ಕಾಪು: ಅಕ್ರಮ ಮರಳು ಸಾಗಾಟ ; ಟಿಪ್ಪರ್ ಸಹಿತ ಆರೋಪಿ ಪೊಲೀಸರ ವಶಕ್ಕೆ – vishwanews24
ಕಾಪು: ಟಿಪ್ಪರ್ನಲ್ಲಿ ಅಕ್ರಮ ಮರಳು ಸಾಗಾಟ ಪತ್ತೆ ; ಪೊಲೀಸರ ವಶಕ್ಕೆ
ಕಾಪು: ಕಾಪು ಪಡುಗ್ರಾಮದ ಮಂಗಳೂರು ಉಡುಪಿ ರಸ್ತೆಯಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಟಿಪ್ಪರ್ನ್ನು ಸೊತ್ತು ಸಮೇತವಾಗಿ ಕಾಪು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಕಾಪು ಕ್ರೈಂ ಎಸ್ಸೈ ರಮೇಶ ನಾಯ್ಕ ಅವರು ಮಂಗಳವಾರ ಮುಂಜಾನೆ ರಾತ್ರಿ ರೌಂಡ್ಸ್ನಲ್ಲಿದ್ದಾಗ ಉಡುಪಿ ಕಡೆಗೆ ಬರುತ್ತಿದ್ದ ಟಿಪ್ಪರ್ನ ಬಾಡಿಯಿಂದ ನೀರು ಇಳಿಯುತ್ತಿರುವುದು ಕಂಡು ಬಂದಿದ್ದು ವಾಹನದಲ್ಲಿ ಮರಳನ್ನು ಸಾಗಿಸುತ್ತಿರಬಹುದು ಎಂಬ ಅನುಮಾನದಿಂದ ಟಿಪ್ಪರ್ನ ಚಾಲಕನಲ್ಲಿ ವಾಹನವನ್ನು ನಿಲ್ಲಿಸುವಂತೆ ಸೂಚಿಸಿದಾಗ ಚಾಲಕನು ವಾಹನವನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದನು. ವಾಹನವನ್ನು ಪರಿಶೀಲಿಸಿದಾಗ ಅದರಲ್ಲಿ ಬಾಡಿಯ ಮಟ್ಟದವರೆಗೆ ಮರಳನ್ನು ತುಂಬಿಸಿರುವುದು, ಆ ಮರಳಿನಿಂದ ನೀರು ಇಳಿಯುತ್ತಿರುವುದು ಕಂಡು ಬಂದಿತ್ತು.
ಟಿಪ್ಪರ್ ಮತ್ತು ಅದರಲ್ಲಿದ್ದ ಸುಮಾರು 15,000 ರೂಪಾಯಿ ಬೆಲೆ ಬಾಳುವ ಮರಳಿನ ಜತೆಗೆ ಚಾಲಕ ಶಿವಮೊಗ್ಗ ಮೂಲದ ಮೃತ್ಯುಂಜಯ ಎಂಬಾತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ಚಾಲಕ ಮತ್ತು ವಾಹನದ ಮಾಲಕ ಪಡುಬಿದ್ರಿ ನಿವಾಸಿ ಮಯ್ಯದ್ದಿ ಹುಸೇನ್ ಎಂಬಾತನ ವಿರುದ್ಧ ಕಾಪು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
