ಕೌನ್ ಬನೇಗಾ ಕರೋಡ್ ಪತಿ: 25 ಲಕ್ಷ ರೂ. ಗೆದ್ದ ಉಡುಪಿಯ ರವಿ ಕಟಪಾಡಿ, ಗಳಿಸಿದ ಬಹುಮಾನ ಮೊತ್ತ ಬಡವರ ಸೇವೆಗೆ ಮೀಸಲು -Vishwanews24
ಕೌನ್ ಬನೇಗಾ ಕರೋಡ್ ಪತಿ: 25 ಲಕ್ಷ ರೂ. ಗೆದ್ದ ಉಡುಪಿಯ ರವಿ ಕಟಪಾಡಿ, ಗಳಿಸಿದ ಬಹುಮಾನ ಮೊತ್ತ ಬಡವರ ಸೇವೆಗೆ ಮೀಸಲು
ತುಳುವಿನಲ್ಲಿ ಮಾತನಾಡಿದ ಅಮಿತಾಬ್
ಉಡುಪಿ: ದೈತ್ಯ ವೇಷಗಳನ್ನು ಧರಿಸುವ ಮೂಲಕ 54.5 ಲಕ್ಷ ರೂ. ಗಳನ್ನು ಸಂಗ್ರಹಿಸಿ ಅಸಹಾಯಕ ಮಕ್ಕಳ ಚಿಕಿತ್ಸೆಗಾಗಿ ಭರಿಸಿರುವ ಸಮಾಜ ಸೇವಕ ರವಿ ಕಟಪಾಡಿ ಅವರು ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಗಳಿಸಿದ ಬಹುಮಾನ ಮೊತ್ತವನ್ನು ಕೂಡಾ ಸಮಾಜ ಸೇವೆಗೆ ಮೀಸಲಿಟ್ಟಿದ್ದಾರೆ.
ಶುಕ್ರವಾರ ರಾತ್ರಿ ಪ್ರಸಾರವಾದ ಮಹಾನ್ ತಾರೆ ಅಮಿತಾಬ್ ಬಚ್ಚನ್ ನಡೆಸಿಕೊಡುವ ಕೆಬಿಸಿ ಕರ್ಮವೀರ್ ಸ್ಪೆಷಲ್ ಎಪಿಸೋಡ್ನಲ್ಲಿ ರವಿ ಕಟಪಾಡಿ ಹಾಗೂ ಅಂಬಾ ಬೆಹಾನ್ ಜಂಟಿಯಾಗಿ 25 ಲಕ್ಷ ರೂ. ಮೊತ್ತವನ್ನು ವಿಜೇತರಾಗಿದ್ದಾರೆ.
ಹಿಂದಿ ಖಾಸಗಿ ವಾಹಿನಿಯ ಈ ಜನಪ್ರಿಯ ಕಾರ್ಯಕ್ರಮದಲ್ಲಿ ಆರಂಭಿಕ 7 ಪ್ರಶ್ನೆಗಳಿಗೆ ರವಿ ಕಟಪಾಡಿ ಮತ್ತು ಮುಂದಿನ ಪ್ರಶ್ನೆಗಳಿಗೆ ಅಂಬಾ ಉತ್ತರಿಸಿದ್ದರು. ಹಿರಿಯ ನಟ ಅನುಪಮ್ ಖೇರ್ ಜತೆಗೂಡಿ ಸಹಕರಿಸಿದರು.
ರವಿ ಕಟಪಾಡಿ ಕಳೆದ ಆರು ವರ್ಷಗಳಿಂದ ಉಡುಪಿಯಲ್ಲಿ ಕೃಷ್ಣ ಜನ್ಮಾಷ್ಟಮಿ ಸಂದರ್ಭ ವಿಭಿನ್ನ ದೈತ್ಯ ವೇಷಗಳ ಮೂಲಕ ಜನರನ್ನು ರಂಜಿಸಿ ನೆರವು ನಿಧಿ ಸಂಗ್ರಹಿಸಿ ಬಡ ಮಕ್ಕಳ ಕಲ್ಯಾಣಕ್ಕಾಗಿ ವಿನಿಯೋಗಿಸುತ್ತಿದ್ದರು. ರವಿಯವರ ಮಾನವೀಯ ಸೇವಾಕಾರ್ಯ ಗುರುತಿಸಿ ವಾಹಿನಿ ಈ ಅವಕಾಶ ನೀಡಿದೆ.
“ದರಿಯಾ ದಿಲ್ ದಾನವ್”
ದೈತ್ಯ ವೇಷ ಧರಿಸುವ ಮೂಲಕ ಮಕ್ಕಳ ಕಲ್ಯಾಣ ಮಾಡುವ ರವಿ ಕಟಪಾಡಿಯವರಿಗೆ ತಾನು “ದರಿಯಾ ದಿಲ್ ದಾನವ್” ಎಂದು ಬಿರುದು ನೀಡುವುದಾಗಿ ಅಮಿತಾಬ್ ಘೋಷಿಸಿದರು
ಉಡುಪಿ ಮತ್ತು ಕುಡ್ಲದ ಎಲ್ಲಾ ಜನರಿಗೂ ನನ್ನ ನಮಸ್ಕಾರ ಎಂದು ರವಿ ಕಟಪಾಡಿ ಹೇಳಿಕೊಟ್ಟಂತೆ ಅಮಿತಾಬ್ ಬಚ್ಚನ್ ತುಳುವಿನಲ್ಲಿ ಅದನ್ನು ಉಚ್ಚರಿಸಿದರು.
