ಕಾಪು ಬೀಚ್ ನಲ್ಲಿ ತೀವ್ರ ಕಡಲು ಕೊರೆತ : ಸಾರ್ವಜನಿಕರು ಬೀಚ್ ಗೆ ತೆರಳದಂತೆ ಜಿಲ್ಲಾಡಳಿತ ಮನವಿ – vishwanews24
ಕಾಪು ಬೀಚ್ ನಲ್ಲಿ ತೀವ್ರ ಕಡಲು ಕೊರೆತ : ಸಾರ್ವಜನಿಕರು ಬೀಚ್ ಗೆ ತೆರಳದಂತೆ ಜಿಲ್ಲಾಡಳಿತ ಮನವಿ
ಉಡುಪಿ : ಮುಂಗಾರು ಅಬ್ಬರಕ್ಕೆ ಕಡಲು ಕೊರೆತ ತೀವ್ರಗೊಂಡಿದ್ದು, ಬೀಚ್ನ ಬಹುತೇಕ ಭಾಗ ಸಮುದ್ರದ ಪಾಲಾಗಿದೆ. ಪ್ರವಾಸಿಗರು ಓಡಾಡುತ್ತಿದ್ದ ಸ್ಥಳದಲ್ಲೇ ಅಲೆಗಳು ಅಬ್ಬರಿಸುತ್ತಿದ್ದು, ಅಪಾಯದ ಪರಿಸ್ಥಿತಿ ನಿರ್ಮಾಣವಾಗಿದೆ.
ದೀಪಸ್ತಂಭ, ಸೂರ್ಯಾಸ್ತದ ನೋಟ ಮತ್ತು ವಿಶಾಲ ಮರಳು ತೀರದಿಂದ ದೇಶ-ವಿದೇಶದ ಪ್ರವಾಸಿಗರನ್ನು ಸೆಳೆಯುತ್ತಿದ್ದ ಕಾಪು ಬೀಚ್ ಇಂದು ತನ್ನ ಸ್ವರೂಪವನ್ನೇ ಕಳೆದುಕೊಂಡಿದೆ. ಕಳೆದ ಕೆಲ ದಿನಗಳಿಂದ ಅಬ್ಬರಿಸುತ್ತಿರುವ ಸಮುದ್ರದ ಅಲೆಗಳು ತೀರ ಪ್ರದೇಶವನ್ನು ತೀವ್ರವಾಗಿ ಕೊರೆದು, ಬೀಚ್ನ ಬಹುತೇಕ ಭಾಗವನ್ನು ನುಂಗಿವೆ.
ಪ್ರತಿ ವರ್ಷ ಮಳೆಗಾಲದಲ್ಲಿ ಈ ಭಾಗದಲ್ಲಿ ಕಡಲು ಕೊರೆತ ಸಾಮಾನ್ಯವಾಗಿತ್ತು. ಆದರೆ, ಈ ಬಾರಿ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದೆ. ಸುಮಾರು 100 ಮೀಟರ್ಗೂ ಹೆಚ್ಚು ದೂರದವರೆಗೆ ಸಮುದ್ರ ತೀರದೊಳಗೆ ನುಗ್ಗಿದ್ದು, ಜನರು ಸಂಚರಿಸುತ್ತಿದ್ದ ಪ್ರದೇಶವೇ ಈಗ ಅಲೆಗಳ ಅಬ್ಬರಕ್ಕೆ ಸಿಲುಕಿದೆ. ಬೀಚ್ನಲ್ಲಿ ನಿಲ್ಲಲು ಕೂಡ ಸುರಕ್ಷಿತ ಸ್ಥಳ ಇಲ್ಲದಂತಾಗಿದೆ.
ಮಹಾರಾಷ್ಟ್ರದಲ್ಲಿ ನಕಲಿ ಪನ್ನೀರ್ ಸಂಪೂರ್ಣ ನಿಷೇಧ : ಮಾರಾಟ ಮಾಡಿದರೆ ಜೈಲು ಶಿಕ್ಷೆ,ಭಾರಿ ದಂಡ – vishwanews24
ಕಡಲ ಕೊರೆತ ತಡೆಯಲು ಅಳವಡಿಸಲಾಗಿದ್ದ ಕಲ್ಲಿನ ತಡೆಗೋಡೆಯೂ ಸಮುದ್ರದ ಹೊಡೆತಕ್ಕೆ ಕುಸಿದು ಹೋಗಿದೆ. ಕಾಪು ದೀಪಸ್ತಂಭದ ಸುತ್ತಮುತ್ತಲೂ ಅಲೆಗಳು ಭಾರೀ ವೇಗದಲ್ಲಿ ಅಪ್ಪಳಿಸುತ್ತಿದ್ದು, ಪರಿಸ್ಥಿತಿ ಆತಂಕಕಾರಿ ರೂಪ ಪಡೆದುಕೊಂಡಿದೆ. ಗಂಟೆಗೆ 40 ರಿಂದ 55 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಎತ್ತರದ ಅಲೆಗಳು ಬಂಡೆಗಳಿಗೆ ಅಪ್ಪಳಿಸುವ ದೃಶ್ಯಗಳು ಭಯ ಹುಟ್ಟಿಸುವಂತಿವೆ. ಹೀಗಾಗಿ ಕಾಪು ಬೀಚ್ ಸುತ್ತಮುತ್ತಲಿನ ಎಲ್ಲಾ ಪ್ರವಾಸಿ ಮತ್ತು ವಾಣಿಜ್ಯ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಜಿಲ್ಲಾಧಿಕಾರಿ ಹಾಗೂ ಸ್ಥಳೀಯ ಶಾಸಕರು ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತುರ್ತು ರಕ್ಷಣಾ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಲಾಗಿದ್ದು, ತಾತ್ಕಾಲಿಕ ತಡೆ ಕಾಮಗಾರಿ ಆರಂಭಿಸುವ ಕ್ರಮ ಕೈಗೊಳ್ಳಲಾಗಿದೆ.
ಆದರೆ ತಜ್ಞರ ಅಭಿಪ್ರಾಯದಂತೆ, ತಾತ್ಕಾಲಿಕ ಕಾಮಗಾರಿಗಳು ಮಾತ್ರ ಸಮಸ್ಯೆಗೆ ಶಾಶ್ವತ ಪರಿಹಾರವಲ್ಲ. ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿರುವ ಕಾಪು ಬೀಚ್ನ್ನು ಉಳಿಸಬೇಕಾದರೆ ವೈಜ್ಞಾನಿಕ ಮಾದರಿಯ ಶಾಶ್ವತ ಸಮುದ್ರ ತಡೆಗೋಡೆ ಹಾಗೂ ಸಮಗ್ರ ಕರಾವಳಿ ಸಂರಕ್ಷಣಾ ಯೋಜನೆಗೆ ಹೆಚ್ಚಿನ ಅನುದಾನ ನೀಡುವುದು ಅಗತ್ಯವಾಗಿದೆ.
ಇನ್ನು ಮುಂದಿನ ಐದು ದಿನಗಳ ಕಾಲ ಕರಾವಳಿ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲು ಹವಾಮಾನ ಇಲಾಖೆ ಸೂಚನೆ ನೀಡಿದ್ದು, ಸಾರ್ವಜನಿಕರು ಬೀಚ್ ಗೆ ತೆರಳದಂತೆ ಜಿಲ್ಲಾಡಳಿತ ಮನವಿ ಮಾಡಿದೆ.
ಸದ್ಯಕ್ಕೆ ಕಾಕ್ರೋಚ್ ಜನತಾ ಪಾರ್ಟಿ ಚುನಾವಣಾ ರಾಜಕೀಯಕ್ಕೆ ಪ್ರವೇಶಿಸುವುದಿಲ್ಲ : ಅಭಿಜೀತ್ ದೀಪ್ಕೆ – vishwanews24
