ಕಾಲೇಜು ಶೈಕ್ಷಣಿಕ ಪ್ರವಾಸದಲ್ಲಿ ಸೆಲ್ಫಿ, ರೀಲ್ಸ್ಗೆ ಸಂಪೂರ್ಣ ನಿಷೇಧ : ಶಿಕ್ಷಣ ಇಲಾಖೆಯಿಂದ ಕಟ್ಟುನಿಟ್ಟಿನ ಮಾರ್ಗಸೂಚಿ! vishwanews24
ಕಾಲೇಜು ಶೈಕ್ಷಣಿಕ ಪ್ರವಾಸದಲ್ಲಿ ಸೆಲ್ಫಿ, ರೀಲ್ಸ್ಗೆ ಸಂಪೂರ್ಣ ನಿಷೇಧ – ಶಿಕ್ಷಣ ಇಲಾಖೆಯಿಂದ ಕಟ್ಟುನಿಟ್ಟಿನ ಮಾರ್ಗಸೂಚಿ!
ಬೆಂಗಳೂರು : ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ಶಿಸ್ತನ್ನು ಕಾಪಾಡುವ ಉದ್ದೇಶದಿಂದ ರಾಜ್ಯದ ಕಾಲೇಜುಗಳ ಶೈಕ್ಷಣಿಕ ಪ್ರವಾಸಕ್ಕೆ ಕಾಲೇಜು ಶಿಕ್ಷಣ ಇಲಾಖೆ ಕಟ್ಟುನಿಟ್ಟಿನ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಪ್ರವಾಸದ ವೇಳೆ ವಿದ್ಯಾರ್ಥಿಗಳು ಸೆಲ್ಫಿ ಕ್ಲಿಕ್ಕಿಸುವುದು ಹಾಗೂ ರೀಲ್ಸ್ ಸೇರಿದಂತೆ ವಿಡಿಯೋ ಚಿತ್ರೀಕರಣ ಮಾಡುವುದನ್ನು ನಿಷೇಧಿಸಲಾಗಿದೆ.
ಅಪಾಯಕಾರಿ ಪ್ರವಾಸಿ ತಾಣಗಳು, ಜಲಮೂಲಗಳು ಹಾಗೂ ಬೆಟ್ಟ ಪ್ರದೇಶಗಳಲ್ಲಿ ಸೆಲ್ಫಿ ಮತ್ತು ವಿಡಿಯೋ ಚಿತ್ರೀಕರಣದ ವೇಳೆ ಸಂಭವಿಸಬಹುದಾದ ಅವಘಡಗಳನ್ನು ತಡೆಯುವ ಉದ್ದೇಶದಿಂದ ಈ ನಿಯಮ ಜಾರಿಗೆ ತರಲಾಗಿದೆ. ನೂತನ ಮಾರ್ಗಸೂಚಿಗಳನ್ನು ತಕ್ಷಣದಿಂದಲೇ ಪಾಲಿಸುವಂತೆ ಇಲಾಖೆ ಸೂಚಿಸಿದೆ. ಕಾಲೇಜುಗಳು ಶೈಕ್ಷಣಿಕ ಪ್ರವಾಸ ಕೈಗೊಳ್ಳುವ ಮುನ್ನ ಇಲಾಖೆಯಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ. ಪ್ರವಾಸಕ್ಕೆ ತೆರಳುವ ವಿದ್ಯಾರ್ಥಿಗಳಿಂದ ಮುಚ್ಚಳಿಕೆ ಪತ್ರ ಹಾಗೂ ಪೋಷಕರಿಂದ ಅನುಮತಿ ಪತ್ರ ಪಡೆದು, ಅವುಗಳೊಂದಿಗೆ ಕೇಂದ್ರ ಕಚೇರಿಗೆ ಪ್ರಸ್ತಾವನೆ ಸಲ್ಲಿಸಬೇಕು.
ಕರ್ನಾಟಕದಲ್ಲಿ ಸೆ.30ರಿಂದ ಸಿನೆಮಾ ಟಿಕೆಟ್ ದರ ಏರಿಕೆ – vishwanews24
ಅನುಮತಿ ನೀಡಿರುವ ಸ್ಥಳಗಳನ್ನು ಹೊರತುಪಡಿಸಿ ಬೇರೆ ಸ್ಥಳಗಳಿಗೆ ವಿದ್ಯಾರ್ಥಿಗಳನ್ನು ಕರೆದೊಯ್ಯುವಂತಿಲ್ಲ. ಪ್ರವಾಸದ ವೇಳೆ ವಿದ್ಯಾರ್ಥಿಗಳು ಸೆಲ್ಫಿ, ರೀಲ್ಸ್ ಅಥವಾ ಯಾವುದೇ ರೀತಿಯ ವಿಡಿಯೋ ಚಿತ್ರೀಕರಣ ಮಾಡದಂತೆ ಜೊತೆಯಲ್ಲಿ ತೆರಳುವ ಅಧ್ಯಾಪಕರು ನಿಗಾ ವಹಿಸಬೇಕು ಎಂದು ಸೂಚಿಸಲಾಗಿದೆ. ಶೈಕ್ಷಣಿಕ ಪ್ರವಾಸದ ಸಂಪೂರ್ಣ ಅವಧಿಯಲ್ಲಿ ವಿದ್ಯಾರ್ಥಿನಿಯರ ಸುರಕ್ಷತೆಗಾಗಿ ಅಗತ್ಯ ಸುರಕ್ಷತಾ ಹಾಗೂ ರಕ್ಷಣಾ ಕ್ರಮಗಳನ್ನು ಕಡ್ಡಾಯವಾಗಿ ಕೈಗೊಳ್ಳಬೇಕು. ಯಾವುದೇ ಅನಾನುಕೂಲತೆ ಅಥವಾ ಅವಘಡ ಸಂಭವಿಸಿದಲ್ಲಿ ಸಂಬಂಧಪಟ್ಟ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಂಶುಪಾಲರೇ ಹೊಣೆಗಾರರಾಗಿರುತ್ತಾರೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ವಿದ್ಯಾರ್ಥಿಗಳೊಂದಿಗೆ ಕನಿಷ್ಠ ಒಬ್ಬ ಖಾಯಂ ಉಪನ್ಯಾಸಕರು ಕಡ್ಡಾಯವಾಗಿ ತೆರಳಬೇಕು. ಕೇವಲ ಅತಿಥಿ ಉಪನ್ಯಾಸಕರ ನೇತೃತ್ವದಲ್ಲಿ ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕಳುಹಿಸುವಂತಿಲ್ಲ. ಶೈಕ್ಷಣಿಕ ಪ್ರವಾಸಕ್ಕೆ ತೆರಳುವ ಅಧ್ಯಾಪಕರ ಸಂಖ್ಯೆ ನಾಲ್ವರನ್ನು ಮೀರಬಾರದು. ಇವರಲ್ಲಿ ಇಬ್ಬರು ಮಹಿಳಾ ಅಧ್ಯಾಪಕಿಯರು ಕಡ್ಡಾಯವಾಗಿ ಇರಬೇಕು. ಜೊತೆಗೆ ಒಬ್ಬ ಗ್ರೂಪ್ ‘ಡಿ’ ನೌಕರರನ್ನು ಕರೆದೊಯ್ಯಬೇಕು ಎಂದು ಇಲಾಖೆ ಸೂಚಿಸಿದೆ. ಪ್ರವಾಸದ ಅವಧಿಯೂ ಪ್ರಯಾಣದ ದಿನಗಳನ್ನು ಒಳಗೊಂಡಂತೆ ನಿಗದಿತ ಗರಿಷ್ಠ ಅವಧಿಯನ್ನು ಮೀರಬಾರದು ಎಂದು ತಿಳಿಸಲಾಗಿದೆ.
ಡಿಕೆಶಿ ಮನಸ್ಸು ಮಾಡಿದ್ರೆ ಸ್ವಂತ ಹಣದಲ್ಲೇ ರೈತರ ಸಾಲ ಮನ್ನಾ ಮಾಡಬಹುದು: ಹೆಚ್ಡಿಕೆ – vishwanews24
ಮಳೆಗಾಲದಲ್ಲಿ ಶೈಕ್ಷಣಿಕ ಪ್ರವಾಸಕ್ಕೆ ಅನುಮತಿ ನೀಡುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ. ನದಿ, ಸಮುದ್ರ ಸೇರಿದಂತೆ ನೀರಿನ ಹರಿವು ಇರುವ ಪ್ರದೇಶಗಳು, ದಟ್ಟ ಅರಣ್ಯ ಹಾಗೂ ಕಡಿದಾದ ಬೆಟ್ಟ ಪ್ರದೇಶಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ಮುಂಚಿತವಾಗಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಚಾರಣ ಸೇರಿದಂತೆ ಸಾಹಸ ಚಟುವಟಿಕೆಗಳನ್ನು ಆಯೋಜಿಸುವ ಮೊದಲು ಸ್ಥಳದ ಪರಿಸ್ಥಿತಿ ಹಾಗೂ ಅಪಾಯಗಳ ಕುರಿತು ಸಂಪೂರ್ಣ ಮಾಹಿತಿ ಪಡೆದು, ಅಗತ್ಯ ಸುರಕ್ಷತಾ ವ್ಯವಸ್ಥೆ ಖಚಿತಪಡಿಸಿಕೊಂಡ ಬಳಿಕವೇ ಅವಕಾಶ ನೀಡಬೇಕು ಎಂದು ಮಾರ್ಗಸೂಚಿಯಲ್ಲಿ ಸೂಚಿಸಲಾಗಿದೆ.
