ಚುನಾವಣಾ ಸಮರಕ್ಕೆ ಸಜ್ಜಾದ ಬಿಜೆಪಿ: ಬಿ ಎಸ್ ವೈ ನೇತೃತ್ವದಲ್ಲಿ ಇಂದಿನಿಂದ ರಾಜ್ಯ ಪ್ರವಾಸ
ಬೀದರ್ : ಸ್ಥಳೀಯ ಸಂಸ್ಥೆಗಳ ಚುನಾವಣೆ ಜತೆಗೆ ಪ್ರಮುಖವಾಗಿ ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಲೇ ಬೇಕೆಂಬ ಪಣ ತೊಟ್ಟಿರುವ ಬಿಜೆಪಿ, ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಇಂದಿನಿಂದ ರಾಜ್ಯ ಪ್ರವಾಸ ಆರಂಭಿಸಲಿದೆ.
ವಿಧಾನಸಭಾ ಚುನಾವಣೆಯಲ್ಲಿ ದಣಿವರಿಯದಂತೆ ರಾಜ್ಯ ಪ್ರವಾಸ ಮಾಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅತಿಹೆಚ್ಚಿನ ಸ್ಥಾನ ಗೆಲ್ಲುವಲ್ಲಿ ಸಫಲರಾದರೂ ಅಧಿಕಾರ ಚುಕ್ಕಾಣಿ ಅವರ ಕೈ ತಪ್ಪಿ ಹೋಗಿತ್ತು. ಈಗ ಆ ತಪ್ಪು ಮತ್ತೆ ಆಗದಂತೆ ಸಿದ್ಧವಾಗಿದ್ದು, ಇದಕ್ಕಾಗಿ ಭಾರೀ ಸಿದ್ಧತೆ ಮಾಡಿದ್ದಾರೆ.
ಲೋಕಸಭಾ ಹಾಗೂ ಸ್ಥಳೀಯ ಚುನಾವಣೆ ಘೋಷಣೆಯಾಗಿದ್ದು, ಇದರ ಮೇಲೆ ಕಣ್ಣಿಟ್ಟಿರುವ ಅವರು, ಈ ಬಾರಿ ಮಾತ್ರ ಬಹುಮತ ಗೆಲ್ಲಲ್ಲೇಬೇಕೆಂಬ ಹುಮ್ಮಸ್ಸಿನಲ್ಲಿದ್ದಾರೆ ಇದಕ್ಕಾಗಿ ಮತ್ತೆ ರಾಜ್ಯ ಪ್ರವಾಸಕ್ಕೆ ಸಿದ್ಧತೆ ನಡೆಸಿದ್ದು, ಇಂದಿನಿಂದ ತಮ್ಮ ರಾಜ್ಯ ಪ್ರವಾಸ ಕೈಗೊಳ್ಳಲಿದ್ದು, ಮೈತ್ರಿ ಸರ್ಕಾರದ ವಿರುದ್ಧ ಸಮರ ಸಾರಲು ಸಜ್ಜಾಗಿದ್ದಾರೆ.
ಪ್ರತ್ಯೇಕ ಉತ್ತರ ಕನ್ನಡ ಜಿಲ್ಲೆಯ ಕಾವು ಹೆಚ್ಚಿರುವ ಹಿನ್ನಲೆ ಇದರ ಲಾಭಾ ಪಡೆಯುವ ಉದ್ದೇಶದಿಂದಾಗಿ ಅವರು ಇಂದಿನಿಂದ ಬೀದರ್ ಕ್ಷೇತ್ರದಿಂದಲೇ ತಮ್ಮ ರಾಜ್ಯ ಪ್ರವಾಸ ನಡೆಸಲಿದ್ದಾರೆ.
ರಾಜ್ಯ ಪ್ರವಾಸದ ಮೊದಲ ದಿನವಾದ ಇಂದು ಕಲ್ಯಾಣನಾಡು ಬೀದರ್ ನ ಪ್ರಸಿದ್ಧ ಶ್ರೀ ಪಾಪನಾಶಿನಿ ದೇವಸ್ಥಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಹಾಗೂ ಜಿಲ್ಲೆಯ ನಾಯಕರ ನೇತೃತ್ವದಲ್ಲಿ ಭೇಟಿನೀಡಿ ವಿಶೇಷವಾಗಿ ಪೂಜೆ ಸಲ್ಲಿಸಿ ಪ್ರವಾಸ ಪ್ರಾರಂಭಿಸಲಾಯಿತು.
ವಿಧಾನಸಭಾ ಚುನಾವಣೆಯಲ್ಲಾದ ತಪ್ಪುಗಳಿಂದ ಎಚ್ಚೆತ್ತುಕೊಂಡಿರುವ ಬಿಜೆಪಿ ನಾಯಕರು ಮತ್ತೆ ರಾಜ್ಯ ಪ್ರವಾಸ ಮಾಡುವ ಮೂಲಕ ಮತದಾರರ ಓಲೈಕೆಗೆ ಸಜ್ಜಾಗಿದ್ದಾರೆ. ಈ ವೇಳೆ ಸಂಪೂರ್ಣ ಸಾಲಮನ್ನಾ, ಬಜೆಟ್ ನಿಂದ ಆಗಿರುವ ಅನ್ಯಾಯ, ಪ್ರತ್ಯೇಕ ಉತ್ತರ ಕರ್ನಾಟಕದ ಕೂಗು ಮೊದಲಾದ ವಿಷಯಗಳ ಕುರಿತು ಜನರಿಗೆ ಮನವರಿಕೆ ಮಾಡಿ, ಅದರ ಲಾಭ ಪಡೆಯಲು ಕಮಲ ಪಡೆ ನಿರ್ಧರಿಸಿದೆ.
