ಕಾಮನ್ವೆಲ್ತ್ ಗೇಮ್ಸ್ ; ಲಾಂಗ್ ಜಂಪ್ನಲ್ಲಿ ರಜತ ಪದಕ ಗೆದ್ದು ಇತಿಹಾಸ ನಿರ್ಮಿಸಿದ ಮುರಳಿ ಶ್ರೀಶಂಕರ್ – Vishwanews24
ಕಾಮನ್ವೆಲ್ತ್ ಗೇಮ್ಸ್ ; ಲಾಂಗ್ ಜಂಪ್ನಲ್ಲಿ ರಜತ ಪದಕ ಗೆದ್ದು ಇತಿಹಾಸ ನಿರ್ಮಿಸಿದ ಮುರಳಿ ಶ್ರೀಶಂಕರ್
ಬರ್ಮಿಂಗಂ: ಇಂಗ್ಲೆಂಡ್ ನ ಬರ್ಮಿಂಗಂ ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ಪುರುಷರ ಲಾಂಗ್ ಜಂಪ್ ನಲ್ಲಿ ಭಾರತದ ಮುರಳಿ ಶ್ರೀಶಂಕರ್ ಅವರು ರಜತ ಪದಕ ಗೆದ್ದುಕೊಂಡಿದ್ದಾರೆ.
8.08 ಮೀಟರ್ ಜಂಪ್ ಮಾಡಿದ ಮುರಳಿ ಶ್ರೀಶಂಕರ್ ಮೊದಲ ಬಾರಿಗೆ ಕಾಮನ್ವೆಲ್ತ್ ಪದಕ ಗೆದ್ದರು.
ಮುರಳಿ ಶ್ರೀಶಂಕರ್ ಗೆ ಚಿನ್ನ ಗೆಲ್ಲುವ ಅವಕಾಶವಿತ್ತು. ಚಿನ್ನದ ಪದಕ ಗೆದ್ದ ಬಹಾಮಾಸ್ ನ ಲಕ್ವಾನ್ ನಾಯರ್ನ್ ಕೂಡಾ 8.08 ಮೀಟರ್ ಜಂಪ್ ಮಾಡಿದ್ದರು. ನಿಯಮದ ಪ್ರಕಾರ ಇಬ್ಬರ ಬೆಸ್ಟ್ ಜಂಪ್ ಟೈ ಆದರೆ ಅವರ ಸೆಕೆಂಡ್ ಬೆಸ್ಟ್ ಜಂಪ್ ಆಧಾರದಲ್ಲಿ ವಿಜೇತರನ್ನು ಘೋಷಣೆ ಮಾಡಲಾಗುತ್ತದೆ. ಅದರಂತೆ ಮುರಳಿ ಶ್ರೀಶಂಕರ್ ಅವರ ಸೆಕೆಂಡ್ ಬೆಸ್ಟ್ ಜಂಪ್ 7.84 ಆಗಿದ್ದರೆ, ಲಕ್ವಾನ್ ನಾಯರ್ನ್ ಅವರು 7.98 ಮೀ ಜಿಗಿದಿದ್ದರು. ಹೀಗಾಗಿ ಅವರಿಗೆ ಸ್ವರ್ಣ ಪದಕ ಪ್ರಾಪ್ತವಾಯಿತು.
ದಕ್ಷಿಣ ಆಫ್ರಿಕಾದ ಜೋವನ್ ವ್ಯಾನ್ ವುರೆನ್ 8.06 ಮೀ ಜಂಪ್ ನೊಂದಿಗೆ ಕಂಚು ಗೆದ್ದರು. ಭಾರತದ ಮತ್ತೋರ್ವ ಅಥ್ಲೀಟ್ ಮೊಹಮ್ಮದ್ ಅನೀಸ್ ಯಹಿಯಾ ಅವರು 7.97 ಮೀಟರ್ ಜಂಪ್ ನೊಂದಿಗೆ ಐದನೇ ಸ್ಥಾನ ಪಡೆದರು.
ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಭಾರತದ ಪುರುಷ ಲಾಂಗ್ ಜಂಪರ್ ಗಳಲ್ಲಿ ಮುರಳಿ ಶ್ರೀಶಂಕರ್ ಅವರ ಬೆಳ್ಳಿ ಅತ್ಯುತ್ತಮ ಪ್ರದರ್ಶನವಾಗಿದೆ. ಈ ಹಿಂದೆ 1978ರಲ್ಲಿ ಸುರೇಶ್ ಬಾಬು ಕಂಚು ಗೆದ್ದಿದ್ದೆ ಇದುವರೆಗಿನ ಅತ್ಯುತ್ತಮ ಪ್ರದರ್ಶನವಾಗಿದೆ.
ಮಹಿಳೆಯರಲ್ಲಿ ಪ್ರಜೂಷಾ ಮಲಿಯಕ್ಕಲ್ 2010ರಲ್ಲಿ ದೆಹಲಿಯಲ್ಲಿ ಬೆಳ್ಳಿ ಗೆದ್ದರೆ, 2002ರಲ್ಲಿ ಅಂಜು ಬಾಬಿ ಜಾರ್ಜ್ ಕಂಚಿನ ಪದಕ ಗೆದ್ದಿದ್ದರು.
