ಕರಾವಳಿಯ ಕಂಬಳಕ್ಕೆ ಸರ್ಕಾರದ ಸಿಹಿಸುದ್ದಿ: 23 ಕಂಬಳಗಳಿಗೆ ತಲಾ ₹5 ಲಕ್ಷ ಅನುದಾನ ಮಂಜೂರು – vishwanews24
ಕರಾವಳಿಯ ಕಂಬಳಕ್ಕೆ ಸರ್ಕಾರದ ಸಿಹಿಸುದ್ದಿ: 23 ಕಂಬಳಗಳಿಗೆ ತಲಾ ₹5 ಲಕ್ಷ ಅನುದಾನ ಮಂಜೂರು
ಉಡುಪಿ: ಕರಾವಳಿಯ ಸಾಂಪ್ರದಾಯಿಕ ಕ್ರೀಡೆಯಾದ ಕಂಬಳಕ್ಕೆ ರಾಜ್ಯ ಸರ್ಕಾರವು ಮಹತ್ವದ ಉತ್ತೇಜನ ನೀಡಿದ್ದು, 2025-26ನೇ ಸಾಲಿನ 23 ಕಂಬಳಗಳಿಗೆ ತಲಾ ₹5 ಲಕ್ಷದಂತೆ ಒಟ್ಟು ₹1.15 ಕೋಟಿ ಅನುದಾನ ಮಂಜೂರು ಮಾಡಿದೆ.
ಪ್ರವಾಸೋದ್ಯಮ ಇಲಾಖೆಯಿಂದ ಅನುದಾನದ ಹಣ ಬಿಡುಗಡೆಗೊಂಡಿದ್ದು, ಸರ್ಕಾರದ ನಿರ್ಧಾರವನ್ನು ಕಂಬಳ ಆಯೋಜಕರು ಹಾಗೂ ಸಂಘಟಕರು ಸ್ವಾಗತಿಸಿದ್ದಾರೆ.
ರಾಜ್ಯ ಕಂಬಳ ಸಮಿತಿ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನೀಡಿದ್ದ ಭರವಸೆಯಂತೆ ಕಂಬಳಗಳಿಗೆ ಅನುದಾನ ಬಿಡುಗಡೆ ಮಾಡಿರುವುದು ಸಂತಸದ ಸಂಗತಿ ಎಂದರು.
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ 23 ಕಂಬಳಗಳಿಗೆ ಇದರಿಂದ ನೆರವಾಗಲಿದ್ದು, ಕಂಬಳ ಆಯೋಜನೆಯ ಆರ್ಥಿಕ ಹೊರೆ ಕಡಿಮೆಯಾಗಲಿದೆ ಎಂದು ಹೇಳಿದರು.
ಕಂಬಳವು ತುಳುನಾಡಿನ ಸಂಸ್ಕೃತಿ, ಸಂಪ್ರದಾಯ ಮತ್ತು ಪರಂಪರೆಯ ಪ್ರತೀಕವಾಗಿದ್ದು, ಅದನ್ನು ಉಳಿಸಿ ಬೆಳೆಸಲು ಸರ್ಕಾರದ ಸಹಕಾರ ಅಗತ್ಯವಾಗಿದೆ. ಈ ಹಿಂದೆ ಸಿದ್ದರಾಮಯ್ಯ ಹಾಗೂ ಸದಾನಂದ ಗೌಡ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿಯೂ ಕಂಬಳಕ್ಕೆ ಅನುದಾನ ನೀಡಲಾಗಿತ್ತು. ರಾಜಕೀಯ ಭೇದವಿಲ್ಲದೆ ಎಲ್ಲ ಸರ್ಕಾರಗಳೂ ಕಂಬಳವನ್ನು ಪ್ರೋತ್ಸಾಹಿಸಿರುವುದು ಶ್ಲಾಘನೀಯ ಎಂದರು.
ಮುಂದಿನ ರಾಜ್ಯ ಬಜೆಟ್ನಲ್ಲಿ ಕಂಬಳಕ್ಕಾಗಿ ₹5 ಕೋಟಿ ಅನುದಾನ ಮೀಸಲಿಡುವಂತೆ ಅವರು ಸರ್ಕಾರವನ್ನು ಒತ್ತಾಯಿಸಿದರು.
ಬಂಟ್ವಾಳ : ಬಸ್ ನಿಲ್ದಾಣದಲ್ಲಿ ಯುವತಿಯ ಭೀಕರ ಹತ್ಯೆ ಪ್ರಕರಣ : ಆರೋಪಿ ಬಂಧನ – vishwanews24
ಸಾಂಪ್ರದಾಯಿಕ ಕಂಬಳಗಳಿಗೂ ಅನುದಾನ ದೊರಕುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ ಅವರು, ಜೋಡುಕರೆಯ ಎಂಟು ಸಾಂಪ್ರದಾಯಿಕ ಕಂಬಳಗಳು ಹಾಗೂ ಬೈಂದೂರು-ಕುಂದಾಪುರ ಭಾಗದಲ್ಲಿ ನಡೆಯುವ ಒಂಟಿಕರೆ ಕಂಬಳಗಳನ್ನು ರಾಜ್ಯ ಕಂಬಳ ಅಸೋಸಿಯೇಷನ್ಗೆ ಸೇರ್ಪಡೆಗೊಳಿಸಿ ಅನುದಾನಕ್ಕಾಗಿ ಮನವಿ ಮಾಡಲಾಗುವುದು ಎಂದು ಹೇಳಿದರು.
ಮೈಸೂರು ಕಂಬಳ ವಿವಾದ ಕುರಿತು ಪ್ರತಿಕ್ರಿಯಿಸಿದ ಡಾ. ಶೆಟ್ಟಿ, ಕಂಬಳವು ರಾಜಕೀಯ ಮತ್ತು ಧರ್ಮದ ಆಚೆಗೆ ಇರುವ ಜನಪದ ಕ್ರೀಡೆ. ಎಲ್ಲ ರಾಜಕೀಯ ಪಕ್ಷಗಳ ಮುಖಂಡರೂ ಕಂಬಳ ಆಯೋಜಿಸುತ್ತಾರೆ.
ಮೈಸೂರಿನಲ್ಲಿ ಕಂಬಳ ನಡೆಸುವುದಕ್ಕೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ. ಕಂಬಳವನ್ನು ಒಂದು ವರ್ಗದ ಕ್ರೀಡೆ ಎಂದು ಬಿಂಬಿಸುವುದು ತಪ್ಪು. ಕೋಟೆ-ಚೆನ್ನಯ್ಯ ಸೇರಿದಂತೆ ಹಿಂದುಳಿದ ವರ್ಗದ ಜನಪದ ವೀರರ ಹೆಸರಿನಲ್ಲಿಯೂ ಕಂಬಳಗಳು ನಡೆಯುತ್ತಿವೆ.
ಕಾರ್ಕಳ: ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಕಂದಾಯ ನಿರೀಕ್ಷಕ ಚಿಕಿತ್ಸೆ ಫಲಕಾರಿಯಾಗದೆ ನಿಧನ – vishwanews24
ಕಂಬಳವನ್ನು ರಾಜ್ಯದಾದ್ಯಂತ ಮತ್ತಷ್ಟು ವೈಭವೀಕರಿಸುವ ಕೆಲಸಕ್ಕೆ ಎಲ್ಲ ಜನಪ್ರತಿನಿಧಿಗಳು ಕೈಜೋಡಿಸಬೇಕು ಎಂದು ಕರೆ ನೀಡಿದರು.
