ಕಳ್ಳತನ ಮಾಡಲು ವಿಮಾನದಲ್ಲಿ ಬರುವ ಐಷಾರಾಮಿ ಕಳ್ಳರೀಗ ಪೋಲಿಸರ ಕೈಗೆ…!
ಬೆಂಗಳೂರು: ದೆಹಲಿಯಿಂದ ವಿಮಾನದಲ್ಲಿ ಬಂದು ನಗರದ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಐಷಾರಾಮಿ ಚೋರರಿಬ್ಬರು ಜೀವನ್‌ಬಿಮಾ ನಗರ ಪೊಲೀಸರ ಅತಿಥಿಗಳಾಗಿದ್ದಾರೆ.
ಅರ್ಮಾನ್ ಖಾನ್ (27) ಅಲಿಯಾಸ್ ಸೋನು ಹಾಗೂ ಆಶೀಷ್ (28) ಬಂಧಿತರು. ಕದ್ದ ಮಾಲು ಖರೀದಿಸಿದ ತಪ್ಪಿಗೆ ದೆಹಲಿ ಚೋರ್ ಬಜಾರ್‌ನ ಐವರು ಆಭರಣ ವ್ಯಾಪಾರಿಗಳು ಸಹ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಬಂಧಿತರಿಂದ 1.5 ಕೆ.ಜಿ ಚಿನ್ನ ಹಾಗೂ 2 ಕೆ.ಜಿ ಬೆಳ್ಳಿ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.
2014ರಿಂದಲೂ ನಗರದಲ್ಲಿ ಕಳ್ಳತನ ಮಾಡುತ್ತಿರುವ ಅರ್ಮಾನ್ ವಿರುದ್ಧ ಅಶೋಕನಗರ, ರಾಮಮೂರ್ತಿನಗರ, ಬೈಯಪ್ಪನಹಳ್ಳಿ, ಬಾಣಸವಾಡಿ, ರಾಜಾಜಿನಗರ, ಜೀವನ್‌ಬಿಮಾನಗರ ಹಾಗೂ ಮೈಕೊಲೇಔಟ್ ಠಾಣೆಗಳಲ್ಲಿ 40ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.
ವಿದ್ಯಾರ್ಥಿ ಸೋಗು: ದೆಹಲಿಯಿಂದ ವಿಮಾನದಲ್ಲಿ ಚೆನ್ನೈಗೆ ಬರುತ್ತಿದ್ದ ಅರ್ಮಾನ್, ಅಲ್ಲಿಂದ ಕ್ಯಾಬ್‌ನಲ್ಲಿ ಮಧ್ಯಾಹ್ನದ ವೇಳೆಗೆ ನಗರ ಪ್ರವೇಶಿಸುತ್ತಿದ್ದ. ವಿದ್ಯಾರ್ಥಿಯ ಸೋಗಿನಲ್ಲಿ ಹೆಗಲಿಗೆ ಬ್ಯಾಗ್ ಹಾಕಿಕೊಂಡು ಪ್ರತಿಷ್ಠಿತ ರಸ್ತೆಗಳಲ್ಲಿ ಓಡಾಡುತ್ತಿದ್ದ ಆತ, ಬಾಗಿಲು ಹಾಕಿರುವ ಮನೆಗಳ ಹತ್ತಿರ ಹೋಗಿ ಏಳೆಂಟು ಬಾರಿ ಕಾಲಿಂಗ್ ಬೆಲ್ ಒತ್ತುತ್ತಿದ್ದ. ಮನೆ ಮಾಲೀಕರು ಬಾಗಿಲು ತೆಗೆದರೆ, ಯಾವುದೋ ವಿಳಾಸ ಕೇಳುವವನಂತೆ ನಾಟಕವಾಡಿ ಹೊರಟು ಹೋಗುತ್ತಿದ್ದ. ಬಾಗಿಲು ತೆಗೆಯದಿದ್ದರೆ, ಬೀಗ ಮುರಿದು ನಗ-ನಾಣ್ಯ ದೋಚುತ್ತಿದ್ದ.
‘ವರ್ಷದ ಹಿಂದೆ ಆಶೀಷ್ ಸಹ ಅರ್ಮಾನ್‌ನ ಜತೆ ಸೇರಿದ್ದ. ಇತ್ತೀಚೆಗೆ ಇವರಿಬ್ಬರೂ ಜೀವನ್‌ಬಿಮಾ ನಗರ ವ್ಯಾಪ್ತಿಯ ಮನೆಯೊಂದರಲ್ಲಿ ಕಳ್ಳತನ ಮಾಡಿದ್ದರು. ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಅವರ ಚಲನವಲನಗಳು ಸೆರೆಯಾಗಿದ್ದವು. ಅವರ ಚಹರೆಗಳನ್ನು ಎಲ್ಲ ಠಾಣೆಗಳಿಗೂ ರವಾನಿಸಿದಾಗ, 2014ರಲ್ಲಿ ಅಶೋಕನಗರ ಪೊಲೀಸರು ಅರ್ಮಾನ್‌ನನ್ನು ಬಂಧಿಸಿದ್ದ ಸಂಗತಿ ಗೊತ್ತಾಯಿತು. ಆ ಪ್ರಕರಣದ ತನಿಖಾಧಿಕಾರಿಯಿಂದ ಆರೋಪಿಯ ಪೂರ್ವಾಪರ ಪಡೆದು ಶೋಧ ಪ್ರಾರಂಭಿಸಿದೆವು’ ಎಂದು ಪೊಲೀಸರು ಕಾರ್ಯಾಚರಣೆಯನ್ನು ವಿವರಿಸಿದರು.
‘ಅರ್ಮಾನ್ ಪ್ರತಿ ಬಾರಿ ಕೃತ್ಯ ಎಸಗಿದಾಗಲೂ ಸಿಮ್ ಬದಲಿಸುತ್ತಿದ್ದ. ಹೀಗಾಗಿ, ಆತನ ಪತ್ತೆ ಕಷ್ಟವಾಗಿತ್ತು. ರಾತ್ರಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದನೆಂದು ಗಸ್ತು ಸಿಬ್ಬಂದಿ ಇತ್ತೀಚೆಗೆ ಯುವಕನೊಬ್ಬನನ್ನು ಠಾಣೆಗೆ ಕರೆತಂದರು. ಚಹರೆ ಪರಿಶೀಲಿಸಿದಾಗ ಆತ ಆಶೀಷ್ ಆಗಿದ್ದ. ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ, ಆತ ಅರ್ಮಾನ್‌ನ ಹೊಸ ಮೊಬೈಲ್ ಸಂಖ್ಯೆಯನ್ನು ಕೊಟ್ಟ. ಆ ಸಂಖ್ಯೆಯ ಜಾಡು ಹಿಡಿದು ದೆಹಲಿಗೆ ತೆರಳಿದ ಸಿಬ್ಬಂದಿ, ಅರ್ಮಾನ್‌ನನ್ನು ಹಾಗೂ ಆಭರಣ ವ್ಯಾಪಾರಿಗಳನ್ನು ವಶಕ್ಕೆ ಪಡೆದು ನಗರಕ್ಕೆ ಕರೆತಂದಿತು’ ಎಂದು ಮಾಹಿತಿ ನೀಡಿದರು.
