ತಿರುಪತಿ ತಿಮ್ಮಪ್ಪನಿಗೆ 160 ಕೋಟಿ ಮೌಲ್ಯದ 121 ಕೆಜಿ ಚಿನ್ನ ನೀಡಿದ ಚೆನ್ನೈ ಉದ್ಯಮಿ -vishwanews24
ತಿರುಪತಿ ತಿಮ್ಮಪ್ಪನಿಗೆ 160 ಕೋಟಿ ಮೌಲ್ಯದ 121 ಕೆಜಿ ಚಿನ್ನ ನೀಡಿದ ಚೆನ್ನೈ ಉದ್ಯಮಿ
ತಿರುಮಲ : ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ ಸಮ್ಮುಖದಲ್ಲಿ ಇಂದು ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿಗೆ ಚೆನ್ನೈನ ಉದ್ಯಮಿ ವರ್ಧಮಾನ್ ಜೈನ್ ಎಂಬುವವರು 121 ಕೆಜಿ ತೂಕದ ಚಿನ್ನಾಭರಣಗಳನ್ನು ಕಾಣಿಕೆಯಾಗಿ ಅರ್ಪಿಸಿದ್ದಾರೆ.
ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಇತಿಹಾಸದಲ್ಲೇ ಮೊದಲ ಬಾರಿಗೆ ಭಕ್ತರೊಬ್ಬರು ದೇವರಿಗೆ 40 ವಿವಿಧ ಬಗೆಯ ಚಿನ್ನಾಭರಣಗಳನ್ನು ಸಮರ್ಪಿಸುತ್ತಿದ್ದಾರೆ. ಶುಕ್ರವಾರ ನಡೆಯಲಿರುವ ಅಭಿಷೇಕದ ನಂತರ, ಶ್ರೀ ವೆಂಕಟೇಶ್ವರ ಸ್ವಾಮಿಗೆ ಈ ನೂತನ ಚಿನ್ನಾಭರಣಗಳಿಂದ ಅಲಂಕಾರ ಮಾಡಲಾಗುವುದು.
9 ಸೆಟ್ಗಳಲ್ಲಿ ಜೋಡಿಸಲಾದ 45 ಚಿನ್ನಾಭರಣಗಳನ್ನು ಈ ದೇಣಿಗೆ ಒಳಗೊಂಡಿದ್ದು, ಇದರ ಅಂದಾಜು ಮೌಲ್ಯ 160 ಕೋಟಿ ರೂ. ಎಂದು ಸರ್ಕಾರಿ ಮೂಲವೊಂದು ಪಿಟಿಐಗೆ ತಿಳಿಸಿದೆ.
ಟಿಟಿಡಿ ಕೂಡ ಸಾಮಾಜಿಕ ಜಾಲತಾಣದಲ್ಲಿ ಈ ಕಾಣಿಕೆಯ ವಿವರಗಳನ್ನು ಹಂಚಿಕೊಂಡಿದ್ದು, ಚಿನ್ನಾಭರಣಗಳ ತೂಕ 121 ಕೆಜಿ ಇರುವುದನ್ನು ದೃಢಪಡಿಸಿದೆ. ದೇವರನ್ನು ಶಿರದಿಂದ ಪಾದದವರೆಗೆ ಅಲಂಕರಿಸಲು ವಿಶೇಷವಾಗಿ ತಯಾರಿಸಲಾದ ಆಭರಣಗಳಿವು ಎಂದು ದೇವಸ್ಥಾನದ ಪೋಸ್ಟ್ನಲ್ಲಿ ವಿವರಿಸಲಾಗಿದೆ. ಈ ದೇಣಿಗೆಯು ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿಗೆ ನೀಡಲಾದ ಅತಿದೊಡ್ಡ ವೈಯಕ್ತಿಕ ಕಾಣಿಕೆ ಎಂದು ಟಿಟಿಡಿ ಮೂಲಗಳು ಬಣ್ಣಿಸಿವೆ.
ವಿಶೇಷ ತಂಡವೊಂದು ಈ ಚಿನ್ನಾಭರಣಗಳನ್ನು ವಿನ್ಯಾಸಗೊಳಿಸಿ ಸಿದ್ಧಪಡಿಸಿದ್ದು, ಇವುಗಳ ಅಂದಾಜು ಮೌಲ್ಯ ಸುಮಾರು 160 ಕೋಟಿ ರೂ. ಎಂದು ಹೇಳಲಾಗಿದೆ. ಈ ಆಭರಣಗಳನ್ನು ತಿರುಮಲದ ರಂಗನಾಯಕುಲ ಮಂಟಪದಲ್ಲಿ ಪ್ರದರ್ಶನಕ್ಕೆ ಇಡಲಾಗುವುದು. ವರದಿಗಳ ಪ್ರಕಾರ, ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ ಬಳಿ ಈಗಾಗಲೇ ಸುಮಾರು 10 ಟನ್ಗಳಷ್ಟು ಚಿನ್ನದ ಸಂಗ್ರಹವಿದೆ.
ಈ ಬೃಹತ್ ಉಡುಗೊರೆಯಲ್ಲಿ ಒಟ್ಟು 47 ಬಗೆಯ ಚಿನ್ನದ ಆಭರಣಗಳಿವೆ. ಇವುಗಳನ್ನು ವಿಶೇಷವಾಗಿ 9 ಸೆಟ್ಗಳಾಗಿ ಮಾಡಲಾಗಿದೆ. ಇವುಗಳಲ್ಲಿ ಕಿರೀಟ, ವಡ್ಡನ, ಭುಜದ ಆಭರಣಗಳು, ಶಂಖ ಚಿಪ್ಪುಗಳು ಮತ್ತು ಅಭಯ ಹಸ್ತ ಸೇರಿವೆ. ಇವುಗಳನ್ನು ಆಗಮ ಶಾಸ್ತ್ರ ಮತ್ತು ಟಿಟಿಡಿ ಸಂಪ್ರದಾಯಗಳ ನಿಯಮಗಳಿಗೆ ಅನುಸಾರವಾಗಿ ಸುಂದರವಾಗಿ ರಚಿಸಲಾಗಿದೆ.
ವರ್ಧಮಾನ್ ಜೈನ್ ಕುಟುಂಬವು ಶ್ರೀವರಿಗೆ ಈ ರೀತಿ ದಾನ ನೀಡುತ್ತಿರುವುದು ಇದೇ ಮೊದಲಲ್ಲ. ಈ ವರ್ಷ ಮೇ 16 ರಂದು ಅವರು ಟಿಟಿಡಿಗೆ ಎಲೆಕ್ಟ್ರಿಕ್ ಬಸ್ ಅನ್ನು ಸಹ ದಾನ ಮಾಡಿದರು. ಈಗ, ಅವರು 121 ಕೆಜಿ ಚಿನ್ನದ ಆಭರಣಗಳನ್ನು ದಾನ ಮಾಡುವ ಮೂಲಕ ಮತ್ತೊಮ್ಮೆ ಎಲ್ಲರ ಗಮನ ಸೆಳೆದಿದ್ದಾರೆ.
