ತಮಿಳು ಚಿತ್ರರಂಗದ ಖ್ಯಾತ ಸಿನಿಮಾಟೋಗ್ರಾಫರ್, ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಸಳಿಯನ್ ನಿಧನ – vishwanews24
ತಮಿಳು ಚಿತ್ರರಂಗದ ಖ್ಯಾತ ಸಿನಿಮಾಟೋಗ್ರಾಫರ್, ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಸಳಿಯನ್ ನಿಧನ
ಚೆನ್ನೈ: ತಮಿಳು ಚಿತ್ರರಂಗದ ಖ್ಯಾತ ಸಿನಿಮಾಟೋಗ್ರಾಫರ್, ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಸಳಿಯನ್ ಅವರು ನಿಧನರಾಗಿದ್ದಾರೆ. ಅವರಿಗೆ 57 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ವರ್ಷಗಳಿಂದ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಜುಲೈ 10ರ ರಾತ್ರಿ ಕೊನೆಯುಸಿರೆಳೆದಿದ್ದಾರೆ.
ಸಳಿಯನ್ ಅವರ ನಿಧನದಿಂದ ತಮಿಳು ಚಿತ್ರರಂಗದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಇಂದು (ಜುಲೈ 11) ಬೆಳಗ್ಗೆಯಿಂದಲೇ ಚಿತ್ರರಂಗದ ಅನೇಕ ಗಣ್ಯರು ಅವರ ನಿವಾಸಕ್ಕೆ ಭೇಟಿ ನೀಡಿ ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದ್ದಾರೆ. 2007ರಲ್ಲಿ ಬಿಡುಗಡೆಯಾದ ತಮನ್ನಾ ಭಾಟಿಯಾ ಅಭಿನಯದ ‘ಕಲ್ಲೂರಿ’ ಚಿತ್ರದ ಮೂಲಕ ಸಳಿಯನ್ ಸಿನಿಮಾಟೊಗ್ರಾಫರ್ ಆಗಿ ಚಿತ್ರರಂಗ ಪ್ರವೇಶಿಸಿದ್ದರು. ಬಳಿಕ ‘ಪರದೇಸಿ’, ‘ತರೈ ತಪ್ಪಟ್ಟೈ’, ‘ಜೋಕರ್’, ‘ಸವಾರಿ’ ಸೇರಿದಂತೆ ಹಲವು ಪ್ರಶಂಸಿತ ಚಿತ್ರಗಳಿಗೆ ಕ್ಯಾಮೆರಾ ಹಿಡಿದು ತಮ್ಮ ವಿಶಿಷ್ಟ ಛಾಯಾಗ್ರಹಣದ ಮೂಲಕ ಗುರುತಿಸಿಕೊಂಡಿದ್ದರು.
ವೈವಿಧ್ಯಮಯ ಕಥಾಹಂದರ ಮತ್ತು ನೈಜ ಚಿತ್ರಕಥೆ ಹೊಂದಿದ ಸಿನಿಮಾಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡುವುದರಲ್ಲಿ ಅವರು ವಿಶೇಷ ಖ್ಯಾತಿ ಪಡೆದಿದ್ದರು. ಸಿನಿಮಾಟೊಗ್ರಾಫರ್ ಆಗಿರುವುದರ ಜೊತೆಗೆ ನಿರ್ದೇಶಕರಾಗಿಯೂ ಗುರುತಿಸಿಕೊಂಡಿದ್ದ ಸಳಿಯನ್, 2019ರಲ್ಲಿ ಬಿಡುಗಡೆಯಾದ ‘ಟು ಲೆಟ್’ ಚಿತ್ರವನ್ನು ನಿರ್ದೇಶಿಸಿದ್ದರು. ಚೆನ್ನೈನಲ್ಲಿ ಬಾಡಿಗೆ ಮನೆ ಹುಡುಕುವ ಮಧ್ಯಮ ವರ್ಗದ ಕುಟುಂಬದ ಕಥೆಯನ್ನು ಒಳಗೊಂಡಿದ್ದ ಈ ಚಿತ್ರ ರಾಷ್ಟ್ರ ಪ್ರಶಸ್ತಿಯನ್ನೂ ತನ್ನದಾಗಿಸಿಕೊಂಡಿತ್ತು. ಸಳಿಯನ್ ಅವರ ನಿಧನಕ್ಕೆ ನಿರ್ದೇಶಕರಾದ ಬಾಲ, ಮಿಸ್ಕಿನ್, ಸಸಿಕುಮಾರ್, ಸೀಮಾನ್ ಸೇರಿದಂತೆ ತಮಿಳು ಚಿತ್ರರಂಗದ ಅನೇಕ ಕಲಾವಿದರು ಮತ್ತು ತಂತ್ರಜ್ಞರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಸೌದಿಯಲ್ಲಿ ಹೃದಯಾಘಾತ: ಪಡುಬಿದ್ರಿ ಮೂಲದ ಉದ್ಯಮಿ ನಿಧನ – vishwanews24
