ಕಾಂಗ್ರೆಸ್ ಕಾರ್ಯರ್ಕತರು ಸತ್ಯವನ್ನು ಜನರಿಗೆ ಮನದಟ್ಟು ಮಾಡುವಲ್ಲಿ ವಿಫಲರಾದರು, ಬಿಜೆಪಿ ಅಧಿಕಾರಕ್ಕೆ ಬಾರದಂತೆ ತಡೆಯಿರಿ : ಸಿದ್ದರಾಮಯ್ಯ -Vishwanews24

Featured, ದಕ್ಷಿಣ ಕನ್ನಡ

ಮಂಗಳೂರು: ಬಿಜೆಪಿಗೆ ಅಧಿಕಾರ ನೀಡಿದರೆ ಅಭಿವೃದ್ಧಿ ಕಾರ್ಯ ನಡೆಯುವುದಿಲ್ಲ. ಹಾಗಾಗಿ ನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಾರದಂತೆ ತಡೆಯಿರಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.

ನಗರದ ಸೆಬಾಸ್ಟಿನ್ ಚರ್ಚ್ ಸಭಾಂಗಣದಲ್ಲಿ ಶುಕ್ರವಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯವರು ಸುಳ್ಳು ಹೇಳಿದರು. ಕಾಂಗ್ರೆಸ್ ಕಾರ್ಯರ್ಕತರು ಸತ್ಯವನ್ನು ಜನರಿಗೆ ಮನದಟ್ಟು ಮಾಡುವಲ್ಲಿ ವಿಫಲರಾದರು. ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ಕಾರ್ಯಕರ್ತರು ಮನೆಗಳಿಗೆ ತೆರಳಿ ಧೈರ್ಯವಾಗಿ ಹೇಳಬೇಕು. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದರು.

ಕಾಂಗ್ರೆಸ್ ಸರ್ಕಾರ ಇದ್ದಾಗ ಕರಾವಳಿಗೆ ಗರಿಷ್ಠ ಅನುದಾನ ನೀಡಲಾಗಿದೆ. ಕಾಂಗ್ರೆಸ್ ಶಾಸಕರು ತಮ್ಮ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಆದರೆ ಬಿಜೆಪಿಯ ಅಪಪ್ರಚಾರ ಮೇಲುಗೈ ಸಾಧಿಸಿತು. ಆರೆಸ್ಸೆಸ್ ಹಾಗೂ ಬಿಜೆಪಿಯ ಕೋಮುವಾದಕ್ಕೆ ಮಂಗಳೂರು ಪ್ರಯೋಗಾಲಯ. ಶ್ರೀರಾಮ, ಹಿಂದುತ್ವ, ಪಾಕಿಸ್ತಾನ ಎಂದು ಭಾವನಾತ್ಮಕ ವಿಚಾರಗಳನ್ನು ಮಾತ್ರ ಜನರಿಗೆ ಹೇಳುತ್ತಾರೆ. ಅಭಿವೃದ್ಧಿ ವಿಚಾರ ಬಿಟ್ಟು ಜನರ ಮನಸ್ಸುಗಳನ್ನು ಬೇರೆಡೆ ಸೆಳೆಯಲು ಅವರು ಪ್ರಯತ್ನಿಸುತ್ತಾರೆ. ಇದಕ್ಕೆ ಪ್ರತಿಯಾಗಿ ದೇಶದ ಆರ್ಥಿಕ, ಸಾಮಾಜಿಕ ಸಮಸ್ಯೆಗಳನ್ನು ಜನರೆದುರು ಇಡುವ ಕೆಲಸವನ್ನು ಕಾಂಗ್ರೆಸ್ ಕಾರ್ಯರ್ಕತರು ಮಾಡಬೇಕು ಎಂದರು.

ಶಾಸಕ ಯು.ಟಿ.ಖಾದರ್, ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜಾ, ಹರೀಶ್‌ಕುಮಾರ್, ಮಾಜಿ ಸಚಿವರಾದಬಿ.ರಮಾನಾಥ ರೈ, ವಿನಯ ಕುಮಾರ್ ಸೊರಕೆ, ಅಭಯಚಂದ್ರ ಜೈನ್, ಮಾಜಿ ಶಾಸಕರಾದ ಮೊಯಿದ್ದೀನ್ ಬಾವಾ, ಜೆ.ಆರ್. ಲೋಬೊ, ಯು.ಆರ್.ಸಭಾಪತಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ನಾಯಕರಾದ ಅಶೋಕ್ ಕೊಡವೂರು, ಶಾಲೆಟ್ ಪಿಂಟೊ, ಅಬ್ದುಲ್ ಸಲೀಂ, ಸದಾಶಿವ ಶೆಟ್ಟಿ, ಧನಂಜಯ ಅಡ್ಪಂಗಾಯ, ಶಶಿಧರ್ ಹೆಗ್ಡೆ, ಭಾಸ್ಕರ ಮೊಯ್ಲಿ, ಪಿ.ವಿ. ಮೋಹನ್, ಕವಿತಾ ಸನಿಲ್ ಮುಂತಾದವರು ಉಪಸ್ಥಿತರಿದ್ದರು.