ಕಾಪು ವಿಜಯಬ್ಯಾಂಕ್ ಮುಂಭಾಗದಲ್ಲೊಂದು ಮರಣ ಗುಂಡಿ, ಎಚ್ಚರ ಪ್ರಯಾಣಿಕರೇ ಎಚ್ಚರ….!

ಉಡುಪಿ, ಜಿಲ್ಲೆ

ಕಾಪು:    ಕಾಪುವಿನ ವಿಜಯ ಬ್ಯಾಂಕ್ ಮುಂಭಾಗದಲ್ಲಿ ಹಾದುಹೋಗುವ ರಸ್ತೆಯ ಪಕ್ಕದಲ್ಲಿ ಒಳಚರಂಡಿ ಕಾಮಗಾರಿಯ ಕಾರಣದಿಂದ ಮ್ಯಾನ್ ಹೋಲ್ ಕುಸಿದು ಮರಣ ಗುಂಡಿಯೊಂದು ಜೀವ ಬಲಿಗಾಗಿ ಬಾಯ್ದೆರೆದು ಕುಳಿತುಕೊಂಡಿದ್ದು, ರಸ್ತೆ ಸಂಚಾರಿಗಳಲ್ಲಿ ಭೀತಿ ಮೂಡಿಸಿದೆ.

ಈ ಮರಣ ಗುಂಡಿಯ ಪಕ್ಕದಲ್ಲೇ ಕಾಪು ವಿಜಯಬ್ಯಾಂಕ್ ಕಚೇರಿಯೂ ಇದ್ದು, ಬ್ಯಾಂಕ್ಗೆ ಬರುವವರಿಗೂ ಇಲ್ಲಿನ ಮಾರಣಾಂತಿಕ ಸ್ಪಾಟ್‌ ಅಪಘಾತಕ್ಕೆ ಆಹ್ವಾನ ನೀಡುತ್ತಿದೆ. ಇಲ್ಲಿನ ಸಮಸ್ಯೆ ಮತ್ತು ಅಪಾಯದ ಪ್ರದೇಶವನ್ನು ಅರಿತು ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರು ಮುನ್ಸೂಚನೆಯಾಗಿ ಮರದ ಹಲಗೆ ಮತ್ತು ಕಲ್ಲುಗಳನ್ನಿಟ್ಟು ಸೌಜನ್ಯ ಮೆರೆದಿದ್ದಾರೆ.

ಗುತ್ತಿಗೆದಾರನ ನೂತನ ಕಟ್ಟಡದ ಮುಂಭಾಗವೇ ಇದೆ ಈ ಗುಂಡಿ..!

ಹೌದು ಕಾಪು ಪುರಸಭಾ ವ್ಯಾಪ್ತಿಯ ಒಳಚರಂಡಿ ಕಾಮಗಾರಿಯ ಗುತ್ತಿಗೆಯನ್ನ ವಹಿಸಿಕೊಂಡಿರುವ ಗುತ್ತಿಗೆದಾರನ ನೂತನ ಕಟ್ಟಡ ಕಾಮಗಾರಿ ನಡೆಯುವ ಮುಂಭಾಗವೇ ಮ್ಯಾನ್ ಹೋಲ್ ಕುಸಿದು ಮೂರು ದಿನವಾದರೂ ಅವರ ಗಮನಕ್ಕೆ ಬಾರದಿರುವುದು ಮಾತ್ರ ಹಾಸ್ಯಸ್ಪದ.

ಈ ರಸ್ತೆಯ ಮೂಲಕ ಸಂಚರಿಸುವ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಗುತ್ತಿಗೆದಾರರೂ ಸೇರಿದಂತೆ ಎಲ್ಲರೂ ಕೂಡಾ ಇಲ್ಲಿನ ಮರಣ ಗುಂಡಿಯ ಬಗ್ಗೆ ಕೂಡಾ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದು, ಪ್ರಾಣ ಹಿಂಡುವ ಗಂಭೀರ ಅವಘಡವೊಂದು ಸಂಭವಿಸಿ, ಜೀವ ಬಲಿ ನೀಡುವ ಮುನ್ನ ಇಲ್ಲಿನ ಕುಸಿದುಹೋದ ಮ್ಯಾನ್ ಹೋಲ್ ಪುನರ್‌ ನಿರ್ಮಿಸಿದಲ್ಲಿ ಒಳಿತು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.