ ಕೂಡಾ ಲವ್ ಜೆಹಾದ್ ಮೂಲಕ ಉಗ್ರಸಂಘಟನೆಯ ಸಂಪರ್ಕಕ್ಕೇ ಬಂದಿರುವುದು ಮೇಲ್ನೋಟಕ್ಕೇ ಸಾಬೀತಾಗಿದ್ದು, ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ 18 ಹಿಂದೂ ಪವಿತ್ರ ಕ್ಷೇತ್ರಗಳನ್ನು ಅಪವಿತ್ರ ಗೊಳಿಸಿರುವ ಬಂಧಿತ ವ್ಯಕ್ತಿ ಕೂಡಾ ಮತಾಂತರಿಯಾಗಿದ್ದು ರಾಜ್ಯದಲ್ಲಿ ಮತಾಂತರ ನಿಷೇಧ ಮತ್ತು ಲವ್ ಜೆಹಾದ್ ವಿರುದ್ಧ ಕಠಿಣಕ್ರಮ ಕೈಗೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿದೆ.
ಈಗಾಗಲೇ ಕೇರಳದಲ್ಲಿ ಹಿಂದೂ ಕಾರ್ಯಕರ್ತರ ಕಗ್ಗೊಲೆ ನಡೆಸುತ್ತಿರುವ ಮತೀಯವಾದಿ ಎಸ್ ಡಿ ಪಿ ಐ, ಪಿ ಎಫ್ ಐ ಸಂಘಟನೆಗಳು ಇದೀಗ ರಾಜ್ಯದ ಕರಾವಳಿ ಭಾಗದಲ್ಲೂ ಬೇರೂರುತ್ತಿರುವುದು ದೇಶದ ಆಂತರಿಕ ಭದ್ರತೆಗೆ ಸವಾಲಾಗಿದೆ. ರಾಜ್ಯ ಮತ್ತು ಕೇಂದ್ರ ಸರಕಾರ ಈ ಬಗ್ಗೆ ನಿಗಾವಹಿಸಲು ರಾಷ್ಟ್ರೀಯ ತನಿಖಾದಳದ ಕಚೇರಿಯನ್ನು ಕರಾವಳಿ ಜಿಲ್ಲೆಯಲ್ಲಿ ಸ್ಥಾಪಿಸಿ ದೇಶ ವಿರೋಧಿ ಸಂಘಟನೆಗಳ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವಂತೆ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
