ಗೃಹಲಕ್ಷ್ಮಿ ಪರಿಷ್ಕರಣೆ : ಬಯೋಮೆಟ್ರಿಕ್‌, ಮುಖಚಹರೆ ಗುರುತು ಕಡ್ಡಾಯ -vishwanews24

Featured, ರಾಜ್ಯ ನ್ಯೂಸ್

ಗೃಹಲಕ್ಷ್ಮಿ ಪರಿಷ್ಕರಣೆ : ಬಯೋಮೆಟ್ರಿಕ್‌, ಮುಖಚಹರೆ ಗುರುತು ಕಡ್ಡಾಯ  

20 ಕೋಟಿ ರೂ. ವೆಚ್ಚದಲ್ಲಿ ಫಲಾನುಭವಿಗಳ ಮರು ಪರಿಶೀಲನೆ  : ಸಚಿವ ಸಂಪುಟ ತೀರ್ಮಾನ

ಬೆಂಗಳೂರು: ಗೃಹಜ್ಯೋತಿ ಬೆನ್ನಲ್ಲೇ ತನ್ನ ಮತ್ತೊಂದು ಜನಪ್ರಿಯ ಗ್ಯಾರಂಟಿ ಯೋಜನೆ ‘ಗೃಹಲಕ್ಷ್ಮಿ’ ಪರಿಷ್ಕರಣೆಗೆ ಸರ್ಕಾರ ಕೈಹಾಕಲು ನಿರ್ಧರಿಸಿದ್ದು ಇನ್ಮುಂದೆ ಮಾಸಿಕ 2000 ರೂಪಾಯಿ ಪಡೆಯಲು ರಾಜ್ಯದ ‘ಗೃಹಲಕ್ಷ್ಮಿ’ಯರ ಬಯೋಮೆಟ್ರಿಕ್‌ ಅಥವಾ ಫೇಷಿಯಲ್‌ ಅಥೆಂಟಿಕೇಷನ್‌ (ಮುಖಚಹರೆ ದೃಢೀಕರಣ) ಕಡ್ಡಾಯ..

ಸಚಿವ ಸಂಪುಟ ಸಭೆಯಲ್ಲಿ ಈ ಸಂಬಂಧ ಸರ್ಕಾರ ನಿರ್ಣಯ ಕೈಗೊಂಡಿದೆ. ಅದರಂತೆ ರಾಜ್ಯದಲ್ಲಿ ‘ಗೃಹಲಕ್ಷ್ಮಿ ಯೋಜನೆ’ ಅಡಿ 20 ಕೋಟಿ ರೂ. ವೆಚ್ಚದಲ್ಲಿ ಬಯೋಮೆಟ್ರಿಕ್‌ ಅಥವಾ ಫೇಷಿಯಲ್‌ ಅಥೆಂಟಿಕೇಷನ್‌ ದೃಢೀಕರಣ ಮೂಲಕ ಫಲಾನುಭವಿಗಳನ್ನು ಮರುಪರಿಶೀಲನೆಗೆ ಒಳಪಡಿಸಲು ತೀರ್ಮಾನಿಸಲಾಗಿದೆ.

ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ಈ ಮಾಹಿತಿ ನೀಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ‘ಫೇಷಿಯಲ್‌ ಅಥೆಂಟಿಕೇಷನ್‌ ಮತ್ತು ಬಯೋಮೆಟ್ರಿಕ್‌ ಮೂಲಕ ಫಲಾನುಭವಿಗಳ ಪರಿಶೀಲನೆ ನಡೆಸಿ ಅರ್ಹರಿಗೆ ಮಾತ್ರ ಯೋಜನೆ ತಲುಪುವಂತೆ ಮಾಡಲು ನಿರ್ಧರಿಸಿದ್ದೇವೆ. ಇದಕ್ಕಾಗಿ 20 ಕೋಟಿ ಹಣ ನೀಡಿದ್ದೇವೆ’ ಎಂದು ಸ್ಪಷ್ಟಪಡಿಸಿದರು.

ಬಯೋಮೆಟ್ರಿಕ್‌ ಹಾಗೂ ಬ್ಯಾಂಕ್‌ ಖಾತೆಯ ಸಂಖ್ಯೆ, ದೂರವಾಣಿ ಸಂಖ್ಯೆ ಸರಿಯಾಗಿರಬೇಕು. ಯಾರದ್ದೋ ದೂರವಾಣಿ ಹಾಗೂ ಬ್ಯಾಂಕ್‌ ಖಾತೆಗಳ ವಿವರಗಳನ್ನು ನೀಡುವಂತಿಲ್ಲ. ಗಂಡ ಹಾಗೂ ಮಕ್ಕಳ ಖಾತೆಯನ್ನೂ ಪರಿಗಣಿಸುವುದಿಲ್ಲ. ಸಿಎಜಿ ವರದಿಯಲ್ಲಿ ಏನೆಲ್ಲ ವರದಿಯಾಗಿದೆ ಎಂಬುದು ನೋಡಿದ್ದೇವೆ. ಹೀಗಾಗಿ ಅಂತಹದ್ದಕ್ಕೆ ಅವಕಾಶ ನೀಡದಂತೆ ಪರಿಶೀಲನೆ ನಡೆಸಿ ಅರ್ಹರಿಗೆ ನೀಡುತ್ತೇವೆ ಎಂದು ವಿವರಿಸಿದರು.

ಯಾರನ್ನೂ ಯೋಜನೆಯಿಂದ ಕೈಬಿಡುವುದಿಲ್ಲ. ಇಚ್ಛಿಸಿದವರು ಸ್ವಯಂಪ್ರೇರಿತವಾಗಿ ಬಿಟ್ಟುಕೊಡಲು ಅವಕಾಶ ಕಲ್ಪಿಸಲಾಗಿದೆ ಎಂದೂ ಅವರು ಹೇಳಿದರು.

ಮರುಪರಿಶೀಲನಾ ಅರ್ಜಿ ಹೇಗಿರಬೇಕು? ಅದರಲ್ಲಿ ಫಲಾನುಭವಿಗಳ ಯಾವ್ಯಾವ ಮಾಹಿತಿ ಸಂಗ್ರಹಿಸಬೇಕು? ಮೊಬೈಲ್‌ ಸಂಖ್ಯೆ, ಬ್ಯಾಂಕ್‌ ಖಾತೆ ವಿವರ ಒಳಗೊಂಡಂತೆ ಮತ್ತಿತರ ವಿಷಯಗಳ ಉಲ್ಲೇಖದ ಬಗ್ಗೆ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಲಾಗಿದೆ. ಗೃಹಲಕ್ಷ್ಮಿ ಹಣ ನೇರವಾಗಿ ಫಲಾನುಭವಿಗಳಿಗೇ ಹೋಗಬೇಕು ಎನ್ನುವುದು ಇದರ ಉದ್ದೇಶ ಎಂದು ಸಿಎಂ ತಿಳಿಸಿದರು.

Leave a Reply