ಕನ್ನಡ ಬಾರದ ಬ್ಯಾಂಕ್ ಸಿಬ್ಬಂದಿಯಿಂದಾಗಿ ಜನಸಮುದಾಯಕ್ಕೆ ಪ್ರತಿನಿತ್ಯ ಕಿರುಕುಳ : ಸಿದ್ದರಾಮಯ್ಯ -Vishwanews24
ಕನ್ನಡ ಬಾರದ ಬ್ಯಾಂಕ್ ಸಿಬ್ಬಂದಿಯಿಂದಾಗಿ ಜನಸಮುದಾಯಕ್ಕೆ ಪ್ರತಿನಿತ್ಯ ಕಿರುಕುಳ : ಸಿದ್ದರಾಮಯ್ಯ -Vishwanews24
ಬೆಂಗಳೂರು: ಇತ್ತೀಚಿನ ವರ್ಷಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬಹುತೇಕ ಯೋಜನೆಗಳ ಅನುಷ್ಠಾನ ಬ್ಯಾಂಕ್ ಗಳ ಮೂಲಕವೇ ನಡೆಯುವುದರಿಂದ ರೈತರು, ಕಾರ್ಮಿಕರು, ಮಹಿಳೆಯರು ಸೇರಿದಂತೆ ಗ್ರಾಮೀಣ ಪ್ರದೇಶದ ಜನತೆ ಹೆಚ್ಚುಹೆಚ್ಚು ಬ್ಯಾಂಕನ್ನು ಅವಲಂಬಿಸಿದ್ದಾರೆ. ಆದರೆ ಕನ್ನಡ ಬಾರದ ಸಿಬ್ಬಂದಿಯಿಂದಾಗಿ ಈ ಜನಸಮುದಾಯ ಪ್ರತಿನಿತ್ಯ ಕಿರುಕುಳ ಅನುಭವಿಸುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ.
ಈ ಕುರಿತಾಗಿ ಸರಣಿ ಟ್ವೀಟ್ಗಳನ್ನು ಮಾಡಿರುವ ಅವರು, ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿ ಹೋಗಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಮತ್ತೆ ಮತ್ತೆ ಕನ್ನಡ-ಕರ್ನಾಟಕಕ್ಕೆ ಅನ್ಯಾಯ ಎಸಗುತ್ತಾ ಬಂದಿದ್ದಾರೆ. ಇದೀಗ ಬ್ಯಾಂಕಿಂಗ್ ಪರೀಕ್ಷೆಗಳಲ್ಲಿಯೂ ಸಚಿವರು ಈ ಅನ್ಯಾಯವನ್ನು ಮುಂದುವರಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.
ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಸೌಲಭ್ಯಗಳ ಸುನಾಮಿ ಬರಲಿದೆ ಎಂದು ಲೋಕಸಭಾ ಚುನಾವಣೆಯ ಕಾಲದಲ್ಲಿ ಬುರುಡೆಬಿಟ್ಟ ರಾಜ್ಯ ಬಿಜೆಪಿಯಿಂದ ಆಯ್ಕೆಯಾದ 25 ಸಂಸದರು ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯಗಳ ಸರಮಾಲೆಯ ಬಗ್ಗೆ ಬಾಯಿಗೆ ಬೀಗ ಹಾಕಿಕೊಂಡು ಕೂತಿದ್ದಾರೆ.
ತಮ್ಮನ್ನು ರಾಜ್ಯದ ಹುಲಿ-ಸಿಂಹಗಳೆಂದು ವಂದಿ-ಮಾಗದರಿಂದ ಘೋಷಣೆ ಕೂಗಿಸುತ್ತಿರುವ ರಾಜ್ಯದ ಮುಖ್ಯಮಂತ್ರಿ ಬಿಎಸ್ವೈ ಕರ್ನಾಟಕಕ್ಕೆ ಅನ್ಯಾಯ ಆಗುತ್ತಿರುವಾಗ ಮಾತ್ರ ಬೆದರಿದ ಇಲಿಯಾಗುತ್ತಾರೆ. ಬ್ಯಾಂಕಿಂಗ್ ಪರೀಕ್ಷೆಯಲ್ಲಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಸಿಎಂ ಬಿಎಸ್ ಯಡಿಯೂರಪ್ಪ ತಕ್ಷಣ ಪ್ರಧಾನಿ ಮೋದಿ ಗಮನಸೆಳೆದು ಕನ್ನಡಿಗರಿಗೆ ನ್ಯಾಯ ಒದಗಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಬ್ಯಾಂಕಿಂಗ್ ಪರೀಕ್ಷೆಗಳಲ್ಲಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ನಮ್ಮ ಸರ್ಕಾರ ಕೇಂದ್ರ ಸರ್ಕಾರದ ಗಮನಸೆಳೆದ ನಂತರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಅವರು ಬ್ಯಾಂಕಿಂಗ್ ಪರೀಕ್ಷೆಗಳನ್ನು ಕನ್ನಡದಲ್ಲಿಯೂ ನಡೆಸುವ ಭರವಸೆಯನ್ನು ಲೋಕಸಭೆಯಲ್ಲಿ ನೀಡಿದ್ದರೂ ಆ ಭರವಸೆಯನ್ನು ಇಂದಿಗೂ ಈಡೇರಿಸಿಲ್ಲ.
2014ಕ್ಕಿಂತ ಮೊದಲು IBPS ನಡೆಸುತ್ತಿದ್ದ ಪರೀಕ್ಷೆಗಳಲ್ಲಿ ರಾಜ್ಯಭಾಷೆಗಳಲ್ಲಿಯೂ ಬರೆಯುವ ಅವಕಾಶ ಇತ್ತು. 2014ರಲ್ಲಿ ಬಿಜೆಪಿ ಸರ್ಕಾರ ನಿಯಮಾವಳಿಗೆ ತಿದ್ದುಪಡಿ ಮಾಡಿ ಇಂಗ್ಲೀಷ್ ಮತ್ತು ಹಿಂದಿಯೇತರ ಭಾಷಿಕ ಯುವಜನರಿಗೆ ಅನ್ಯಾಯಮಾಡಿದೆ. ಈ ಅನ್ಯಾಯವನ್ನು ಪ್ರತಿಭಟಿಸಿ ಹಿಂದಿನ ನಮ್ಮ ಸರ್ಕಾರ ಕೇಂದ್ರಕ್ಕೆ ಪತ್ರವನ್ನೂ ಬರೆದಿತ್ತು.
ಐಬಿಪಿಎಸ್ ಇದೀಗ ಹನ್ನೊಂದು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ 3000 ಕಾರಕೂನ ಹುದ್ದೆಗಳಿಗೆ ಅರ್ಜಿ ಆಹ್ಹಾನಿಸಿದ್ದು ಇವುಗಳಲ್ಲಿ 407 ಹುದ್ದೆಗಳು ಕರ್ನಾಟಕ ರಾಜ್ಯಕ್ಕೆ ಸೇರಿದ್ದಾಗಿದೆ. ಕನ್ನಡಕ್ಕೆ ಆಗಿರುವ ಅನ್ಯಾಯದಿಂದಾಗಿ ತೀವ್ರ ನಿರುದ್ಯೋಗದ ಸಮಸ್ಯೆ ಎದುರಿಸುತ್ತಿರುವ ಕನ್ನಡಿಗ ಯುವಜನರು ಉದ್ಯೋಗದ ಅವಕಾಶದಿಂದ ವಂಚಿತರಾಗಲಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿಯ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ ನೀಡದೆ ಕೇಂದ್ರ ಸರ್ಕಾರ ಕನ್ನಡಿಗರಿಗೆ ದ್ರೋಹ ಬಗೆಯುತ್ತಾ ಬಂದಿದೆ. ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆ (IBPS)ಯ ಇತ್ತೀಚಿನ ಸುತ್ತೋಲೆ ಈ ದ್ರೋಹಕ್ಕೆ ಸಾಕ್ಷಿ. ಕೇಂದ್ರ ಸರ್ಕಾರ ತಕ್ಷಣ ಗಮನಹರಿಸಿ ಕನ್ನಡಿಗರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
