ಕಟೀಲು ದೇವಿಗೆ ನೂತನ ಬ್ರಹ್ಮರಥ : 6 ಚಕ್ರಗಳ ಹೊಸ ರಥದ ನಿರ್ಮಾಣ – vishwanews24

Featured, ದಕ್ಷಿಣ ಕನ್ನಡ

ಎಪ್ರಿಲ್ ಜಾತ್ರೆಯಲ್ಲಿ ಭ್ರಮರಾಂಬೆಗೆ ನೂತನ ರಥದಲ್ಲಿ ಉತ್ಸವ

ಐವತ್ತು ಅಡಿ ಎತ್ತರದ ಆರು ಚಕ್ರಗಳ ಹೊಸ ರಥದ ನಿರ್ಮಾಣ

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಿಗೆ ಸೇವಾ ರೂಪದಲ್ಲಿ ಅರ್ಪಣೆ

6 ಚಕ್ರಗಳ ಬ್ರಹ್ಮರಥ, ಐದು ಚಕ್ರಗಳ ಚಂದ್ರ ಮಂಡಲ ಸಮರ್ಪಣೆ

ಕಟೀಲು: ಕಟೀಲಿನಲ್ಲಿ ಮುಂದಿನ ಏಪ್ರಿಲ್‌ನಲ್ಲಿ ನಡೆಯುವ ಜಾತ್ರೆಯಲ್ಲಿ ಭ್ರಮರಾಂಬೆಗೆ ನೂತನ ರಥದಲ್ಲಿ ಉತ್ಸವ ನಡೆಯಲಿದೆ.

50 ಅಡಿ ಎತ್ತರದ 6 ಚಕ್ರಗಳ ಹೊಸ ರಥವನ್ನು ಕಟೀಲು ದೇವಿಗೆ ದಾನಿಯೊಬ್ಬರು ಸೇವಾ ರೂಪದಲ್ಲಿ ನಿರ್ಮಿಸಿ ಕೊಡುತ್ತಿದ್ದಾರೆ. ಉಡುಪಿಯ ಶಿಲ್ಪಿ ಸುದರ್ಶನ ಆಚಾರ್ಯರ ನೇತೃತ್ವದಲ್ಲಿ 12 ಮಂದಿ ಶಿಲ್ಪಿಗಳು ಒಂದೂವರೆ ವರ್ಷಗಳ ಕಾಲ ರಥ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಇದರ ಜೊತೆಗೆ 5 ಚಕ್ರಗಳ ಚಂದ್ರಮಂಡಲ ರಥವೂ ನಿರ್ಮಾಣವಾಗಲಿದೆ.

ಪತ್ನಿಯನ್ನು ಕತ್ತು ಹಿಸುಕಿ ಕೊಲೆಗೈದ ಪತಿ – vishwanews24

ಹೀಗಿರಲಿದೆ ರಥ
ರಥದ ಜಿಡ್ಡೆಯ ಎತ್ತರ 12.5 ಅಡಿ, 12.5 ಅಡಿ ಅಗಲ ಇರಲಿದೆ. ಸಿಂಹ ಮುಖದ ಕೆತ್ತನೆ, ಆನೆ ಕೆತ್ತನೆ ಸಾಲು, ಹೊಯ್ಸಳ ಶೈಲಿಯ ಬಳ್ಳಿ ಕೆತ್ತನೆ, ಗೋವು ಕರುಗಳ ಕೆತ್ತನೆ ಹೀಗೆ 4 ಹಂತದಲ್ಲಿ ವಿಗ್ರಹಗಳ ಸಾಲು ಬರುತ್ತದೆ. ಅಷ್ಟದಿಕ್ಷಾಲಕರು, 16 ಸಿಂಹಗಳ, ಹಂಸಗಳ, ಗಂಟೆಗಳ, 48 ಗಜಪಕ್ಷಿಗಳ ಕೆತ್ತನೆಗಳಿರುತ್ತವೆ.

ಎರಡನೇ ಹಂತದಲ್ಲಿ ಸಮುದ್ರಮಥನ, ಸೀತಾ ಕಲ್ಯಾಣ, ಪಾರ್ವತಿ ಸ್ವಯಂವರ, ಶ್ರೀ ರಾಮ ಪಟ್ಟಾಭಿಷೇಕ, ನವದುರ್ಗೆಯರ ಕೆತ್ತನೆಗಳಿರುತ್ತವೆ. ಕಾಳಿಕಾಂಬಾ, ಗಾಯತ್ರೀ, ಸಹಸ್ರಾಕ್ಷಿ, ಲಕ್ಷ್ಮೀ ನರಸಿಂಹ, ಅಷ್ಟಲಕ್ಷ್ಮೀಯರು, ಶಾಕಂಬರಿ, ಶತಾಕ್ಷಿ, ಲಲಿತಾಂಬಿಕೆ, ಮಹಾಕಾಳಿ, ಮಹಾಲಕ್ಷ್ಮೀ, ಮಹಾಸರಸ್ವತೀ, ಪಂಚ ಮಾತೃಕೆಯರು, ಬಾಲ ಸರಸ್ವತಿ, ಗೌರೀ ಲಕ್ಷ್ಮೀ ಕೆತ್ತನೆಗಳ ಜೊತೆಗೆ ಸರ್ಪಗಳ ಕೆತ್ತನೆ ರಥದ ಮೆರುಗನ್ನು ಹೆಚ್ಚಿಸಲಿವೆ.
ವ್ಯಾಲಮುಖ, ಕುದುರೆ, ಮೊಗ್ಗು ಆಕಾರ ಕೆತ್ತನೆಗಳ ಜೊತೆಗೆ 56 ಚಿಕ್ಕ ಕಂಬಗಳು ರಥದ ಸೌಂದರ್ಯಕ್ಕೆ ಪೂರಕವಾಗಿ ಇರಲಿವೆ.

ನಾಲ್ಕನೇ ಹಂತದಲ್ಲಿ ರಂಗಸ್ಥಳ ಯಕ್ಷಗಾನದ ಕೆತ್ತನೆ, ಮೇಲಿನ ಹಲಗೆಯಲ್ಲಿ ಗಂಡಭೇರುಂಡ ಇರುತ್ತದೆ. ಪೀಠ, ದ್ವಾರಗಳಲ್ಲಿ 16 ದೇವರ ಚಿತ್ರಪಟಗಳು, 16 ಹಾವಿನ ಹೆಡೆಗಳು ಇತರ ಅಲಂಕಾರಗಳು, ಪತಾಕೆ ನಿಶಾನೆಗಳು, ಶಿಖರ, ಶ್ವೇತಚಕ್ರ ಹೀಗೆ ಕಟೀಲು ದೇವರಿಗೆ ನಿರ್ಮಾಣವಾಗುತ್ತಿರುವ ನೂತನ ರಥ ಮನಮೋಹಕವಾಗಿ ಮೂಡಿಬರಲಿದೆ.

ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ನಟ ಪ್ರೇಮ್ ದಂಪತಿ – vishwanews24

ಖ್ಯಾತ ವಿದ್ವಾಂಸ ಅವಧಾನಿ ಸುಬ್ರಹ್ಮಣ್ಯ ಭಟ್ ಗುಂಡಿಬೈಲು ಅವರು ವಾಸ್ತು ಹೇಳಿದ್ದು, ಧ್ವಜಾಯದಲ್ಲಿ ಸುದರ್ಶನ ಆಚಾರ್ಯರು ಕಟೀಲು ದೇಗುಲದ ಎದುರೇ ನಿರ್ಮಿಸಿರುವ ಆವರಣದಲ್ಲಿ ಇತರ ಶಿಲ್ಪಿಗಳೊಂದಿಗೆ ರಥದ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ.

ಕಟೀಲಿನಲ್ಲಿ ಚಿನ್ನದ ರಥ ಆಗುವ ಸಂದರ್ಭ ಕಡಿಯಾಳಿ ಕೃಷ್ಣಮೂರ್ತಿ ಆಚಾರ್ಯರ ಜೊತೆಗೆ ಶಿಲ್ಪಿಯಾಗಿದ್ದ ಸುದರ್ಶನ ಆಚಾರ್ಯರು ಈಗ ಬ್ರಹ್ಮರಥ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ.

ಸುದರ್ಶನ ಆಚಾರ್ಯರು ಬಹುಬೇಡಿಕೆಯ ಶಿಲ್ಪಿಯಾಗಿದ್ದಾರೆ. ಕಡಿಯಾಳಿ, ಪುತ್ತೂರು ದೇಗುಲ, ಕುಂಜಾರುಗಿರಿ, ಸೋದೆ ವಾದಿರಾಜ ಮಠ, ಶಿಮಂತೂರು ದೇವಸ್ಥಾನ, ತುಮಕೂರು, ಬೆಂಗಳೂರು, ಅಶ್ವಿ, ಬ್ರಹ್ಮಾವರ ಸಾಲಿಕೇರಿ, ಕಾವೂರು ಹೀಗೆ ಅನೇಕ ಕಡೆಗಳಲ್ಲಿ ರಥಗಳನ್ನು ನಿರ್ಮಿಸಿದ ಅನುಭವಿಯಾಗಿದ್ದಾರೆ.
26 ವರ್ಷಗಳಿಂದ ಶಿಲ್ಪಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಕಟೀಲು ದೇಗುಲದಲ್ಲಿ ಬ್ರಹ್ಮರಥದ ಜೊತೆಗೆ ವಿಶಿಷ್ಟ ರೀತಿಯ 5 ಚಕ್ರಗಳ ಚಂದ್ರಮಂಡಲ ರಥವನ್ನೂ ನಿರ್ಮಿಸಲಿದ್ದಾರೆ. ಇವರೆಡೂ ಏಪ್ರಿಲ್ ತಿಂಗಳಲ್ಲಿ ದೇವರಿಗೆ ಸಮರ್ಪಣೆಯಾಗಲಿವೆ.

ಸುಪ್ರೀಂ ಕೋರ್ಟ್‌ನಲ್ಲಿ ಉದ್ಯೋಗವಕಾಶ : 250 ಜೂನಿಯರ್ ಕೋರ್ಟ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ – vishwanews24

ಏಪ್ರಿಲ್‌ನಲ್ಲಿ ಎರಡು ರಥಗಳೂ ಸಿದ್ಧ
ಕಟೀಲು ದೇವರಿಗೆ ಭಕ್ತರು 6 ಚಕ್ರಗಳ ಬ್ರಹ್ಮರಥ ಹಾಗೂ 5 ಚಕ್ರಗಳ ಚಂದ್ರಮಂಡಲ ನಿರ್ಮಿಸಿಕೊಡುತ್ತಿದ್ದಾರೆ. ದೇವರು ನಡೆಸಿಕೊಟ್ಟರೆ ಎರಡೂ ರಥಗಳ ಸಮರ್ಪಣೆ ಏಪ್ರಿಲ್‌ನಲ್ಲಿ ನಡೆಯಲಿದ್ದು, ನೂತನ ರಥಗಳಲ್ಲೇ ಭ್ರಮರಾಂಬೆಯ ಜಾತ್ರೆ ನಡೆಯಲಿದೆ. ರಥದ ಚಕ್ರಗಳು ತಿರುಗುವಾಗ ರಥದ ಮೇಲೆಯೂ 5 ಚಕ್ರಗಳು ತಿರುಗುವ ವಿಶಿಷ್ಟ ವಿನ್ಯಾಸದ ಚಂದ್ರಮಂಡಲ ಸಿದ್ಧವಾಗಲಿದೆ. ಈಗ ಇರುವ ಬ್ರಹ್ಮರಥ 7-8 ದಶಕಗಳಿಗೂ ಹಿಂದಿನದು. ರಥ ಹಳೆಯದ್ದಾದರಿಂದ ಹೊಸ ರಥದ ನಿರ್ಮಾಣಕ್ಕೆ ನಿರ್ಧರಿಸಿದಾಗ ಭಕ್ತರೊಬ್ಬರು ಸೇವಾರೂಪದಲ್ಲಿ ನಿರ್ಮಿಸಿಕೊಡಲು ಮುಂದೆ ಬಂದರು. ಚಂದ್ರಮಂಡಲ ರಥ ನಿರ್ಮಾಣಕ್ಕೆ ನಿರ್ಧರಿಸಿದಾಗ ಮತ್ತೊಬ್ಬರು ಭಕ್ತರು ತಮ್ಮ ವತಿಯಿಂದ ನಿರ್ಮಿಸಿಕೊಡಲು ಒಪ್ಪಿದರು. ದೇವರ ಇಚ್ಛೆಯಂತೆ ಕಟೀಲಿನಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು ನೂತನ ರಥಗಳು ದೇವರ ಸೇವೆಗೆ ಸಿದ್ಧವಾಗಲಿವೆ. – ಶ್ರೀಹರಿನಾರಾಯಣದಾಸ ಆಸ್ರಣ್ಣ, ಅರ್ಚಕರು ಕಟೀಲು ದೇವಸ್ಥಾನ

Leave a Reply