ಕಾಂಗ್ರೆಸ್ ಸರ್ಕಾರದ ವಿರುದ್ಧ ಇಂದಿನಿಂದ ಬಿಜೆಪಿ ಪಾದಯಾತ್ರೆ – vishwanews24
ಕಾಂಗ್ರೆಸ್ ಸರ್ಕಾರದ ವಿರುದ್ಧ ಇಂದಿನಿಂದ ಬಿಜೆಪಿ ಪಾದಯಾತ್ರೆ
ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಎಸ್ಟಿ ಮೀಸಲಾತಿ ಸೇರಿದಂತೆ ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರದ ವಿರುದ್ಧ 10 ದಿನಗಳ ಕಾಲ ಬಿಜೆಪಿ ನಡೆಸುವ ಪಾದಯಾತ್ರೆಗೆ ಇಂದು ರಾಯಚೂರಿನ ಲಿಂಗಸೂಗೂರಿನಲ್ಲಿ ಚಾಲನೆ ದೊರೆಯಲಿದ್ದು ಸರ್ಕಾರದ ವಿರುದ್ಧ ರಣಕಹಳೆ ಮೊಳಗಿಸುವುದಕ್ಕೆ ಕೇಸರಿಪಡೆ ಸಜ್ಜಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಸಚಿವ ಬಿ.ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿ ಈ ಪಾದಯಾತ್ರೆಯ ಮುಂಚೂಣಿಯಲ್ಲಿ ನಿಂತಿದ್ದು 10 ದಿನಗಳ ಕಾಲ ಒಂಬತ್ತು ವಿಚಾರಗಳನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಗುಡುಗುವುದಕ್ಕೆ ತಯಾರಾಗಿದ್ದಾರೆ. ಪಾದಯಾತ್ರೆಯನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಬದಲಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ.
ಒಟ್ಟು 185 ಕಿ.ಮೀ. ಪಾದಯಾತ್ರೆ ಲಿಂಗಸೂಗೂರಿನಿಂದ ಪ್ರಾರಂಭವಾಗಿ ಬಳ್ಳಾರಿಯಲ್ಲಿ ಮುಕ್ತಾಯಗೊಳ್ಳಲಿದೆ. ಸಮಾರೋಪದ ದಿನ ಬೃಹತ್ ಸಮಾವೇಶ ಆಯೋಜಿಸಲಾಗಿದ್ದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಆಹ್ವಾನ ನೀಡಲಾಗಿದೆ. ಬಿಡದಿ ಪಾದಯಾತ್ರೆಯ ರೀತಿಯಲ್ಲಿ ಜೆಡಿಎಸ್ ಈ ಪಾದಯಾತ್ರೆಗೆ ಸಾಂಕೇತಿಕ ಬೆಂಬಲ ನೀಡಲಿದೆ.
