ಜೈ ಶ್ರೀ ರಾಮ್‌ ಎಂದು ಘೋಷಣೆ ಕೂಗುತ್ತೇನೆ ಧೈರ್ಯವಿದ್ದರೆ ನನ್ನನ್ನು ಬಂಧಿಸಿ : ದೀದಿ ಭದ್ರಕೋಟೆಯಲ್ಲಿ ಪ್ರಧಾನಿ ಮೋದಿ ಸವಾಲು -Vishwanews24

Featured, ರಾಷ್ಟ್ರ ನ್ಯೂಸ್

ಹೊಸದಿಲ್ಲಿ: ‘ಪಶ್ಚಿಮ ಬಂಗಾಲದ ನೆಲದಲ್ಲಿ ಜೈ ಶ್ರೀ ರಾಮ್‌ ಎಂದು ಘೋಷಣೆ ಕೂಗುತ್ತೇನೆ. ಧೈರ್ಯವಿದ್ದರೆ ನನ್ನನ್ನು ಬಂಧಿಸಿ’. ಹೀಗೆಂದು ತೃಣಮೂಲ ಕಾಂಗ್ರೆಸ್‌ ನಾಯಕಿ ಮಮತಾ ಬ್ಯಾನರ್ಜಿಗೆ ಸವಾಲು ಹಾಕಿದ್ದು ಪ್ರಧಾನ ಮಂತ್ರಿ ನರೇಂದ್ರ ಮೋದಿ. ಸಿಎಂ ಮಮತಾ ಅವರ ಬೆಂಗಾವಲು ವಾಹನಗಳು ಸಾಗುವಾಗ ‘ಜೈ ಶ್ರೀ ರಾಮ್‌’ ಎಂದು ಘೋಷಣೆ ಕೂಗಿದ ಮೂವರು ಯುವಕರನ್ನು ಪೊಲೀಸರು ವಶಕ್ಕೆ ಪಡೆದ ಘಟನೆಯ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಸೋಮವಾರ ದೀದಿಯ ಭದ್ರಕೋಟೆಯಲ್ಲೇ ನಿಂತು ಇಂಥ ಸವಾಲು ಹಾಕಿದ್ದಾರೆ.

ಪ.ಬಂಗಾಲದ ಜಾರ್‌ಗ್ರಾಮ್‌ನಲ್ಲಿ ಸೋಮವಾರ ಪ್ರಚಾರ ರ್ಯಾಲಿ ನಡೆಸಿದ ಪ್ರಧಾನಿ ಮೋದಿ, ‘ಜೈ ಶ್ರೀ ರಾಮ್‌ ಎಂದು ಘೋಷಣೆ ಕೂಗಿದ್ದಕ್ಕೆ ಕೆಲವರನ್ನು ಸ್ಪೀಡ್‌ಬ್ರೇಕರ್‌ ದೀದಿ ಜೈಲಿಗಟ್ಟಿದ್ದಾರೆ. ಇಂದು ಇದೇ ಸ್ಥಳದಲ್ಲಿ ನಿಂತು ನಾನೂ ಅದೇ ಘೋಷಣೆ ಕೂಗುತ್ತೇನೆ. ತಾಕತ್ತಿದ್ದರೆ ಅವರು ನನ್ನನ್ನೂ ಬಂಧಿಸಲಿ. ಆ ಮೂಲಕವಾದರೂ ಟಿಎಂಸಿಯ ದರ್ಪದ ಆಡಳಿತದಿಂದ ಪ.ಬಂಗಾಲದ ಜನರಿಗೆ ರಕ್ಷಣೆ ದೊರೆಯಲಿ’ ಎಂದಿದ್ದಾರೆ.

ಇದೇ ವೇಳೆ, ರಾಮಾಯಣ ಹಾಗೂ ಮಹಾಭಾರತ ಕುರಿತು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಆಡಿರುವ ಮಾತುಗಳ ವಿರುದ್ಧವೂ ಗುಡುಗಿದ ಮೋದಿ, ‘ಹಿಂದೂ ಧರ್ಮದ ವಿರುದ್ಧ ಅವ ಹೇಳನಕಾರಿ ಪದ ಬಳಕೆ ಮಾಡುವುದು ಕಮ್ಯೂನಿಸ್ಟರಿಗೆ ಫ್ಯಾಷನ್‌ ಆಗಿಬಿಟ್ಟಿದೆ’ ಎಂದಿದ್ದಾರೆ. ಇತ್ತೀಚೆಗೆ ಯೆಚೂರಿ ಅವರು, ರಾಮಾಯಣ- ಮಹಾಭಾರತವು ಹಿಂಸೆಯ ಘಟನೆಗಳಿಂದ ಕೂಡಿವೆ ಎಂದಿದ್ದರು.