ಕುಂದಾಪುರ : ದೇವಸ್ಥಾನದಲ್ಲಿ ಮಹಿಳೆಯ ಕರಿಮಣಿ ಸರ ಕಳವು ಪ್ರಕರಣ ; ನಾಲ್ವರು ಮಹಿಳೆಯರ ಸಹಿತ ಐವರ ಬಂಧನ -vishwanews24

Featured, ಉಡುಪಿ

ಕುಂದಾಪುರ : ದೇವಸ್ಥಾನದಲ್ಲಿ ಮಹಿಳೆಯ ಕರಿಮಣಿ ಸರ ಕಳವು ಪ್ರಕರಣ ; ನಾಲ್ವರು ಮಹಿಳೆಯರ ಸಹಿತ ಐವರ ಬಂಧನ

ಕುಂದಾಪುರ: ಕೋಟೇಶ್ವರದ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ತೆರಳಿದ್ದ ಮಹಿಳೆಯೊಬ್ಬರ ಕುತ್ತಿಗೆಯಲ್ಲಿದ್ದ ಸುಮಾರು 7 ಪವನ್ ತೂಕದ ₹6 ಲಕ್ಷ ಮೌಲ್ಯದ ಚಿನ್ನದ ಕರಿಮಣಿ ಸರವನ್ನು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಐವರು ಆರೋಪಿಗಳನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.

ನವೆಂಬರ್ 24ರಂದು ಫಿರ್ಯಾದಿ ಗೀತಾ ಅವರು ತಮ್ಮ ಪತಿಯೊಂದಿಗೆ ಔಷಧ ಖರೀದಿಸುವ ಉದ್ದೇಶದಿಂದ ಕುಂದಾಪುರಕ್ಕೆ ತೆರಳುತ್ತಿದ್ದರು. ಕೋಟೇಶ್ವರದಲ್ಲಿ ಕೊಡಿ ಹಬ್ಬ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಕೋಟೇಶ್ವರ ಬೈಪಾಸ್‌ನಲ್ಲಿ ಬಸ್‌ನಿಂದ ಇಳಿದು ಕೋಟಿಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದರು. ಬೆಳಗ್ಗೆ ಸುಮಾರು 11.30ಕ್ಕೆ ದೇವರ ದರ್ಶನ ಪಡೆದು ಪ್ರದಕ್ಷಿಣೆ ಹಾಕಿದ ಬಳಿಕ ಮಧ್ಯಾಹ್ನ 12.30ರ ಸುಮಾರಿಗೆ ದೇವಸ್ಥಾನದ ಪೌಳಿಯ ಹೊರಭಾಗದಲ್ಲಿ ಊಟದ ಸರತಿ ಸಾಲಿನಲ್ಲಿ ನಿಂತಿದ್ದರು. ಈ ಸಂದರ್ಭದಲ್ಲಿ ಜನಜಂಗುಳಿಯನ್ನೇ ಬಳಸಿಕೊಂಡ ಅಪರಿಚಿತರು ಅವರ ಕುತ್ತಿಗೆಯಲ್ಲಿದ್ದ ಸುಮಾರು 7 ಪವನ್ ತೂಕದ ಚಿನ್ನದ ಕರಿಮಣಿ ಸರವನ್ನು ಎಗರಿಸಿ ಪರಾರಿಯಾಗಿದ್ದರು.

ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 05/2026, ಭಾರತೀಯ ನ್ಯಾಯ ಸಂಹಿತೆ (BNS) ಕಲಂ 305ರಡಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆ ಮುಂದುವರಿಸಿದ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿ, ಕಳವು ಮಾಡಿದ್ದ ಸುಮಾರು ₹6 ಲಕ್ಷ ಮೌಲ್ಯದ ಚಿನ್ನದ ಕರಿಮಣಿ ಸರವನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಗಳನ್ನು ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಭಾಗ್ಯ (39), ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯ ಅಶ್ವಿನಿ ಎಲ್. ಅಲಿಯಾಸ್ ಗಾಯತ್ರಿ (25), ಕಾಮಾಚಿ (50), ಕೃಷ್ಣಗಿರಿ ಜಿಲ್ಲೆಯ ಆದಮ್ಮಾಳ್ ಅಲಿಯಾಸ್ ಆದ್ಯಾಮ್ಮ (49) ಹಾಗೂ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಎಸ್. ನಾಗರಾಜ (48) ಎಂದು ಗುರುತಿಸಲಾಗಿದೆ.

ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಸಿಲ್ವರ್ ಬಣ್ಣದ ಕೆಎ 01 ಎಂಆರ್ 7991 ನೋಂದಣಿ ಸಂಖ್ಯೆಯ ಮಹೀಂದ್ರಾ ಟಿಯುವಿ 300 ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದರ ಅಂದಾಜು ಮೌಲ್ಯ ₹3 ಲಕ್ಷ. ಅಲ್ಲದೆ, ಆರೋಪಿಗಳಿಂದ 7 ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಲಾಗಿದೆ.

ಬಂಧಿತ ಐವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

Leave a Reply