ಜೆಡಿಎಸ್ ಪಕ್ಷ ಉಳಿಸುವ ಶಕ್ತಿ ಕಾರ್ಯಕರ್ತರಿಗೆ ಇದೆ : ಎಚ್ಡಿ ದೇವೇಗೌಡ -Vishwanews24
ಜೆಡಿಎಸ್ ಪಕ್ಷ ಉಳಿಸುವ ಶಕ್ತಿ ಕಾರ್ಯಕರ್ತರಿಗೆ ಇದೆ ..
ನನ್ನ ಪಕ್ಷವನ್ನು ಹೇಗೆ ತರುವುದು ನನಗೆ ಗೊತ್ತಿದೆ..
ನಮ್ಮಲ್ಲಿ ಹೆಣ್ಣು ಮಕ್ಕಳು ಪಕ್ಷ ಸಂಘಟನೆ ಮಾಡಲು ಮುಂದಾಗಿದ್ದಾರೆ..
ಬೆಂಗಳೂರು: ಪ್ರಾದೇಶಿಕ ಪಕ್ಷದ ಬಗ್ಗೆ ಲಘುವಾಗಿ ಮಾತನಾಡ್ತಾರೆ. ದೇವೇಗೌಡರು ಹೋದರೆ ಜೆಡಿಎಸ್ ಪಕ್ಷ ಹೋಗುತ್ತದೆ ಎಂದು ವ್ಯಂಗ್ಯ ಮಾಡ್ತಾರೆ. ಯಾಕ್ ಹೋಗುತ್ತೆ. ಈ ಪಕ್ಷ ಉಳಿಸುವ ಶಕ್ತಿ ಕಾರ್ಯಕರ್ತರಿಗೆ ಇದೆ. ಆ ಶಕ್ತಿಯನ್ನು ಹೆಚ್ಚು ಮಾಡುವ ಕೆಲಸ ನಾವು ಮಾಡಬೇಕು ಎಂದು ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಆಯೋಜಿಸಿದ್ದ ಜೆಡಿಎಸ್ ಮಹಿಳಾ ಸಮಾವೇಶದಲ್ಲಿ ಮಾತನಾಡಿದ ಅವರು, ಲಘುವಾಗಿ ಮಾತನಾಡುವವರ ಬಗ್ಗೆ ನಾನು ಮಾತನಾಡುವುದಿಲ್ಲ. ನನ್ನ ಪಕ್ಷವನ್ನು ಹೇಗೆ ತರುವುದು ನನಗೆ ಗೊತ್ತಿದೆ. ಕಾಲು ನೋವು ಇದೆ ಎಂದು ಹೆದರಬೇಡಿ. ಪ್ರತಿ ಜಿಲ್ಲೆಗಳಿಗೆ ಹೋಗ್ತಿನಿ, ಯಾರು ಪಕ್ಷದ ಸದಸ್ಯತ್ವ ತೆಗೆದುಕೊಳ್ಳುವುದಿಲ್ಲವೋ ಅವರಿಗೆ ನಾನು ಬಿ ಫಾರ್ಮ್ ಕೊಡುವುದಿಲ್ಲ ಎಂದರು.
ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ ಪೈಕಿ ಕನಿಷ್ಠ 9 ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಟಿಕೆಟ್ ನೀಡುತ್ತೇವೆ. ಅವರು ಎಷ್ಟಾದರೂ ಮತ ಪಡೆಯಲಿ. ಮುಂದೆ ಅವರೇ ಕ್ಷೇತ್ರದಲ್ಲಿ ಬೆಳೆಯುತ್ತಾರೆ. ಹೀಗಾಗಿ ಮಹಿಳೆಯರು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ. ನಾನು ಟಿಕೆಟ್ ನೀಡುತ್ತೇನೆ. ಹಣವಿಲ್ಲ ಎಂದು ಸುಮ್ಮನೆ ಹಿಂಜರಿಕೆ ಬೇಡ ಎಂದು ಹೇಳಿದರು.
ಜೆಡಿಎಸ್ಗೆ ಶಕ್ತಿ ತುಂಬಬೇಕು ಎಂದು ಕುಮಾರಸ್ವಾಮಿ ಹಾಗೂ ಪಕ್ಷದ ಅಧ್ಯಕ್ಷರು ಪಕ್ಷ ಸಂಘಟನೆಗೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಪಕ್ಷದ ಶಾಸಕರು ಎಷ್ಟು ಶ್ರಮಪಡುತ್ತಿದ್ದಾರೆ ಎಂಬುದನ್ನು ನಾನು ಗಮನಿಸಿದ್ದೇನೆ. ಪಕ್ಷಕ್ಕೆ ನಾವು ಹೇಗೆ ಸಂಘಟನೆ ದೃಷ್ಟಿಯಿಂದ ಹೋರಾಟ ಮಾಡ್ಬೇಕು ಎಂದು ಯೋಚನೆ ಮಾಡಿ ಬೆಂಗಳೂರು ಮಹಿಳಾ ಸಮಾವೇಶ ಮಾಡಲು ಸೂಚನೆ ಕೊಟ್ಟಿದ್ದೆ. ನಮ್ಮಲ್ಲಿ ಹೆಣ್ಣು ಮಕ್ಕಳಿದ್ದಾರೆ. ಪಕ್ಷ ಸಂಘಟನೆ ಮಾಡಲು ಮುಂದಾಗಿದ್ದಾರೆ ಎಂದರು.
