ಕಾರ್ಕಳ : ದಲಿತ ಪುರಸಭಾ ಸದಸ್ಯೆಗೆ ಜಾತಿ ನಿಂದನೆ ಆರೋಪ : ದೂರು ದಾಖಲು – Vishwanews24
ಕಾರ್ಕಳ: ದೇವಸ್ಥಾನದಲ್ಲಿ ಊಟ ಬಡಿಸದಂತೆ ಮತ್ತು ಒಳಗೆ ಬಾರದಂತೆ ದಲಿತ ಪುರಸಭಾ ಸದಸ್ಯೆಗೆ ಜಾತಿ ನಿಂದನೆ , ಬೆದರಿಕೆ ಆರೋಪ : ದೂರು ದಾಖಲು
ಉಡುಪಿ: ಪರಿಶಿಷ್ಟ ಜಾತಿಗೆ ಸೇರಿದ ಕಾರ್ಕಳ ಪುರಸಭಾ ಸದಸ್ಯೆ ಹಾಗೂ ಮಾಜಿ ಅಧ್ಯಕ್ಷೆ ಪ್ರತಿಮಾ ರಾಣೆ(42) ಎಂಬವರಿಗೆ ದೇವಸ್ಥಾನದಲ್ಲಿ ಊಟ ಬಡಿಸದಂತೆ ಮತ್ತು ಒಳಗೆ ಬಾರದಂತೆ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ ಬೆದರಿಕೆ ಹಾಕಿರುವ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರತಿಮಾ ರಾಣೆ ಕಾರ್ಕಳ ಮಾರಿಗುಡಿಯ ಬ್ರಹ್ಮಕಲಶೋತ್ಸವದ ಕಾರ್ಯಕ್ರಮದಲ್ಲಿ ಸ್ವಯಂ ಸೇವಕರಾಗಿ ಕೆಲಸ ಮಾಡುತ್ತಿದ್ದರು. ಮಾ.12ರಂದು ಬೆಳಗ್ಗೆ ದೇವಸ್ಥಾನದ ಊಟದ ವಿಚಾರವಾಗಿ ವಾಟ್ಸಾಪ್‌ನಲ್ಲಿ ಬಂದ ಸಂದೇಶದ ಬಗ್ಗೆ ಕಾರ್ಕಳ ಎಸ್‌ವಿಟಿ ಸರ್ಕಲ್ ನಿವಾಸಿ ರಮಿತಾ ಶೈಲೇಂದ್ರ, ಪ್ರತಿಮಾ ರಾಣೆ ಅವರನ್ನುದ್ದೇಶಿಸಿ ಪುರಸಭಾ ಕಟ್ಟಡದ ಬಳಿ, ಎಸ್‌ಸಿ ಎಸ್‌ಟಿಯವರಿಗೆ ಊಟ ಬಡಿಸಲು ಬಿಡಬೇಡಿ, ಅವರನ್ನು ಒಳ ಬಿಟ್ಟಲ್ಲಿ ಮೈಲಿಗೆ ಆಗುತ್ತದೆ ಎಂದು ಹೇಳಿ ಸಾರ್ವಜನಿಕವಾಗಿ ನಿಂದಿಸಿದರೆಂದು ದೂರಲಾಗಿದೆ.
ಇದೇ ವಿಚಾರ ವಾಟ್ಸಾಪ್ ಮೂಲಕ ಬಂದಿರುವ ಬಗ್ಗೆ ಆರೋಪಿಯು ಪ್ರತಿಮಾ ಅವರಲ್ಲಿ ಈ ವಾಟ್ಸಾಪ್ ಸಂದೇಶವನ್ನು ನೀವೇ ಕಳುಹಿಸಿ ಕೊಟ್ಟಿರುತ್ತೀರಾ ಎಂದು ಮಾ.14ರಂದು ಮಧ್ಯಾಹ್ನ 1.45ಕ್ಕೆ ಪುರಸಭಾ ರಸ್ತೆಯಲ್ಲಿ ಪ್ರತಿಮಾ ಅವರನ್ನು ಅಡ್ಡಕಟ್ಟಿ ಗಲಾಟೆ ಮಾಡಿದ್ದು, ನೀನು ಎಸ್‌ಸಿ ದೇವಸ್ಥಾನದ ಒಳಗೆ ಬರಬಾರದು ಎಂದು ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿ ಬೆದರಿಕೆ ಹಾಕಿರುವುದಾಗಿ ದೂರಲಾಗಿದೆ.
ಅದರಂತೆ ಆರೋಪಿ ವಿರುದ್ಧ ಐಪಿಸಿ 1860(ಯು/ಎಸ್341, 504), ಎಸ್‌ಸಿಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ, 1986(ಯು/ಎಸ್-3(1)(ಎಸ್), 3(2)(ವಿ-ಎ)ಅಡಿಯಲ್ಲಿ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಕಳದಲ್ಲಿ ತನಗೆ ಸ್ಪರ್ಧಿಸಲು ಅವಕಾಶ ಕೊಡಿ : ಬಿಜೆಪಿಗೆ ಡಾ.ಮಮತಾ ಹೆಗ್ಡೆ – Vishwanews24
