ಕಾಪು : ಗೆಲುವಿನ ಪತಾಕೆ ಹಾರಿಸುವುದು ಯಾರು??!!

Featured, ಉಡುಪಿ

ಕಾಪು ವಿಧಾನಸಭಾ ಕ್ಷೇತ್ರದ ರಣಾಂಗಣವು ಚುನಾವಣಾ ವಿಶ್ಲೇಷಣೆಗಳಿಗೆ ಹಲವು ಆಯಾಮಗಳನ್ನು ನೀಡಿದೆ. ಪ್ರಾದೇಶಿಕ ಪಕ್ಷಗಳ ಅಭ್ಯರ್ಥಿಗಳ ಸ್ಪರ್ಧೆಯಿಂದಾಗಿ ಮತಗಳು ಹಂಚಿ ಹೋಗುವ ಸಾಧ್ಯತೆಗಳ ಬಗ್ಗೆ ಭಾರೀ ಚರ್ಚೆಯಾಗುತ್ತಲಿದೆ. ಯಾವುದೇ ಕಾರಣಕ್ಕೂ ಕಾಪು ಕ್ಷೇತ್ರದಲ್ಲಿ ಮತ ಹಂಚಿ ಹೋಗದು ಎಂಬುದು ರಾಷ್ಟ್ರೀಯ ಪಕ್ಷಗಳ ನಾಯಕರ ಪ್ರಬಲ ವಾದ.

ಕಳೆದ 2013ರ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಂಡಾಯ ವೆನ್ನುವಂತೆ ಮಾಜಿ ಸಚಿವ ವಸಂತ ವಿ. ಸಾಲ್ಯಾನ್‌ ಜೆಡಿಎಸ್‌ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಈ ಸಂದರ್ಭ ತಾನು ಸೊರಕೆಯನ್ನು ಸೋಲಿಸಲೆಂದೇ ನಿಂತಿರುವೆ ಎನ್ನುವ ಹೇಳಿಕೆಯನ್ನೂ ನೀಡಿದ್ದರು. ಬಿಲ್ಲವ ನಾಯಕರಿಬ್ಬರ ಪೈಪೋಟಿಯಿಂದ ಬಿಜೆಪಿ ಅಭ್ಯರ್ಥಿಗೆ ಲಾಭವಾಗುವುದು ಎಂದೆಣಿಸಲಾಗಿತ್ತು. ಆದರೆ ಫ‌ಲಿತಾಂಶ ಅಚ್ಚರಿ ಮೂಡಿಸಿತ್ತು. ಕಾಂಗ್ರೆಸ್‌ ಅಭ್ಯರ್ಥಿ ಸೊರಕೆ 1,855 ಮತಗಳ ಅಂತರದಿಂದ ಜಯ ಸಾಧಿಸಿದ್ದರು. ಸತತ 5 ಬಾರಿ ಭರ್ಜರಿ ಗೆಲುವು ಕಂಡು ಒಂದು ಬಾರಿಯಷ್ಟೇ ಸೋಲು ಕಂಡಿದ್ದ ಸಾಲ್ಯಾನ್‌ ಜಿದ್ದಾಜಿದ್ದಿಗೆ ಬಿದ್ದರೂ ಕೇವಲ 4,327 ಮತ ಗಳಿಸಲಷ್ಟೇ ಶಕ್ತರಾದರು. ವ್ಯಕ್ತಿ ಮುಖ್ಯವಲ್ಲ. ಪಕ್ಷ ಮುಖ್ಯವೆನ್ನುವುದನ್ನು ಕಾಂಗ್ರೆಸ್ಸಿಗರು ಸಾರಿದಂತಿತ್ತು.

ತಣ್ಣಗಾದ ಗುರ್ಮೆ ..
ಕ್ಷೇತ್ರದಲ್ಲಿ ರಾಜಕೀಯ ಚಲಾವಣೆಯಲ್ಲಿದ್ದ ವ್ಯಕ್ತಿ ಉದ್ಯಮಿ ಸುರೇಶ್‌ ಶೆಟ್ಟಿ ಗುರ್ಮೆ. ಕಳೆದ ಚುನಾವಣೆ ಸಂದರ್ಭ ಕಾಂಗ್ರೆಸ್‌ನಲ್ಲಿ ಗುರ್ಮೆಯವರಿಗೆ ಟಿಕೆಟ್‌ ಸಿಗುತ್ತದೆ ಎಂದು ಹೇಳಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಅವರಿಗೂ ಟಿಕೆಟ್‌ ಕೈತಪ್ಪಿತ್ತು. ಆನಂತರದ ಬೆಳವಣಿಗೆಯಲ್ಲಿ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿ ಜಿಲ್ಲಾ ಉಪಾಧ್ಯಕ್ಷರಾಗಿದ್ದರು. ಅವರಿಗೆ ತನ್ನದೇ ಆದ ಬೆಂಬಲಿಗರು, ಅಭಿಮಾನಿಗಳಿದ್ದಾರೆ. ಈ ಬಾರಿ ಗುರ್ಮೆಯವರೇ ಅಭ್ಯರ್ಥಿ ಎನ್ನಲಾಗುತ್ತಿತ್ತು. ಆದರೆ ಹಳೇ ಮುಖವನ್ನೇ ನಿಲ್ಲಿಸುವ ತಂತ್ರಕ್ಕೆ ಬಿಜೆಪಿ ಶರಣಾಗಿದ್ದರಿಂದ ಇವರಿಗೆ ಟಿಕೆಟ್‌ ಸಿಗಲಿಲ್ಲ. ಗುರ್ಮೆಯವರು ಬಂಡಾಯ ನಿಲ್ಲುವ ಸೂಚನೆ ಅರಿತ ಬಿಜೆಪಿ ಮುಖಂಡರು ಅವರ ಮನವೊಲಿಸುವಲ್ಲಿ ಸಫ‌ಲರಾದರು. ಸದ್ಯ ಲಾಲಾಜಿ ಪರ ಮತಯಾಚನೆಯಲ್ಲಿ ತೊಡಗಿಕೊಂಡಿದ್ದಾರೆ. ಸದ್ಯಕ್ಕೆ ಮೇಲ್ಪದರದಲ್ಲಿ ಭಿನ್ನಮತ ನಿವಾರಣೆಯಾದಂತಾಗಿದೆ.

ಮಹಿಳಾ ಮ್ಯಾಜಿಕ್‌?..
ಬಳ್ಳಾರಿ ಕೂಡ್ಲಿಗಿಯಲ್ಲಿ ಡಿವೈಎಸ್‌ಪಿಯಾಗಿದ್ದ ಕಾಪು ಉಚ್ಚಿಲದ ಅನುಪಮಾ ಶೆಣೈ ಸಚಿವರೊಬ್ಬರ ಕಿರುಕುಳದಿಂದ ಹುದ್ದೆಗೆ ರಾಜೀನಾಮೆ ಕೊಟ್ಟು ಜನಶಕ್ತಿ ಕಾಂಗ್ರೆಸ್‌ ಪಕ್ಷವನ್ನು ಹುಟ್ಟು ಹಾಕಿದರು. ಬಳ್ಳಾರಿಯಲ್ಲಿಯೇ ಚುನಾವಣೆಗೆ ಸ್ಪರ್ಧಿಸುವರು ಎಂದುಕೊಂಡರೂ ಕೊನೆ ಕ್ಷಣದಲ್ಲಿ ಹುಟ್ಟೂರು ಕಾಪುವನ್ನೇ ಆರಿಸಿಕೊಂಡರು. ಅವರ ಪ್ರಚಾರ ಕಾರ್ಯ ಜೋರಾಗಿಯೇ ಇದೆ. ಪ್ರಾದೇಶಿಕ ಪಕ್ಷದಡಿ ಅನುಪಮಾ ಶೆಣೈ ಕಣಕ್ಕಿಳಿದಿರು ವುದು ಪ್ರಬಲ ಕಾಂಗ್ರೆಸ್‌, ಬಿಜೆಪಿ ಅಭ್ಯರ್ಥಿಗಳಿಗೆ ಸಣ್ಣ ಆತಂಕ ಹುಟ್ಟಿಸಿದೆ. ಜೆಡಿಎಸ್‌ನಲ್ಲಿ ಮುಸ್ಲಿಂ ಸಮುದಾಯದ ಮನ್ಸೂರ್‌ ಇಬ್ರಾಹಿಂ, ಮುಸ್ಲಿಂ ಎಂಪವರ್‌ವೆುಂಟ್‌ ಪಾರ್ಟಿಯ ಅಬ್ದುಲ್‌ ರೆಹಮಾನ್‌ ಕಣದಲ್ಲಿದ್ದು, ಮತಗಳ ಧ್ರುವೀಕರಣದಿಂದ ಸೋಲು-ಗೆಲುವು ಅಂದಾಜಿ ಸುವುದೇ ಬಲುದೊಡ್ಡ ಸವಾಲಾಗಿದೆ. ಇವರು ಗಳಿಸುವ ಮೂರಂಕಿಯ ಓಟು ಕೂಡ ಭಾರೀ ಮಹತ್ವ ಪಡೆಯಲಿದೆ.

ಹಸನ್ಮುಖ, ಸೌಮ್ಯ ಅಭ್ಯರ್ಥಿಗಳು!
ಮೊಗವೀರ ಸಮಾಜದ ಲಾಲಾಜಿ ಅವರಿಗೆ ಸೌಮ್ಯ ಸ್ವಭಾವ, ಸೈಲೆಂಟ್‌ ರಾಜಕಾರಣಿ ಎನ್ನುವ ಲೇಬಲ್‌. ಶಾಸಕಾ ವಧಿಯಲ್ಲಿ ಸಿಎಂ ವಿಶೇಷ ಅನುದಾನದಡಿ ಅನಾರೋಗ್ಯ ಪೀಡಿತರಿಗೆ ಅತ್ಯಧಿಕ ನೆರವು ನೀಡಿದ್ದು ಪ್ಲಸ್‌ ಪಾಯಿಂಟ್‌. ಆರೆಸ್ಸೆಸ್‌ ಅಭಯ ಲಾಲಾಜಿಗಿದೆ ಎನ್ನಬಹುದು. ಬಿಲ್ಲವ ಸಮಾಜದ ವಿನಯ ಕುಮಾರ್‌ ಸೊರಕೆ ಹಸನ್ಮುಖ, ಸೌಮ್ಯತೆ, ಅಭಿವೃದ್ಧಿಯ ಕ್ಷಿಪ್ರ ನಿರ್ಧಾರಗಳು, ಕ್ಷೇತ್ರ ಸಂಚಾರದಲ್ಲಿ ಗ್ರಾಮಮಟ್ಟಕ್ಕೆ ಹೋಗಿ ಜನರನ್ನು ತಲುಪಿರುವುದು, ಕಾಪು ಪುರಸಭೆ, ತಾಲೂಕು ಮಾಡಿರುವುದು ಇವರ ಪ್ಲಸ್‌ ಪಾಯಿಂಟ್‌.

ಅಭಿವೃದ್ಧಿಯನ್ನು ಮೂಲವಾಗಿರಿಸಿಕೊಂಡು ಕಳೆದೈದು ವರ್ಷಗಳಲ್ಲಿ  ಕ್ಷೇತ್ರವನ್ನು ಮಾದರಿಯಾಗಿ ಅಭಿವೃದ್ಧಿಪಡಿಸಲಾಗಿದೆ. ಸರ್ವಧರ್ಮಗಳ ಸಂಗಮ ಕ್ಷೇತ್ರವಾಗಿರುವ ಕಾಪುವಿನಲ್ಲಿ ಎಲ್ಲ ಧರ್ಮದವರಿಗೂ ಸಮಾನ ಅವಕಾಶಗಳನ್ನು ನೀಡಲಾಗಿದ್ದು, ಜನರ ಭಾವನೆಗೆ ಸ್ಪಂದಿಸುವ ಪ್ರಯತ್ನ ಮಾಡಿದ್ದೇವೆ. ಭವಿಷ್ಯದಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಪ್ರಯತ್ನಿಸುತ್ತೇನೆ.
 – ವಿನಯ ಕುಮಾರ್‌ ಸೊರಕೆ, ಕಾಂಗ್ರೆಸ್‌ ಅಭ್ಯರ್ಥಿ

ಕಳೆದ ಬಾರಿ ಅತ್ಯಲ್ಪ ಮತಗಳ  ಅಂತರದಿಂದ ಸೋತಿದ್ದರಿಂದ ಪಕ್ಷ ನನಗೆ  ಅವಕಾಶ ಮಾಡಿಕೊಟ್ಟಿದೆ. ನನ್ನ ಶಾಸಕತ್ವದ 
ಎರಡು ಅವಧಿಯಲ್ಲಿ ಬಹಳಷ್ಟು ಗುರುತಿಸಲ್ಪಡುವ ಯೋಜನೆ ಅನುಷ್ಠಾನಕ್ಕೆ ತಂದಿದ್ದೇನೆ. 
– ಲಾಲಾಜಿ ಆರ್‌. ಮೆಂಡನ್‌, ಬಿಜೆಪಿ ಅಭ್ಯರ್ಥಿ

ಪ್ರವಾಸೋದ್ಯಮ ಅಭಿವೃದ್ಧಿ ಸಹಿತ ವಿವಿಧ ಯೋಜನೆಗಳ ಅನುಷ್ಠಾನ ಮತ್ತು ಆ ಮೂಲಕ ಉದ್ಯೋಗ ಸೃಷ್ಟಿಗೆ ಒತ್ತು ನೀಡುವಿಕೆ ಮೊದಲಾದ ಕಾರ್ಯಗಳು ಆಗಬೇಕಿವೆ. ಜನರೊಂದಿಗೆ ಬೆರೆತು ಅವರೊಂದಿಗೆ ಸ್ಪಂದಿಸಿ ಕೆಲಸ ಮಾಡುವ ಇಚ್ಛೆಯೊಂದಿಗೆ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ.
-ಮನ್ಸೂರ್‌ ಇಬ್ರಾಹಿಂ, ಜೆಡಿಎಸ್‌ ಅಭ್ಯರ್ಥಿ